ಗರ್ಭಿಣಿಯರು ಈಗ ಕೋವಿಡ್ -19 ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಿಸಿದ್ದು ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಹತ್ತಿರದ ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್ ನೇರವಾಗಿ ಹೋಗಿ (ಸಿವಿಸಿ) ಲಸಿಕೆ ಪಡೆಯಬಹುದು ಎಂದು ತಿಳಿಸಿದೆ.
ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ (ಎನ್‌ಟಿಎಜಿಐ) ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯವು ಅನುಮೋದನೆ ನೀಡಿದೆ. ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ, ಆಯ್ಕೆಯಾಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಸ್ತುತ ಈಗ ನಡೆಯುತ್ತಿರುವ ರಾಷ್ಟ್ರೀಯ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದಡಿ ಇದನ್ನು ಕಾರ್ಯಗತಗೊಳಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯಾಕ್ಸಿನೇಷನ್ ಆಯ್ಕೆ ಮಾಡುವ ಗರ್ಭಿಣಿ ಮಹಿಳೆಯರಿಗೆ, ಗರ್ಭಾವಸ್ಥೆಯಲ್ಲಿ ಯಾವುದೇ ಸಮಯದಲ್ಲಿ ದೇಶದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳನ್ನು ಕೋವಿನ್‌ನಲ್ಲಿ ನೋಂದಣಿ ಮಾಡಿದ ನಂತರ ಅಥವಾ ವಾಕ್-ಇನ್ ನೋಂದಣಿಯ ಮೂಲಕ ಹತ್ತಿರದ ಸರ್ಕಾರಿ ಅಥವಾ ಖಾಸಗಿ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಅವರಿಗೆ ಲಸಿಕೆ ನೀಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ಲಿಗೆ ಹೋಗಿ ಅವರು ಲಸಿಕೆಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದಡಿ 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಫಲಾನುಭವಿಗಳಿಗೆ ನೋಂದಣಿ, ವ್ಯಾಕ್ಸಿನೇಷನ್ ನಂತರ ಪ್ರಮಾಣಪತ್ರಗಳ ಉತ್ಪಾದನೆ ಮುಂತಾದ ಕಾರ್ಯವಿಧಾನಗಳು ಒಂದೇ ಆಗಿರುತ್ತವೆ ಎಂದು ಹೇಳಿದೆ.
ಕೆಲವು ದಿನಗಳ ಹಿಂದೆ, ಕೋವಿಡ್ -19 ಲಸಿಕೆಯ ಮೌಲ್ಯ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ಕೌನ್ಸೆಲಿಂಗ್ ಮಾಡುವ ಬಗ್ಗೆ ಮುಂಚೂಣಿ ಕೆಲಸಗಾರರು ಮತ್ತು ವ್ಯಾಕ್ಸಿನೇಟರ್‌ಗಳಿಗೆ ಮಾರ್ಗದರ್ಶನ ನೀಡಲು ಸಚಿವಾಲಯವು ಫ್ಯಾಕ್ಟ್‌ಶೀಟ್ ಸಿದ್ಧಪಡಿಸಿತ್ತು, ಇದರಿಂದ ಅವರು ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಬಹುದು.
ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳ ಮೇಲೆ, ಲಭ್ಯವಿರುವ ಲಸಿಕೆಗಳು ಸುರಕ್ಷಿತವಾಗಿದೆ ಮತ್ತು ವ್ಯಾಕ್ಸಿನೇಷನ್ ಗರ್ಭಿಣಿಯರನ್ನು ಇತರ ವ್ಯಕ್ತಿಗಳಂತೆ ಕೋವಿಡ್ -19 ಸೋಂಕಿನಿಂದ ರಕ್ಷಿಸುತ್ತದೆ ಎಂದು ಸರ್ಕಾರದ ಫ್ಯಾಕ್ಟ್‌ಶೀಟ್ ಹೇಳಿದೆ.
ಗರ್ಭಧಾರಣೆಯಿಂದ ಕೊರೋನಾ ಹೆಚ್ಚಾಗುವುದಿಲ್ಲ. ಅನೇಕ ಗರ್ಭಿಣಿಯರಿಗೆ ಸೋಂಕಿನ ಲಕ್ಷಣಗಳೇ ಇರುವುದಿಲ್ಲ. ಇದ್ದರೂ ಸೌಮ್ಯವಾಗಿರುತ್ತವೆ. ಆದರೆ ಬಳಿಕ ಆರೋಗ್ಯ ನಿಧಾನವಾಗಿ ಹದಗೆಡಲಾರಂಭಿಸುತ್ತದೆ ಹಾಗೂ ಗರ್ಭದಲ್ಲಿರುವ ಭ್ರೂಣದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕೊರೋನಾ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಹೀಗಾಗಿ ಕೊರೋನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈವರೆಗೆ ಶೇ.80ಕ್ಕಿಂತ ಹೆಚ್ಚು ಕೊರೋನಾ ಸೋಂಕಿತ ಗರ್ಭಿಣಿಯರು ಕೊರೋನಾ ಲಕ್ಷಞಣಗಳು ಗಂಭೀರವಿಲ್ಲದೇ, ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಆದರೆ, ಕೆಲ ಪ್ರಕರಣದಲ್ಲಿ ಸೋಂಕು ತೀವ್ರವಾಗಿ ಬಾಧಿಸಿದ್ದೂ ಇದೆ. ಒಂದು ವೇಳೆ ಸೋಂಕು ಹೆಚ್ಚಾದರೆ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ. ಆಗಾಗಿ ಲಸಿಕೆ ಪಡೆಯುವುದು ಸೂಕ್ತ ಎಂದಿದೆ.
ಪ್ರಸ್ತುತ ಗರ್ಭಾವಸ್ಥೆಯಲ್ಲಿ ಮಹಿಳೆಯು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರೆ, ಹೆರಿಗೆಯಾದ ಕೂಡಲೇ ಆಕೆಗೆ ಲಸಿಕೆ ನೀಡಬೇಕು ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಹಿಂದೆ, ಆರೋಗ್ಯ ಸಚಿವಾಲಯವು “ಗರ್ಭಿಣಿಯರು ಅಥವಾ ಗರ್ಭಧಾರಣೆಯ ಬಗ್ಗೆ ಖಚಿತವಾಗಿರದ ಮಹಿಳೆಯರು COVID-19 ಲಸಿಕೆ ಪಡೆಯಬಾರದು” ಎಂದು ಹೇಳಿದ್ದರು. ಏಕೆಂದರೆ ಅವರು ಯಾವುದೇ COVID ಲಸಿಕೆ ಪ್ರಯೋಗಗಳಿಗೆ ಭಾಗವಾಗಿರಲಿಲ್ಲ. ಮೇ 28 ರಂದು ನಡೆದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆಪ್ ಇಮ್ಯುನೈಸೇಶನ್ (ಎನ್‌ಟಿಎಜಿಐ) ಸಭೆಯ ನಂತರ, ಗರ್ಭಿಣಿಯರಿಗೆ “ಮಾನ್ಯತೆ ಸಂಭವನೀಯತೆ ತುಂಬಾ ಹೆಚ್ಚಾಗಿದೆ” ಮತ್ತು ” ಲಸಿಕೆಯಿಂದ ಅಪಾಯವನ್ನು ತಪ್ಪಿಸಬಹುದು” ಎಂಬ ಕಾರಣಕ್ಕೆ ಲಸಿಕೆ ಹಾಕಬೇಕೆಂದು ಶಿಫಾರಸು ಮಾಡಲಾಗಿದೆ.
ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರು ಈ ಹಿಂದೆ ಕೋವಿಶೀಲ್ಡ್, ಕೊವಾಕ್ಸಿನ್, ಸ್ಪುಟ್ನಿಕ್ ವಿ ಮತ್ತು ಮಾಡರ್ನಾ ಎಂಬ ನಾಲ್ಕು ಕೋವಿಡ್-19 ಲಸಿಕೆಗಳು ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.


