ಪ್ರಜ್ವಲ್ ಪ್ರಕರಣ ಕುರಿತು ಬಿಜೆಪಿಯ ಧೀಮಂತ ನಾಯಕರ ಮೌನವೇಕೆ?: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ
ಬೆಳಗಾವಿ: ಇಡೀ ದೇಶವೇ ತಲೆ ತಗ್ಗಿಸುವಂಥ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ? ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಭಾರೀ ಆಸಕ್ತಿ ತೋರಿಸಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಬೆಳಗಾವಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರೇ ಈಗಲೂ ಸಂತ್ರಸ್ತ ಮಹಿಳೆಯರ ಪರ ಧ್ವನಿ ಎತ್ತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮಹಿಳೆಯರಿಗೆ ಎಲ್ಲೇ ಅನ್ಯಾಯವಾದರೂ ನಾವು ಖಂಡಿಸುತ್ತೇವೆ. ಅವರ ಪರವಾಗಿ ನಿಲ್ಲುತ್ತೇವೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ರಾಜಕೀಯ ಬೆರೆಸಲು ನಾವು ಹೋಗುವುದಿಲ್ಲ. ಆದರೆ ಹುಬ್ಬಳ್ಳಿ ಪ್ರಕರಣದಲ್ಲಿ ಅತೀವ ಆಸಕ್ತಿ ತೋರಿಸಿದ್ದ ಬಿಜೆಪಿ ನಾಯಕರು ಈಗೇಕೆ ಮೌನವಾಗಿದ್ದಾರೆ.

ಇಲ್ಲೂ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆಯಲ್ಲವೇ? ಈಗಲೂ ಸಂಸದೆ ಮಂಗಲಾ ಅಂಗಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಿ. ಜಗದೀಶ ಶೆಟ್ಟರ್ ಅಷ್ಟೇ ಆಸಕ್ತಿಯಿಂದ ಹೇಳಿಕೆಗಳನ್ನು ನೀಡಲಿ ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಏನು ಹೇಳ್ತೀರಾ ನಾರಿ ಶಕ್ತಿ, ನಾರಿ ಸಮ್ಮಾನ್, ಬೇಟಿ ಬಚ್ಚಾವ್, ಬೇಟಿ ಪಡಾವ್ ಅಂತ ಹೇಳುವ ಬಿಜೆಪಿಗರು, ಈಗ ಯಾಕೆ ಮೌನವಾಗಿದ್ದಾರೆ. ಮಾತು ಆಡಿದರೆ ಕರ್ನಾಟಕ ಸರ್ಕಾರವನ್ನು ಟೀಕಿಸುವ ಮೋದಿಜೀ ಅವರ ಈಗಿನ ನಿಲುವೇನು? ಇಲ್ಲಿನ ಸಂತ್ರಸ್ತ ಮಹಿಳೆಯರ ಮಾಂಗಲ್ಯದ ಕತೆಯೇನು? ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಪ್ರಶ್ನೆ ಕೇಳ್ತಾ ಇದ್ದೀನಿ ಎಂದು ಹೇಳಿದರು.
ಕಾನೂನು ಚೌಕಟ್ಟಿನಡಿ ಕ್ರಮ
ವಿದೇಶದಿಂದ, ಹೊರ ರಾಜ್ಯಗಳಿಂದ ಫೋನ್ ಕಾಲ್ ಗಳು ಬರುತ್ತಿವೆ. ಇಂತಹ ಪ್ರಕರಣ ನಡೆದಿದ್ದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಸರಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಲೇ ಎಸ್ ಐಟಿ ತನಿಖೆಗೆ ವಹಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿಯ ಮಹಿಳಾ ಮಣಿಗಳು ಎಲ್ಲಿದ್ದಾರೆ. ಸಂಸದೆ ಮಂಗಲಾ ಅಂಗಡಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗಬೇಕು, ನೇಹಾ ಹಿರೇಮಠ ವಿಷಯದಲ್ಲಿ ಮಾತಾಡಿದಂತೆ ಜಗದೀಶ್ ಶೆಟ್ಟರ್ ಅವರು ಮಾತಾಡಬೇಕು. 16 ವರ್ಷದಿಂದ 50, 60 ವರ್ಷದ ಮಹಿಳೆಯರು ಪ್ರಜ್ವಲ್ ರೇವಣ್ಣ ಅವರಿಂದ ನೊಂದಿದ್ದಾರೆ. ಮಹಿಳೆಯರ ಪರ ಮೈತ್ರಿ ನಾಯಕರು ನಿಲ್ಲಲಿ ಎಂದು ಹೇಳಿದರು.