ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ಇನ್ನಷ್ಟು ತೀವ್ರಗೊಳ್ಳುತ್ತಿದೆ. ದೇವೇಗೌಡರ ಸೊಸೆಯಂದಿರನ್ನು ಚುನಾವಣಾ ರಾಜಕಾರಣದಿಂದ ದೂರ ನಿಲ್ಲಿಸಬೇಕೆಂಬ ಯೋಚನೆಯಿಂದ ಈಗಾಗಲೇ ಅನಿತಾ ಕುಮಾರಸ್ವಾಮಿಗೆ ರಾಮನಗರ ಕ್ಷೇತ್ರದಿಂದ ಟಿಕೆಟ್ ನೀಡದಿರುವ ಹೆಚ್ ಡಿ ಕುಮಾರಸ್ವಾಮಿ ಹಾಸನದಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದಿದ್ದಾರೆ.
ಕುಟುಂಬದಿಂದ ಒಬ್ರೇ ರಾಜಕಾರಣಕ್ಕೆ ಬರಬೇಕಿದ್ರೆ ಸೂರಜ್ ಹಾಗೂ ಪ್ರಜ್ವಲ್ ರನ್ನು ರಾಜಿನಾಮೆ ಕೊಡಿಸುತ್ತೀನಿ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದು, ಅಮ್ಮನಿಗೆ ಟಿಕೆಟ್ ನೀಡದಿದ್ರೆ ತಾನು ರಾಜಿನಾಮೆ ನೀಡುವುದಾಗಿ ದೇವೇಗೌಡರ ಬಳಿ ಪ್ರಜ್ವಲ್ ಹೇಳಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ಹೇಳಿಕೆ ಜೆಡಿಎಸ್ ಪಾಳೆಯದಲ್ಲಿ ಗೊಂದಲದ ವಾತಾವರಣ ನಿರ್ಮಿಸಿದ್ದು, ಚುನಾವಣೆ ಸನ್ನಿಹಿತವಾದ್ರೂ ಗೌಡರ ಕುಟುಂಬದೊಳಗಿನ ಟಿಕೆಟ್ ಬಿಕ್ಕಟ್ಟು ಪರಿಹಾರಗೊಳ್ಳದಿರುವುದು ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ.
ಪ್ರಜ್ವಲ್ ರೇವಣ್ಣರಿಗೆ ಪರೋಕ್ಷವಾಗಿ ನೀಡಿರುವ ಹೆಚ್ ಡಿ ಕುಮಾರಸ್ವಾಮಿ ಯಾವುದೇ ಬ್ಲ್ಯಾಕ್ಮೇಲ್ ತಂತ್ರ ನಡೆಯುವುದಿಲ್ಲ, ನನ್ನ ನಿರ್ಧಾರ ಅಚಲ, ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವುದು ಖಚಿತ, ನನಗೆ ಪಕ್ಷ ಹಾಗೂ ಅದರ ಕಾರ್ಯಕರ್ತರು ಮುಖ್ಯ ಎಂಬ ಸಂದೇಶವನ್ನು ನೀಡಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇರುವಾಗ ಸುಮ್ಮನೆ ಸಾರ್ವಜನಿಕ ಟೀಕೆಗೆ ಒಳಗಾಗುವಂತಹ ಆಯ್ಕೆ ಬೇಡ ಅನ್ನುವ ನನ್ನ ನಿರ್ಧಾರದಲ್ಲಿ ಅಚಲ ಎನ್ನುವುದನ್ನು ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದು, ಪರೋಕ್ಷವಾಗಿ ಭವಾನಿ ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಈ ನಡುವೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು, ಕುತೂಹಲ ಗರಿಗೆದರಿದೆ. ಸ್ವರೂಪ್ ಅವರು ಹಾಸನದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಡಿಕೆ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ರೇವಣ್ಣ ಕುಟುಂಬ ಭವಾನಿ ರೇವಣ್ಣರಿಗೆ ಟಿಕೆಟ್ ನೀಡುವಂತೆ ಎಲ್ಲಾ ಲಾಬಿ ಮಾಡುತ್ತಿದ್ದು, ಹೆಚ್ಡಿಕೆ ವಿರೋಧದ ನಡುವೆಯೂ ಪಕ್ಷದ ಕಿರುಹೊತ್ತಿಗೆಯಲ್ಲಿ ಭವಾನಿ ರೇವಣ್ಣ ಅವರ ಫೋಟೋ ಪ್ರಿಂಟ್ ಹಾಕಿಸಿದೆ. ಜೆಡಿಎಸ್ ಪಕ್ಷದಿಂದ ಜಿಲ್ಲೆಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಇರುವ ಕಿರುಹೊತ್ತಿಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ. 6 ಕ್ಷೇತ್ರಗಳ ಅಭ್ಯರ್ಥಿಗಳ ಜೊತೆಗೆ ಭವಾನಿ ಫೋಟೋ ಕೂಡ ಹಾಕಲಾಗಿದೆ.
ಒಟ್ಟಾರೆ, ಹಾಸನದ ಜೆಡಿಎಸ್ ಟಿಕೆಟ್ ದೇವೇಗೌಡರ ಕುಟುಂಬದೊಳಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೆಚ್ಡಿಕೆ ಹಠ ಗೆಲ್ಲುತ್ತದೋ ರೇವಣ್ಣ ಹಠ ಗೆಲ್ಲುತ್ತದೋ ಎನ್ನುವುದು ಕಾದು ನೋಡಬೇಕಿದೆ.