ಹಾಸನ: ಕರ್ನಾಟಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪ್ರಜ್ವಲ್ ರೇವಣ್ಣ ಸಂಬಂಧಿತ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಪೆನ್‌ಡ್ರೈವ್ ಮೂಲಕ ವಿಡಿಯೋ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಸನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವಿಸ್ತೃತ ಚಾರ್ಜ್‌ಶೀಟ್ ಸಲ್ಲಿಸಿದೆ.ಒಟ್ಟು 13,712 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ 52 ಜನರ ಹೆಸರು ಉಲ್ಲೇಖವಾಗಿದೆ. ಇವರಲ್ಲಿ 39 ಜನರ ವಿರುದ್ಧ ಆರೋಪಗಳು ಸಾಬೀತಾಗಿವೆ ಎಂದು ಎಸ್‌ಐಟಿ ತಿಳಿಸಿದೆ.

2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ತನಿಖೆಯ ವೇಳೆ ಹಾಸನದಲ್ಲೇ ಸುಮಾರು 70 ಪೆನ್‌ಡ್ರೈವ್‌ಗಳನ್ನು ಖರೀದಿಸಿ ವಿಡಿಯೋ ಹಂಚಿಕೆ ನಡೆಸಲಾಗಿದೆ ಎಂಬುದು ಬಹಿರಂಗವಾಗಿದೆ. ಈ ಸಂಬಂಧ 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ತಾಂತ್ರಿಕ ಸಾಕ್ಷ್ಯಗಳು ಮತ್ತು ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ಆಧರಿಸಿ ಆರೋಪಗಳನ್ನು ದೃಢಪಡಿಸಲಾಗಿದೆ.

ಪ್ರಕರಣದಲ್ಲಿ ಎ1 ನವೀನ್, ಎ2 ಕಾರ್ತಿಕ್ ಎನ್, ಎ3 ಚೇತನ್ ಬಿಸಿ, ಎ4 ಚೇತನ್ ವೈ ಎಸ್, ಎ5 ಲಿಖಿತ್ ಗೌಡ ಸೇರಿದಂತೆ ಒಟ್ಟು 39 ಮಂದಿಯ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ಈ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೇರಿದ ಕೆಲ ಕಾರ್ಯಕರ್ತರ ಹೆಸರುಗಳೂ ಸೇರಿವೆ.ಮಹಿಳೆಯರ ಸಮ್ಮತಿಯಿಲ್ಲದೆ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ, ಅವನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳನ್ನು ತನಿಖಾ ತಂಡ ದೃಢಪಡಿಸಿದೆ. ಕೆಲ ಆರೋಪಿಗಳು ತಮ್ಮ ಮೊಬೈಲ್‌ಗಳಿಂದಲೇ ವಿಡಿಯೋಗಳನ್ನು ಹಂಚಿರುವುದೂ ಪತ್ತೆಯಾಗಿದೆ.

ಇನ್ನೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಅವರ ಹೆಸರು ಮೊದಲು ಕೇಳಿಬಂದಿದ್ದರೂ, ಇತ್ತೀಚಿನ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಸೇರಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ನ್ಯಾಯಾಂಗ ಪ್ರಕ್ರಿಯೆ ಹಾಗೂ ತನಿಖೆಯ ಬೆಳವಣಿಗೆಗಳತ್ತ ಗಮನ ಹರಿಸಲಾಗಿದೆ.
ಈ ಸುದ್ದಿ ಓದಿ






