![](https://pratidhvani.com/wp-content/uploads/2024/05/6205_27-11-2017_17-59-48_PRAJWALREVANNA_02-1024x747.webp)
ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಕ್ನಿಂದ ಭಾರತಕ್ಕೆ ಬರುತ್ತಿದ್ದಾರೆ ಅನ್ನೋ ಸುದ್ದಿ ಬಂದಿದೆ. ಇಂದು ಮಧ್ಯರಾತ್ರಿ 12.30ರ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದಾರೆ ಅನ್ನೋದು ಸದ್ಯಕ್ಕಿರುವ ಮಾಹಿತಿ. ಈ ಮಾಹಿತಿಯನ್ನು ಸ್ವತಃ ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ತಿಳಿಸಿದ ಬಳಿಕ ಅಷ್ಟೇ ಎಲ್ಲರಿಗೂ ಗೊತ್ತಾಗಿದ್ದು. ಇದೀಗ ಪ್ರಜ್ವಲ್ ರೇವಣ್ಣ ಬಂದೇ ಬಿಡ್ತಾರಾ..? ಅನುಮಾನ ಎನ್ನುತ್ತಿವೆ ಮೂಲಗಳು. ಈ ಅನುಮಾನಕ್ಕೆ ಕಾರಣ ಏನು..?
ಯಾವುದೇ ಓರ್ವ ಆರೋಪಿ ವಿಚಾರಣೆಗೆ ಕರೆದಾಗ ಹಾಜರಾಗುತ್ತಾನೆ ಎಂದರೆ ಬಂಧನ ಮಾಡುವ ಅವಶ್ಯಕತೆ ಇರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ವಿಚಾರಣೆಗೆ ನೋಟಿಸ್ ಕೊಟ್ಟರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದರೂ ಪ್ರಜ್ವಲ್ನನ್ನು ಬಂಧಿಸಲು SIT ಅಧಿಕಾರಿಗಳು ಸಜ್ಜಾಗಿದ್ದಾರೆ. ಹೀಗಿರುವಾಗ ರಾತ್ರಿ ಬಂಧನ ಆಗಲು ಜರ್ಮನಿಯಿಂದ ಬರ್ತಾರಾ..? ಅನ್ನೋದು ಪ್ರಶ್ನೆ ಮೂಡುತ್ತದೆ. ಇನ್ನೊಂದು ಅಂಶ ಹೀಗನ್ನುತ್ತದೆ..
![](https://pratidhvani.com/wp-content/uploads/2024/05/prajwal-revanna6-1714740300-1.jpg)
ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಮೇ 31ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಅಂದರೆ ನಾಳೆ ಕೋರ್ಟ್ಗೆ SIT ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಅದಕ್ಕೂ ಮೊದಲೇ ಬಂಧನ ಆದರೆ, ಎಸ್ಐಟಿ ಟೀಂ ಆಕ್ಷೇಪಣೆ ಸಲ್ಲಿಸುವ ಅಗತ್ಯತೆ ಬೀಳುವುದಿಲ್ಲ. ಜೊತೆಗೆ ತನಿಖೆ ಎಲ್ಲಿತನ ತಲುಪಿದೆ, ಸಂತ್ರಸ್ತೆಯರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ಅನ್ನೋ ಮಾಹಿತಿಯೂ ತಿಳಿಯುವುದಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿಯೇ ಮಾನ್ಯತೆ ಕಳೆದುಕೊಳ್ಳುತ್ತದೆ. ಹೀಗಿರುವಾಗ ಮಧ್ಯರಾತ್ರಿ ಬಂದು ಬಂಧನ ಆಗ್ತಾರಾ..? ಅನ್ನೋದು ಕೂಡ ಅನುಮಾನಕ್ಕೆ ಕಾರಣ. ಮೂರನೇ ಕಾರಣವೂ ಅನುಮಾನಕ್ಕೆ ಹುಟ್ಟುಹಾಕುತ್ತಿದೆ.
![](https://pratidhvani.com/wp-content/uploads/2024/05/1200-675-19487616-944-19487616-1694446239364-1024x576.jpg)
ಯಾವುದೇ ಆರೋಪಿಯನ್ನು ಪೊಲೀಸರು ಯೋಜನೆ ಮಾಡಿ ಬಂಧಿಸಿದರೆ ವಾರಾಂತ್ಯದಲ್ಲಿ ಬಂಧನ ಮಾಡುತ್ತಾರೆ. ಕಾರಣ ಏನಂದ್ರೆ ಆರೋಪಿಗೆ ನ್ಯಾಯಾಲಯದ ಸಹಾಯ ಪಡೆಯಲು ಸಾಧ್ಯವಾಗದಂತೆ ತಡೆಯಲು ಶುಕ್ರವಾರ ರಾತ್ರಿ ಬಂಧನ ಮಾಡುತ್ತಾರೆ. ಶನಿವಾರ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದರೂ ಕೋರ್ಟ್ ಜಾಮೀನು ಅರ್ಜಿ ಪರಿಗಣಿಸುವುದು ಮರುದಿನ ಅಂದರೆ ಸೋಮವಾರದಂದು. ಸೋಮವಾರ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶ ಕೇಳಿ ಮಂಗಳವಾರಕ್ಕೆ ಅರ್ಜಿ ಮುಂದೂಡಿಕೆ ಆದರೆ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆದು ಗುರುವಾರ ಆದೇಶ ನೀಡಬಹುದು. ಅಲ್ಲೀವರೆಗೂ ವಿಚಾರಣೆಗೆ ಅಡ್ಡಿಯಿರಲ್ಲ, ಅಥವಾ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ. ಹೀಗೆ ಲೆಕ್ಕಾಚಾರ ಹಾಕಿದರೂ ಪ್ರಜ್ವಲ್ ರೇವಣ್ಣಗೆ ಇಂದು ಮಧ್ಯರಾತ್ರಿ ಬಂಧನ ಸಂಕಷ್ಟ ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ ಬರ್ತಾರಾ..? ಬಂಧನ ಆಗ್ತಾರಾ..? ಅನ್ನೋ ಅನುಮಾನ ಕಾಡುತ್ತಿದೆ.
ಕೃಷ್ಣಮಣಿ