
ಸಂಸದ ಪ್ರಜ್ವಲ್ ರೇವಣ್ಣರನ್ನು ಅಮಾನತ್ತು ಮಾಡಿ ಎಂದ ಶಾಸಕ
ಬೆಂಗಳೂರು :- ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಎಂದು ಶಾಸಕ ಶರಣಗೌಡ ಕಂದಕೂರ್ ಜೆಡಿಎಸ್‌ನ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಹೀಗಾಗಿ, ಮೊದಲು ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತ್ತು ಮಾಡುವಂತೆ ಕಂದಕೂರ್ ಪತ್ರ ಬರೆದಿದ್ದಾರೆ.

ಇನ್ನು ಶಾಸಕ ಶರಣಗೌಡ ಕಂದಕೂರ್ ಪತ್ರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಸನ ಸೇರಿದಂತೆ ಹಲವಾರು ಕಡೆಗಳಲ್ಲಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ ಇದು ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಮುಜುಗರ ತರುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದೆ. ಪ್ರಜ್ವಲ್ ರೇವಣ್ಣರ ನಡೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಯಾವ ನಾಯಕರು ತಲೆ ಎತ್ತಿಕೊಂಡು ಓಡಾಡುವಂತಿಲ್ಲ. ಹೀಗಾಗಿ, ಮೊದಲು ಅವರನ್ನು ಪಕ್ಷದಿಂದ ಅಮಾನತ್ತು ಮಾಡಿ ಎಂದು ಶರಣಗೌಡ ಕಂದಕೂರ್ ಆಗ್ರಹಿಸಿದ್ದಾರೆ.