
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಆಕ್ಸೆಡೆಂಟ್ ಎಂಎಲ್ಎ ಎಂದು ಬಿಜೆಪಿ ಕಿಡಿಕಾರಿದೆ. ಆಕ್ಸಿಡೆಂಟಲ್ ಎಂಎಲ್ಎ ಪ್ರದೀಪ್ ಈಶ್ವರ್ ಅವರೇ, ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ. ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ!!. ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ!!. ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದು ಚಾಟಿಬೀಸಿದೆ.
ಸಂಸದ ಪಿಸಿ ಮೋಹನ್ ಮಾತನಾಡಿ, ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ ರಾಜ್ಯ ಸರ್ಕಾರ ಮಾಡಿತ್ತು. ಈ ಹಿಂದೆ ಬಸವರಾಜ್ ಬೊಮ್ಮಾಯಿ ಸರ್ಕಾರ ಇದ್ದಾಗಲೇ ಈ ಜಯಂತಿ ಘೋಷಣೆ ಮಾಡಲಾಗಿತ್ತು. ಶುಕ್ರವಾರ ಸಂಜೆ ಜಯಂತಿ ನಡೆಯುವಾಗ ಪ್ರದೀಪ್ ಈಶ್ವರ್ ನನ್ನ ಸರ್ಕಾರ, ನನ್ನ ಕಾರ್ಯಕ್ರಮ ಅಂತಾ ಮಾತಾಡ್ತಿದ್ರು. ಯಾವಾಗ ಅವ್ರು ಲಕ್ಷ್ಮಣ ರೇಖೆ ದಾಟಿದ್ರೋ ಅವಾಗ ನಾನು ಪ್ರಶ್ನೆ ಮಾಡಿದೆ. ಹಿಂದಿನ ಸರ್ಕಾರದಿಂದ ಜಯಂತಿಯ ಕೊಡುಗೆ ಬಗ್ಗೆ ಮಾತಾಡಿದ್ರೆ, ಪ್ರದೀಪ್ ಈಶ್ವರ್ ಗೆ ಏನು ಹೊಟ್ಟೆ ಉರೀ..? ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ಯಾರು ಅವರನ್ನು ರೊಚ್ಚೆಗೇಳಿಸಿಲ್ಲ. ಅಲ್ಲಿನ ಸಭೀಕರು ನನಗೂ ಕೇಳಿದ್ರು. ಆದರೆ ಇದಕ್ಕೆ ಅಷ್ಟೊಂದು ತಲೆಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಕಾರ್ಯಕ್ರಮ ಮಾಡಿದಾಗ ಪಕ್ಷತೀತವಾಗಿ ಎಲ್ಲರನ್ನೂ ಕರೆದಿದ್ವಿ. ಆದರೆ ಈ ಬಾರಿಯ ಕಾರ್ಯಕ್ರಮಕ್ಕೆ ಸಿಎಂ ಆಗಲಿ, ಒಬ್ಬ ಮಂತ್ರಿಯೂ ಬಂದಿಲ್ಲ. ಇವತ್ತು ಕಾಂಗ್ರೆಸ್ ಸರ್ಕಾರ ಏನು ಪರ್ಮನೆಂಟಾ..? ಇನ್ನೂ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಬಲಿಜ ಸಮಾಜವನ್ನು ಈ ಶಾಸಕ ಸೇರಿ ಇಡೀ ಕಾಂಗ್ರೆಸ್ ಕಡೆಗಣಿಸಿದೆ. ಪ್ರದೀಪ್ ಈಶ್ವರ್, ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡರೆ ಒಳ್ಳೆಯದು ಎಂದು ಆಗ್ರಹಿಸಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಅವರು ಏನು ಚಿಕ್ಕಮಗು ಅಲ್ಲ, ವಯಸ್ಸು ಆಗಿದೆ. ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂತು ನನಗೆ ಮೊದಲ ಅನುಭವ. ಅವರು ಮಾತನ್ನು ನೋಡೇ ನನಗೆ ಆಶ್ಚರ್ಯ ಆಯ್ತು. ಅವರು ಶಾಸಕರಾಗಿದ್ದಾರೆ ಅನ್ನೋದನ್ನು ಅರಿತುಕೊಳ್ಳಲಿ ಎಂದಿದ್ದಾರೆ ಸಂಸದ ಪಿಸಿ ಮೋಹನ್. ಕಾಂಗ್ರೆಸ್ ಶಾಸಕನ ಮಾತಿಗೆ ಕಾಂಗ್ರೆಸ್ ನಾಯಕರೇ ಅಸಮಧಾನ ಹೊರಹಾಕಿದ್ದಾರೆ. ಬಹುತೇಕ ಸಚಿವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ, ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯನ ಸರ್ಕಾರವೇ ಆಗಿದ್ದರೂ ಬಳಸುವ ಭಾಷೆ ಸರಿಯಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ – ಪಿ ಸಿ ಮೋಹನ್ ಜಟಾಪಟಿ ವಿಚಾರಕ್ಕೆ ಪ್ರಹ್ಲಾದ್ ಜೋಶಿ ಮಾತನಾಡಿ, ಈ ತರದ ವ್ಯಕ್ತಿ ಮತ್ತು ಅಪ ಶಬ್ದಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಭಾರತ ಸರಕಾರ ಏನಾದರೂ ಕಾರ್ಯಕ್ರಮ ಮಾಡಿದರೆ ಮೋದಿ ಕೊಟ್ಟದ್ದು ಅಂತ ಹೇಳೋಕೆ ಆಗಲ್ಲ. ಭಾರತ ಸರಕಾರದ ಕಾರ್ಯಕ್ರಮ ಅಥವಾ ಕರ್ನಾಟಕ ಸರಕಾರದ ಕಾರ್ಯಕ್ರಮ ಅಂತ ಹೇಳಬೇಕು. ಸರಕಾರದ ದುಡ್ಡಿನಲ್ಲಿ ಮಾಡುವ ಕಾರ್ಯಕ್ರಮ. ನಿಮ್ಮ ಅಪ್ಪಂದಲ್ಲ ಅನ್ನುವ ಈ ರೀತಿಯ ಭಾಷೆ ಸದ್ಯ ರಾಜಕಾರಣಕ್ಕೆ ಶೋಭೆ ತರುವಂತದ್ದಲ್ಲ ಎಂದಿದ್ದಾರೆ.
ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಂತ್ರಿಗಳಾದವರು ತಮ್ಮ ಇಲಾಖೆಯ ಒತ್ತು ಕೊಡಬೇಕು ಅಲ್ಲೆಲ್ಲೋ ಸಮರ್ಥನೆ ಮಾಡಬೇಕಾಗುತ್ತದೆ. ರಾಜಕಾರಣಿಗಳು ವ್ಯವಸ್ಥೆ ಮತ್ತು ಮಿತಿಯನ್ನು ಬಿಟ್ಟು ಮಾತನಾಡಬಾರದು ಎಂಬುದು ನಿಯಮ. ಕೆಟ್ಟ ಶಬ್ದ ಬಳಸುವುದು, ಅಪ್ಪನ ಸರ್ಕಾರವಾ..? ಎಂದು ಕೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮಾತುಗಳು ಸೌಜನ್ಯ ಮತ್ತು ಗೌರವವನ್ನು ತಂದುಕೊಡಲ್ಲ. ಪ್ರದೀಪ್ ಈಶ್ವರ್ ಶಬ್ದದ ಬಳಕೆ ನೋವಿನ ಸಂಗತಿ. ಪ್ರದೀಪ್ ಈಶ್ವರ ಅವರನ್ನು ಕರೆದು ಸಿದ್ದರಾಮಯ್ಯ ಬುದ್ಧಿ ಹೇಳುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಪ್ರದೀಪ್ ಈಶ್ವರ್ನ ಸ್ವೇಚ್ಛಾಚಾರತನದ ಮಾತುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.