ಬೆಂಗಳೂರು ರಸ್ತೆ ಮೇಲೆ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಆಚೆ ಹೋದವರು ಮತ್ತೆ ಜೀವಂತವಾಗಿ ಬರ್ತಾರಾ ಎನ್ನುವ ಯಾವ ನಂಬಿಕೆಯೂ ಇಲ್ಲ ಎನ್ನುವ ಸ್ಥಿತಿ ಸದ್ಯದ್ದು. ಅಂಥಾ ಅದ್ವಾನ ಸ್ಥಿತಿಯಲ್ಲಿದೆ ಬೆಂಗಳೂರಿನ ರಸ್ತೆಗಳು. ರಸ್ತೆ ಗುಂಡಿಯಿಂದ ಸಾವಾದರೆ ಪರಿಹಾರ ಕೊಡುವ ಜವಾಬ್ದಾರಿಯನ್ನು ಪಾಲಿಕೆ ಹೊತ್ತುಕೊಂಡಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಆದ ರಸ್ತೆ ಅಪಘಾತದಲ್ಲಿ ಜೀವಹಾನಿಯಾದವರಿಗೆ ಬಿಬಿಎಂಪಿಯಿಂದ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ.
ಒಂದು ವರ್ಷದಲ್ಲಿ 6 ಜನ ಅಮಾಯಕರು ಬಲಿ, ಮೃತರ ಕುಟುಂಬಕ್ಕೆ ಸಲ್ಲಿಕೆಯಾಗದ ಪರಿಹಾರ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವರ್ಷದಲ್ಲಿ ರಸ್ತೆಗುಂಡಿಯಿಂದ ಬರೋಬ್ಬರಿ 600 ಕ್ಕೂ ಅಧಿಕ ಅಫಘಾತ ಸಂಭವಿಸಿವೆ. ಈ ಒಂದು ವರ್ಷದ ಅವಧಿಯಲ್ಲಿ ಆರು ಜನ ರಸ್ತೆ ಗುಂಡಿಯಲ್ಲಿ ಬಿದ್ದು ಜೀವ ಕಳೆದುಕೊಂಡರೆ, ನೂರಾರು ಸಂಖ್ಯೆಯಲ್ಲಿ ಜನರು ಕೈ ಕಾಲು ಕಳೆದುಕೊಂಡು ಬದುಕುತ್ತಿದ್ದಾರೆ. ಆದರೆ ಬಿಬಿಎಂಪಿ ನಿರ್ಲಕ್ಷ್ಯ ಮತ್ತು ನಿರ್ವಹಣೆ ವೈಫಲ್ಯದಿಂದ ಸಂಭವಿಸಿದ ಅಪಘಾತಗಳಿಗೆ ಬಿಬಿಎಂಪಿಯೇ ನೇರ ಹೊಣೆ ಎಂದು ಹೈಕೋರ್ಟ್ ಸಹ ಹೇಳಿದೆ. 2020 ಡಿಸೆಂಬರ್ ನಲ್ಲಿ ಹೈಕೋರ್ಟ್, ಪಾಲಿಕೆ ಪರಿಹಾರ ಒದಗಿಸಬೇಕು ಎಂದು ಖಡಕ್ ಸೂಚನೆಯನ್ನು ಕೊಟ್ಟಿತ್ತು. ಆದರೆ ಬಿಬಿಎಂಪಿಯಿಂದ ಸತ್ತವರಿಗೆ ಈವರೆಗೆ ಪರಿಹಾರ ಸೇರಿಲ್ಲ. ಇದುವರೆಗೂ ಸಾರ್ಜನಿಕರು ಯಾರೂ ಕೂಡ ಪರಿಹಾರಕ್ಕೆ ಅರ್ಜಿ ಸಲ್ಲಿಸಿಲ್ಲಾ. ಅರ್ಜಿ ಬಂದರೆ ಪರಿಶೀಲನೆ ನಡೆಸಿ ಪರಿಹಾರ ನಿಡುತ್ತೇವೆ ಎನ್ನುವ ಬಿಬಿಎಂಪಿ ಅಧಿಕಾರಿಗಳು, ಅರ್ಜಿ ಸಲ್ಲಿಸಬೇಕಾದ ರೀತಿ ರಿವಾಜುಗಳ ಪಟ್ಟಿಯನ್ನೇ ಈವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ.

ಯಾವ ರಸ್ತೆಯಲ್ಲಿ ಎಷ್ಟು ಅಪಘಾತಗಳು
ಸಿಮೆಂಟ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆ :
2019 ರಲ್ಲಿ- 35
2020 ರಲ್ಲಿ – 29
2021 ರಲ್ಲಿ – 77
ಡಾಂಬರ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆ :
2019 ರಲ್ಲಿ – 744
2020 ರಲ್ಲಿ – 588
2021ರಲ್ಲಿ – 535
ಪರಿಹಾರ ಧನ ಕೊಡುವಂತೆ ಬಿಬಿಎಂಪಿ ಕಿವಿ ಹಿಂಡಿದ್ದ ಹೈ ಕೋರ್ಟ್!
ರಸ್ತೆ ಗುಂಡಿಯಿಂದ ಅಫಘಾತವಾದವರಿಗೆ ಪರಿಶೀಪಿಸಿ ಪರಿಹಾರ ಒದಗಿಸಬೇಕು ಬಿಬಿಎಂಪಿ. ಈ ಬಗ್ಗೆ ಹೈ ಕೋರ್ಟ್ ಸೂಚನೆ ನೀಡಿ ಒಂದು ವರ್ಷ ಕಳೆದರು ಒಂದು ಅರ್ಜಿಯೂ ಬಂದಿಲ್ಲ. ಅಪಘಾತದಿಂದ ಆದ ಹಾನಿ ಆಧಾರದ ಮೇಲೆ ಪರಿಹಾರ ಸಿಗುತ್ತದೆ. ಆದರೆ ಮಾಹಿತಿಯ ಕೊರತೆಯಿಂದ ಅರ್ಜಿಗಳು ಬಂದಿಲ್ಲ ಎಂಬುವುದೇ ವಾಸ್ತವ. ಸಾರ್ವಜನಿಕರು ರಸ್ತೆ ಗುಂಡಿಗೆ ಆದ ಬಲಿಗಳಿಗೆ ಬಿಬಿಎಂಪಿ ನೇರ ಹೊಣೆ ಎಂದು ಹಿಡಿ ಶಾಪ ಹಾಕಿ ಓಡಾಡುವ ಸ್ಥಿತಿ ತಲುಪಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೇಲ್ಲಾ ಕಾರಣ. ನ್ಯಾಯಾಂಗ ಆದೇಶವನ್ನು ಅಧಿಕಾರಿಗಳು ಉಲ್ಲಂಘನೆ ಮಾಡುತ್ತಿದ್ದಾರೆ. ಪರಿಹಾರದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಬಿಬಿಎಂಪಿ ಎಡವಿದೆ ಎಂಬುವುದು ಸಾರ್ವಜನಿಕರ ಮಾತು. ಬಿಬಿಎಂಪಿ ಮಾಹಿತಿ ಕೊರತೆಯಿಂದ ಅಪಘಾತವಾದ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಎಷ್ಟೇ ಸಾವು ನೋವುಗಳಾದರೂ ಸಹ ಬಿಬಿಎಂಪಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹೊಸ ಹೊಸ ಯೋಜನೆಗಳು ಜಾರಿ ಮಾಡಿ ಬಿಲ್ ಲಗತ್ತಿಸುವ ಕೆಲಸದಲ್ಲಿದೆ.
ಎಎಪಿಯಿಂದ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭ
ಇತ್ತ ರಾಜಧಾನಿಯ ರಸ್ತೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ 10 ದಿನಗಳ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಶನಿವಾರ ಚಾಲನೆ ನೀಡಿದರು.



