ಬೆಂಗಳೂರು, ಮಾರ್ಚ್ 19 :
ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸಲ್ಲಿಸಿರುವ ದೋಷಾರೋಪ ಪಟ್ಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಹೆಸರುಗಳು ಹೊರಬಂದಿರುವುದು ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಜೊತೆಗೆ ಜೆಡಿಎಸ್ ಕಾರ್ಯಕರ್ತರ ಹೆಸರೂ ಕಾಣಿಸಿಕೊಂಡಿದ್ದು, ಪಕ್ಷದೊಳಗೆ ತಲ್ಲಣ ಉಂಟಾಗಿದೆ. ಪ್ರಮುಖವಾಗಿ ಶಾಸಕ ಸ್ವರೂಪ್ ಚಿಕ್ಕಪ್ಪ ಹರ್ಷ ಅವರ ಪುತ್ರ ರೇವಂತ್ ಸೇರಿದಂತೆ ತೇಜಸ್, ಎನ್.ಸಿ. ಹರೀಶ್, ಬೂವನಹಳ್ಳಿ ಮಂಜು ಅಲಿಯಾಸ್ ವಸಂತ್ ಕುಮಾರ್, ಬಾಲಸುಬ್ರಹ್ಮಣ್ಯ ಮತ್ತು ಜಯಸೂರ್ಯ ಸೇರಿ ಏಳುಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ವೇಳೆ, ಕೆಲ ಜೆಡಿಎಸ್ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆರೋಪ ಮಾಡಿದ್ದರು. ಆದರೆ ಎಸ್‌ಐಟಿ ತನಿಖೆಯ ನಂತರ ಹೊರಬಂದ ವಿವರಗಳು ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸುವಂತಾಗಿವೆ.ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ ಸೆಕ್ಷನ್ 67ಎ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದ ದೂರುದಾರ ಹಾಗೂ ವಕೀಲ ಪೂರ್ಣಚಂದ್ರ ಪ್ರತಿಕ್ರಿಯಿಸಿ, “ಆರೋಪಿಗಳ ರಾಜಕೀಯ ಹಿನ್ನೆಲೆ ಮುಖ್ಯವಲ್ಲ, ತಪ್ಪಿತಸ್ಥರು ಶಿಕ್ಷೆಗೊಳಗಾಗಬೇಕು” ಎಂದು ತಿಳಿಸಿದ್ದಾರೆ. ಇದೇ ವೇಳೆ, ಕೆಲವು ಜೆಡಿಎಸ್ ಕಾರ್ಯಕರ್ತರ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ, ಈ ಚಾರ್ಜ್‌ಶೀಟ್ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.






