ಇಂದಿನಿಂದ ರಾಜ್ಯಾದ್ಯಂತ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಜುಲೈ 1 ರಂದು ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 1,000 ಕ್ಕೂ ಹೆಚ್ಚು ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳು ಉತ್ತಮ ವೇತನ ಮತ್ತು ಕಾಯಂ ಉದ್ಯೋಗ ಸೇರಿ ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಇತರ ಕಲ್ಯಾಣ ಸೌಲಭ್ಯಗಳನ್ನ ನೀಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲಸದ ಖಾಯಮಾತಿ ಪೌರಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ. ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿದಂತೆ ಪೌರಕಾರ್ಮಿಕರಿಗೆ ಮಾಸಿಕ ಸುಮಾರು 14,000 ರೂ. ಅಲ್ಪ ವೇತನ ನೀಡಲಾಗುತ್ತಿದೆ. ಇದರಿಂದ ಮೂಲ ಅಗತ್ಯಗಳನ್ನು ಈಡೇರಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಹೀಗಾಗಿ, ನೇರ ನೇಮಕಾತಿ ಮಾಡಬೇಕೆಂಬುದು ಪೌರಕಾರ್ಮಿಕ ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ.
ಮಾರ್ಚ್ 2017ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಂಪುಟ ಸಭೆಯಲ್ಲಿ ಪೌರಕಾರ್ಮಿರನ್ನು ಖಾಯಮಾತಿಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರವೇ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ವಿಫಲವಾಯಿತು. ಬಳಿಕ ಬಂದ ಸರ್ಕಾರಗಳು ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಗೋಜಿಗೆ ಹೋಗಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಸುಮಾರು 54,512 ಗುತ್ತಿಗೆ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಸುಮಾರು 17,000 ಬೆಂಗಳೂರು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಯಂ ಪೌರಕಾರ್ಮಿರ ಸಂಖ್ಯೆ ಸುಮಾರು 10,755 ಆಸು ಪಾಸು ಇದೆ ಎಂದು ಪ್ರತ್ರಿಭಟನೆ ವೇಳೆ ಒಕ್ಕೂಟದ ನಾಯಕರು ತಿಳಿಸಿದ್ದಾರೆ.