ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಸನ (Hassan ) ಲೋಕಸಭಾ ಕ್ಷೇತ್ರದ ಮುನಿಸು ಶಮನವಾದಂತೆ ಕಾಣುತ್ತಿದೆ . ಬಿಜೆಪಿ ಜೆಡಿಎಸ್ ಮೈತ್ರಿ (BJP-Jds alliance) ಮಾಡಿಕೊಂಡಿದ್ದರು ಸ್ಥಳೀಯವಾಗಿ ಪ್ರಜ್ವಲ್ ರೇವಣ್ಣ (prajwal revanna ) ಪರ ಪ್ರೀತಮ್ ಗೌಡ (Preetham gowda) ಪ್ರಚಾರ ಮಾಡೋದಕ್ಕೆ ಹಿಂದೆಟು ಹಾಕಿದ್ರು , ಕಾರಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರೇವಣ್ಣ ಮತ್ತು ಪ್ರೀತಮ್ ಗೌಡ ಕುಟುಂಬಗಳ ನಡುವೆ ನಡೆದಿದ್ದ ಹಣಾ-ಹಣಿ ರಾಜಕೀಯ ಶತ್ರುತ್ವಕ್ಕೆ ತಿರುಗಿತ್ತು. ಹೀಗಾಗಿ ಜಿಲ್ಲಾಮಟ್ಟದಲ್ಲಿ ಹೊಂದಾಣಿಕೆ ಅಸಾಧ್ಯ ಎನ್ನುವಂತಿತ್ತು.
ಹೀಗಾಗಿಯೇ ಕಳೆದ ಕೆಲವು ದಿನಗಳಿಂದ ಮೈಸೂರು (mysuru) ಭಾಗದಲ್ಲಿ ಬೀಡು ಬಿಟ್ಟಿದ್ದ ಪ್ರೀತಂ ಗೌಡ, ಹಾಸನ ಜಿಲ್ಲೆಯ ಪ್ರಚಾರದಲ್ಲಿ ಭಾಗಿಯಾಗಲ್ವಾ ಎಂಬ ಸಂಶಯ ಮೂಡುವಂತೆ ಮಾಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಎಲ್ಲಾ 28 ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ಭಾಗವಹಿಸ್ತೀನಿ ಅಂತಷ್ಟೇ ಪ್ರೀತಂ ಗೌಡ ಹೇಳಿ ಸುಮ್ಮನಾಗಿದ್ದರು . ಕೊನೆಗೆ ಹಾಸನದ ಈ ಗಲಾಟೆ ಅಮಿತ್ ಶಾ (Amith sha) ರನ್ನ ತಲುಪಿ ,ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನ್ ದಾಸ್ ಮೂಲಕ ಪ್ರೀತಮ್ ಗೌಡ ಮತ್ತು ಟೀಮ್ ಗೆ ಎಚ್ಚರಿಕೆ ರವಾನಿಸಲಾಯಿತು.
ಅಂತಿಮವಾಗಿ ಹೈಕಮಾಂಡ್ ನಾಯಕರ ಎಚ್ಚರಿಕೆಗೆ ಮಣಿದು ,ಇದೀಗ ಪ್ರೀತಮ್ ಗೌಡ ಮತ್ತು ತಂಡ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರಕ್ಕೆ ಮುಂದಾಗಲು ನಿರ್ಧರಿಸಿದ್ದಾರೆ . ಇಂದು ಸುದ್ದಿಗೋಷ್ಠಿ ನಡೆಸಿದ ಪ್ರೀತಂ ಗೌಡ ,ಪ್ರಜ್ವಲ್ ರೇವಣ್ಣ ಪರ ಮತಯಾಚಿಸುವುದಾಗಿ , ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಾವೇ ಸ್ಪಷ್ಟೀಕರಿಸಿದ್ದಾರೆ. ಆ ಮೂಲಕ ಹಾಸನದ ಬಂಡಾಯ ಶಮನವಾದಂತೆ ಕಾಣುತ್ತಿದೆ. ಇನ್ನೇನಿದ್ದರೂ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಬೇಕಿದೆ.