ಎಕ್ಸ್ಪ್ರೆಸ್ ಹೈವೇಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ, ಅದೇನು ರೇಸಿಂಗ್ ಟ್ಯ್ರಾಕ್ ಅಲ್ಲ, ಎಕ್ಸ್ಪ್ರೆಸ್ ಹೈವೇಯಷ್ಟೇ, ವಾಹನ ಸವಾರರು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದಾರೆ. ಬೇಜವಾಬ್ದಾರಿತನ, ನಿರ್ಲಕ್ಷ್ಯತನದಿಂದಾಗಿ ಅಪಘಾತ ಸಂಭವಿಸುತ್ತಿವೆ ಅಂತ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನ ನೀಡಿದ್ದಾರೆ. ಬೆಂಗಳೂರು- ಮೈಸೂರು ಹೈವೆಯಲ್ಲಿ ಇತ್ತೀಚೆಗೆ ಸಾವಿನ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರಿಗೆ ಪ್ರಶ್ನೆಗಳನ್ನ ಕೇಳಲಾಗಿತ್ತು. ಈ ವೇಳೆ ಸಂಸದ ಮಹಾಶಯರು ಕೊಟ್ಟ ಉತ್ತರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗ್ತಾ ಇದೆ
ಇತ್ತೀಚೆಗೆ ಮೈಸೂರು-ಬೆಂಗಳೂರು ಹೈವೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗೋದಕ್ಕೆ, ವೇಗದ ಮಿತಿಯನ್ನ ಇಲ್ಲಿ ಹೇರಲಾಗಿಲ್ಲ, ಜೊತೆಗೆ ಎಲ್ಲಿ ಅಪಾಯದ ಸ್ಥಳಗಳಿವೆಯೋ ಇಲ್ಲಿ ವಾಹನ ಸವಾರರು ವೇಗವನ್ನ ನಿಯಂತ್ರಿಸೋದಕ್ಕೆ ಬೇಕಾದ ಮಾರ್ಗ ಸೂಚಿಗಳಿಲ್ಲ, ಈ ಎಕ್ಸ್‌ಪ್ರೆಸ್ ವೇ ಸಂಪೂರ್ಣವಾಗಿ ವೈಜ್ಞಾನಿಕವಾಗಿ ನಿರ್ಮಾಣಗೊಳ್ಳದಿರುವುದೇ ಸಾವಿನ ಸಂಖ್ಯೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಈ ಆರೋಪಕ್ಕೆ ಪೂರಕವಾಗಿಯೇ ಈ ಎಕ್ಸ್‌ಪ್ರೆಸ್ ವೇ ಇದೆ, ಆದರೆ ಈ ಆರೋಪಗಳನ್ನ ತಳ್ಳಿ ಹಾಕಿರುವ ಸಂಸದ ಪ್ರತಾಪ್ ಸಿಂಹ ಅಪಘಾತಗಳಿಗೆ ವಾಹನ ಸಾವರಾರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿ ವಿವಾದ ಸೃಷ್ಠಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ 120 KM ವೇಗದಲ್ಲಿ ವಾಹನ ಸಂಚರಿಸಲು ಹೈವೇ ನಿರ್ಮಿಸಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ 80-100 ಕಿ.ಮೀ ವೇಗದಲ್ಲಿ ಸಂಚರಿಸಿದ್ರೂ, ಒಂದೂವರೆ ಗಂಟೆಯಲ್ಲಿ ಮೈಸೂರು-ಬೆಂಗಳೂರು ತಲುಪಬಹುದು ಆದ್ರೆ, ಸವಾರರು ಈ ಮಿತಿಯನ್ನ ಮೀರಿ ವಾಹನ ಚಲಾಯಿಸ್ತಿದ್ದಾರೆ, ಅದರಲ್ಲೂ ಕಾರುಗಳು ನಿಯಂತ್ರಣಕ್ಕೆ ಸಿಗದೇ ಅಪಘಾತ ಸಂಭವಿಸ್ತಿವೆ. ಕೆಲ ಸವಾರರಿಗೆ ಹೈವೇಗೆ ಇಳಿಯುತ್ತಿದ್ದಂತೆ ಹುಮ್ಮಸ್ಸು ಬಂದು ಬಿಡುತ್ತದೆ, ಹುಚ್ಚು ಬಂದಂತೆ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸ್ತಿವೆ, ಹೈವೇ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವುದು ಸಾಬೀತಾದರೆ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನ ಕರೆಸುತ್ತೇನೆ, ಸಂಪೂರ್ಣವಾಗಿ ಹೈವೇ ಅಭಿವೃದ್ಧಿ ಪಡಿಸಲು 8-10 ತಿಂಗಳು ಬೇಕಾಗಲಿದೆ. 30 KMಗೆ ಒಂದರಂತೆ ಆಂಬ್ಯುಲೆನ್ಸ್, ಟೋಯಿಂಗ್ ವಾಹನ ವ್ಯವಸ್ಥೆ ಮಾಡ್ತೇವೆ. ಹೈವೇಯಲ್ಲಿ ದ್ವಿಚಕ್ರ-ತ್ರಿಚಕ್ರ ವಾಹನಗಳಿಗೆ ಅವಕಾಶ ನೀಡುವುದಿಲ್ಲ ಅಂತ ಹೇಳಿಕೆಯನ್ನ ನೀಡಿದ್ದಾರೆ.
ಒಟ್ಟಾರೆಯಾಗಿ ಸಂಸದ ಪ್ರತಾಪ್ ಸಿಂಹ ಇತ್ತೀಚೆಗಿನ ದಿನಗಳಲ್ಲಿ ಒಂದಲ್ಲ ಒಂದು ರೀತಿಯಾದ ವಿವಾದಗಳನ್ನ ತಮ್ಮ ಮೈಮೇಲೆ ಎಳೆದುಕೊಳ್ಳುವುದಿದ್ದು, ಅವರ ಹಲವು ಹೇಳಿಕೆಗೆ ಸಾರ್ವಜನಿಕ ವಲಯ ಮಾತ್ರವಲ್ಲದೆ ಅವರ ಸ್ವಪಕ್ಷದಿಂದಲೂ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ಈಗ ಅವರು ನೀಡಿರುವ ಹೇಳಿಕೆ ಬಗ್ಗೆ ಕೆಲ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಎಲ್ಲವೂ ಹೈವೆಯಲ್ಲಿ ವಾಹನ ಚಲಾಯಿಸುವವರದ್ದೇ ತಪ್ಪು ಅಂತ ಹೇಳೋದಾದ್ರೆ, ಅಪಾಯದ ಜಾಗಗಳಲ್ಲಿ ಯಾಕೆ ವೇಗ ನಿಯಂತ್ರಕ ವ್ಯವಸ್ಥೆಗಳನ್ನ ಅಳವಡಿಸಲಾಗಲಿಲ್ಲ ಎಂಬ ಪ್ರಶ್ನೆಗಳನ್ನ ಕೇಳಲಾಗುತ್ತಿದೆ. ಆದ್ರೆ ಇದಕ್ಕೆ ಭಾಗಶಃ ಸಂಸದರ ಬಳಿ ಉತ್ತರ ಇರೋದು ಅನುಮಾನ ಎನ್ನಲಾಗ್ತಿದೆ..