ಮೈಸೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ(Bangalore-Mysore Expressway) ಮೊದಲ ಹಂತದ ಟೋಲ್ ಕೇಂದ್ರಗಳಲ್ಲಿ ಶುಲ್ಕ ಸಂಗ್ರಹ ಕಾರ್ಯವನ್ನು ಮುಂದೂಡಲಾಗಿದೆ ಎಂದು ಸಂಸದ ಪ್ರತಾಪ ಸಿಂಹ(MP Prathap Simha) ತಿಳಿಸಿದರು.
ಸೇವಾ ರಸ್ತೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಪಡೆಯುವುದಿಲ್ಲ. ಮಾರ್ಚ್ 15ರ ನಂತರ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ದ್ವಿಚಕ್ರವಾಹನ ಹಾಗೂ ತ್ರಿಚಕ್ರವಾಹನಗಳಿಗೆ ಎಕ್ಸ್’ಪ್ರೆಸ್ ವೇನಲ್ಲಿ ಅವಕಾಶವಿರಲಿದೆ. ಸರ್ವೀಸ್ ರಸ್ತೆ ಪೂರ್ಣಗೊಂಡ ಬಳಿಕ ಅಪಘಾತ ಮುಕ್ತ ರಸ್ತೆಯನ್ನಾಗಿಸುವ ಉದ್ದೇಶದಿಂದಾಗಿ ಅವುಗಳಿಗೆ ಅವಕಾಶ ಕೊಡುವುದಿಲ್ಲ. ದ್ವಿಚಕ್ರವಾಹನ ಹಾಗೂ ತ್ರಿಚಕ್ರವಾಹನಗಳು ಸರ್ವಿಸ್ ರಸ್ತೆಯನ್ನು ಬಳಸಿಕೊಳ್ಳಬಹುದು. ಇದರಿಂದ ಅವರು ಟೋಲ್ ಪಾವತಿಸುವುದು ಕೂಡ ತಪ್ಪಲಿದೆ ಎಂದು ತಿಳಿಸಿದರು.
ಟೋಲ್ ಸಂಗ್ರಹ ಆರಂಭಿಸುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಬರುವ ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಬಳಿ ಬೆಂಗಳೂರು–ನಿಡಘಟ್ಟ ವಿಭಾಗದ 6 ಲೇನ್‌ಗಳ ಬಳಕೆಗಾಗಿ ಟೋಲ್ ಶುಲ್ಕ ಅನ್ವಯವಾಗಲಿದೆ. ಇದು 55.63 ಕಿ.ಮೀ. ಇದ್ದು, ಟೋಲಿಂಗ್ ರಸ್ತೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿತ್ತು.