ದೇಶದಲ್ಲಿ ನಾಳೆ ಮೂರನೇ ಹಂತ ಹಾಗು ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ನಡೆಯಲಿದೆ. ದೇಶದ 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ರಾಜ್ಯದಲ್ಲಿ 14 ಕ್ಷೇತ್ರ, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಛತ್ತೀಸ್ಗಢದ 7, ಮಧ್ಯಪ್ರದೇಶದ 9, ಬಿಹಾರದ 5, ಅಸ್ಸಾಂನಲ್ಲಿ 4, ಪಶ್ಚಿಮ ಬಂಗಾಳ ಮತ್ತು ಗೋವಾದ 2 ಸ್ಥಾನಗಳು ಸೇರಿದಂತೆ ಒಟ್ಟು 93 ಸ್ಥಾನಗಳಿಗೆ ಮತದಾನ ನಡೆಯಲಿದೆ..
ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನವನ್ನು ಸೂಕ್ತ ರೀತಿಯಲ್ಲಿ ನಡೆಸಲು ಚುನಾವಣೆ ಆಯೋಗ ಸಕಲ ತಯಾರಿ ಮಾಡಿಕೊಂಡಿದೆ. ಇವಿಎಂ, ವಿವಿಪ್ಯಾಟ್ಗಳ ಜೊತೆಗೆ ಚುನಾವಣಾ ಸಿಬ್ಬಂದಿ ಈಗಾಗಲೇ ಬೂತ್ಗಳಿಗೆ ತಲುಪಿದ್ದಾರೆ. ಮತದಾನ ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಕೂಡ ಸೂಕ್ತ ರೀತಿಯಲ್ಲಿ ನಡೆದಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕಾಗಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿರುವ ಮತದಾರರು ನಾಳೆ 2ನೇ ಹಂತದ ಮತದಾನದಲ್ಲಿ ಭಾಗಿಯಾಗಲು ಊರುಗಳ ಕಡೆಗೆ ಪ್ರಯಾಣಿಸ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೊರಡುವ ಜನರ ದಂಡೇ ಸೇರಿದೆ. ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ತಮ್ಮ-ತಮ್ಮ ಊರುಗಳತ್ತ ಹೊರಡುವ ಬಸ್ ಹಿಡಿಯಲು ಜನ ಸರ್ಕಸ್ ಮಾಡ್ತಿದ್ದಾರೆ. ಕುಟುಂಬ ಸಮೇತರಾಗಿ ಸ್ವಂತ ಊರಿಗೆ ತೆರಳುತ್ತಿದ್ದಾರೆ. ಹೀಗಾಗಿ ಬಸ್ ಸ್ಟ್ಯಾಂಡ್ ಜನರಿಂದ ತುಂಬಿ ತುಳುಕುತ್ತಿದೆ. ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದಂತೆ BMTC ಬಸ್ ಸೇವೆ ಆರಂಭಿಸಿದೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ರಾಯಚೂರಿಗೆ ಹೊರಟ ಬಸ್ನಲ್ಲಿ ಸೀಟ್ ಇಲ್ಲ ಎಂದಿದ್ದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ, ಎಲ್ಲಾ ಸೀಟ್ಗಳು ಕೂಡ ರಿಸರ್ವೇಶನ್ ಆಗಿದೆ ಹೀಗಾಗಿ ಸೀಟ್ ಇಲ್ಲ ಎಂದ ಕಂಡಕ್ಟರ್ ವಿರುದ್ಧ ಮಹಿಳೆಯರು ಕಿಡಿಕಾರಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಇದೆ. ಹೀಗಾಗಿ ಸೀಟ್ ಇಲ್ಲ ಅಂತಿದ್ದಾರೆ ಎಂದು ಪ್ರಯಾಣಿಕರ ಆರೋಪ ಮಾಡಿದ್ದಾರೆ. ಪ್ರಯಾಣಿಕರನ್ನು ನಿಯಂತ್ರಿಸಲು ಬಸ್ ಕಂಡಕ್ಟರ್ ಹರಸಾಹಸ ಮಾಡುವಂತಾಗಿದೆ. ಬಸ್ ಬಿಡಿ ನಾವು ವೋಟ್ ಹಾಕ್ಬೇಕು ಅಂತಿದ್ದಾರೆ ಪ್ರಯಾಣಿಕರು.






