ಪೋಸ್ಟಿಂಗ್ ಪಡೆಯಲು ಒಂದು ಕಡೆ ಪರದಾಟ, ಕೇಳಿದ ಕಡೆ ಪೋಸ್ಟಿಂಗ್ ಆದರೆ ಶುರುವಾಗುತ್ತೆ ಕಾಟ, ಹೇಳಿದಂತೆ ಕೇಳದೇ ಇದ್ದರೆ ಶುರುವಾಗುತ್ತೆ ಕಾದಾಟ… ಧ್ವನಿ ಎತ್ತಿದರೆ ಶುರುವಾಗುತ್ತೆ ಕಿರುಚಾಟ… ಕೊನೆಗೆ ಇಲ್ಲಿಂದ ಎಲ್ಲಿಯಾದರೂ ಹೋದರೆ ಸಾಕು ಅಂತ ರಾಜಕಾರಣಿಗಳ ಮನೆ ಮುಂದೆ ಅಲೆದಾಟ…
ಇದು ರಾಜ್ಯದಲ್ಲಿರುವ ಅಧಿಕಾರಿಗಳ ಪರಿಸ್ಥಿತಿ. ಹಾಗಂತ ಇದು ಒಂದು ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಪರಿಸ್ಥಿತಿಯಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ಭ್ರಷ್ಟರಿಗೆ ಬಲೆ ಹಾಕುವ ಎಸಿಬಿ ಅಧಿಕಾರಿಗಳು, ಜನಸೇವೆ ಮಾಡಬೇಕಾದ IAS, IPS… ಅಷ್ಟೇ ಏಕೆ ಶಿಕ್ಷಕ ವರ್ಗದರಿಗೂ ಈ ಹಿಂಸೆ, ನೋವು ತಪ್ಪುತ್ತಿಲ್ಲ.
ನೀವು ಅಪ್ಪಿತಪ್ಪಿ ನಮ್ಮೂರು, ನನ್ನ ಹೆಂಡತಿನೋ ಗಂಡನೋ ಇದ್ದಾರೆ ಅಂತಾನೋ, ಹುಷಾರಿಲ್ಲ ಅಂತಾನೋ ಅಥವಾ ಒಳ್ಳೆ ಕಲೆಕ್ಷನ್ ಆಗುತ್ತೆ ಅಂತನೋ ಯಾವುದೋ ಕಾರಣಕ್ಕೆ ನಿರ್ದಿಷ್ಟ ಜಾಗಕ್ಕೆ ನೀವು ವರ್ಗಾವಣೆ ಮಾಡಿಸಿಕೊಂಡರೆ ಮುಗಿಯಿತು ನಿಮ್ಮ ಕತೆ ಅಂತನೇ ಅರ್ಥ.
ನೀವು ಕೇಳಿದ ಕಡೆ ಪೋಸ್ಟಿಂಗ್ ಸಿಗಬೇಕಾದರೆ ಇಂತಿಷ್ಟು ಕೈಗೆ ಇಡಬೇಕು. ಜೊತೆಗೆ ಅವರು ಹೇಳಿದಂತೆ ಕೇಳಬೇಕು. ಅವರು ಡಿಮ್ಯಾಂಡ್ ಗಳನ್ನು ಪೂರೈಸಬೇಕು. ಅದು ನಿಮಗೆ ಇಷ್ಟ ಇರಲಿ, ಬಿಡಲಿ ನೀವು ಮಾಡಬೇಕಾದ ಧರ್ಮ ಸಂಕಟವನ್ನು ಸರಕಾರಿ ನೌಕರರು ಅನುಭವಿಸುತ್ತಿದ್ದಾರೆ. ಆದರೆ ತಮ್ಮ ಕಷ್ಟಗಳನ್ನು ಬಹಿರಂಗವಾಗಿ ಹೇಳಲು ಆಗದೇ, ಅರಗಿಸಿಕೊಳ್ಳಲೂ ಆಗದೇ ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಹೊಸ ಸರಕಾರ ಅದರಲ್ಲೂ ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ (State and Central Government) ಎರಡೂ ಒಂದೇ ಪಕ್ಷ ಅಧಿಕಾರಲ್ಲಿದೆ. ಅಧಿಕಾರದ ಅಮಲು ಏರಿಸಿಕೊಂಡಿರುವ ಜನಪ್ರತಿನಿಧಿಗಳು ಮಂಗನ ಕೈಗೆ ಮಾಣಿಕ್ಯ ಸಿಕ್ಕಿಂತೆ ಸರಕಾರಿ ಯಂತ್ರವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಅಂದರೆ ಅದು ಯಂತ್ರದ ಪಾತ್ರದಲ್ಲಿರುವ ಸರಕಾರಿ ಅಧಿಕಾರಿಗಳದ್ದಾಗಿದೆ.
ಕಾಮಗಾರಿಗಳ ಗುತ್ತಿಗೆಯಲ್ಲಿ ಅಕ್ರಮ, ಪರೀಕ್ಷಾ ಅಕ್ರಮ, ವರ್ಗಾವಣೆ ಭ್ರಷ್ಟಾಚಾರ, ಪಠ್ಯ ಪರಿಷ್ಕರಣೆ, ಸಮವಸ್ತ್ರ ವಿತರಣೆ ಅಕ್ರಮ, ಬಿಡಿಎ ಅಕ್ರಮ, ವಸತಿ ಯೋಜನೆ ಅಕ್ರಮ, ನೀರಾವರಿ ಯೋಜನೆಗಳಲ್ಲಿ ಹಣ ಗುಳುಂ, ಯೋಜನೆಗಳ ಕಾಲಾವಧಿ ವಿಸ್ತರಣೆ, ಬೆಟ್ಟಿಂಗ್ ದಂಧೆ, ಲಾಟರಿ ಟಿಕೆಟ್ ದಂಧೆ..ಹೀಗೆ ಒಂದೇ ಎರಡೇ.. ಹೇಳುತ್ತಾ ಹೋದರೆ ಸಾಲು ಸಾಲು ಅಕ್ರಮಗಳು ಬೆಳಕಿಗೆ ಬರುತ್ತಲೇ ಇದೆ.
ಹಾಗಂತ ಈಗಿನ ಬಿಜೆಪಿ ಸರಕಾರದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಯಾವ ಇಲಾಖೆಯಲ್ಲೀಯೂ ಪ್ರಾಮಾಣಿಕ ಕೆಲಸಗಳು ಆಗುತ್ತಿಲ್ಲ. ಗುತ್ತಿಗೆದಾರರೇ ಆರೋಪಿಸುವಂತೆ ನೀರಾವರಿ ಮತ್ತು ಆರೋಗ್ಯ ಇಲಾಖೆಗಳು ಭ್ರಷ್ಟಾಚಾರದಲ್ಲಿ ನಂ. ೧ ಸ್ಥಾನ ಪಡೆದಿವೆ. ಪೊಲೀಸ್ ಇಲಾಖೆಯಂತೂ ಕೇಳಿದ ರೇಟ್ ಕೊಟ್ಟರೂ ಬೇಕಾದ ಪೋಸ್ಟಿಂಗ್ ಸಿಗಲ್ಲ. ಯಾಕೆಂದರೆ ಹಣದ ಜೊತೆ ಅವರ ಷರತ್ತುಗಳನ್ನು ಪಾಲಿಸಬೇಕು ಮತ್ತು ಅವರ ಮನಸ್ಥಿತಿಗೆ ಒಗ್ಗುವವರಿಗೆ ಮಾತ್ರ ಅವಕಾಶ.

ಬಸವರಾಜ್ ಬೊಮ್ಮಾಯಿ ಸರಕಾರ ಬಂದ ಮೇಲೆ ಹಲವಾರು ಬಾರಿ ADGP, IAS, IPS ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ. ನಿಯಮದಂತೆ ಒಂದು ಬಾರಿ ಅಧಿಕಾರಿ ವರ್ಗಾವಣೆ ಮಾಡಿದರೆ ಕನಿಷ್ಠ 3 ವರ್ಷ ಒಂದೇ ಕಡೆ ಇರಬೇಕು. ನಂತರ ಅವರನ್ನು ವರ್ಗ ಮಾಡಬಹುದು. ಆದರೆ ಸರಕಾರ ಆಗಲಿ, ಮುಖ್ಯಮಂತ್ರಿಗಳಾಗಲಿ ವರ್ಷ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿರುವುದರಿಂದ ಅಧಿಕಾರಿಗಳು ಫುಟ್ಬಾಲ್ ನಂತೆ ಒಂದೆಡೆಯಿಂದ ಮತ್ತೊಂದೆಡೆ ಓಡಾಡುತ್ತಿದ್ದಾರೆ.
ಸಚಿವರು (Ministers) ಮತ್ತು ಶಾಸಕರ (MLA’s) ಹುಚ್ಚಾಟದಿಂದ ಬೇಸತ್ತು ಕೆಲವು ಅಧಿಕಾರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಲು ಬಯಸುತ್ತಿದ್ದಾರೆ ಅಂದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದು ತಿಳಿಯುತ್ತದೆ. ಅದಕ್ಕೆ ಇತ್ತೀಚಿನ ಉದಾಹರಣೆ ಅಂದರೆ IAS ಅಧಿಕಾರಿ ರವೀಂದ್ರನಾಥ್. ಕೆಲಸ ಮಾಡಲು ಬಿಡಲ್ಲ. ಕನಿಷ್ಠ ಗೌರವವೂ ಇಲ್ಲ ಎಂದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಲೋಕೋಪಯೋಗಿ, ಕಂದಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ ಉನ್ನತ ಶಿಕ್ಷಣ, ಆರೋಗ್ಯ ಇಲಾಖೆ, ನೀರಾವರಿ ಹೀಗೆ ಎಲ್ಲಾ ಇಲಾಖೆಗಳಲ್ಲೂ ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪದೇಪದೆ ವರ್ಗವಣೆ ಆಗುತ್ತಿದ್ದಾರೆ. ಅದರಲ್ಲೂ ಪೊಲೀಸ್ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕಗಳಲ್ಲಂತೂ ಬಂದಷ್ಟೇ ವೇಗವಾಗಿ ಅಧಿಕಾರಿಗಳು ವರ್ಗಗೊಳ್ಳುತ್ತಿದ್ಧಾರೆ.
ಇದಕ್ಕೆ ಕಾರಣ ಇಂತಿಷ್ಟು ಅಂತ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡಿರುತ್ತಾರೆ. ಪೋಸ್ಟಿಂಗ್ ಗೆ ಸಾಲ ಸೋಲ ಮಾಡಿ ಕೊಟ್ಟಿರುವುದರಿಂದ ಅದನ್ನು ವಸೂಲು ಮಾಡಬೇಕು ಅವರಿಗೆ. ಆದರೆ ಹಣ ಪಡೆದು ಪೋಸ್ಟಿಂಗ್ ಕೊಟ್ಟ ನಂತರವೂ ಸಚಿವರ ಹಣದ ದಾಹ ಇಂಗುತ್ತಿಲ್ಲ. ಪೋಸ್ಟಿಂಗ್ ಮಾಡಿದ ನಂತರವೂ ಇಂತಿಷ್ಟು ವಸೂಲು ಮಾಡಿಕೊಡಬೇಕು ಎಂಬ ಷರತ್ತು ಬೇರೆ ಹಾಕಿರುತ್ತಾರೆ. ಇತ್ತ ಕೊಟ್ಟ ಹಣ ವಾಪಸ್ ಪಡೆಯಲು ಆಗದೇ ಕೇವಲ ಸಚಿವರ ಜೇಬು ತುಂಬಿಸುವುದೇ ಇವರ ಕಾಯಕವಾಗಿದೆ. ಕೆಲವು ಪ್ರಮಾಣಿಕ ಅಧಿಕಾರಿಗಳಂತೂ ಹಣ ಆಕಡೆ ಇರಲಿ ಜನರ ಸೇವೆ ಮಾಡುವುದಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾರೆ.
ಸರಕಾರ (Government) ಕೂಡ ತಾವು ಹೇಳಿದಂತೆ ನಡೆದುಕೊಳ್ಳದ, ತಮ್ಮ ಗುರಿ ತಲುಪದ ಅಧಿಕಾರಿಗಳನ್ನು ಮುಲಾಜಿಲ್ಲದೇ ವರ್ಗಾವಣೆ ಮಾಡುತ್ತಿದೆ. ಇದು ಎಲ್ಲಿಗೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಅಧಿಕಾರಿಗಳು ಮತ್ತು ಸರಕಾರದ ಪ್ರತಿನಿಧಿಗಳ ನಡುವಣ ಗುದ್ದಾಟದಲ್ಲಿ ಸದ್ಯಕ್ಕೆ ಸಚಿವರು ಸಿಕ್ಕ ಅಧಿಕಾರವನ್ನೇಲ್ಲಾ ಬಳಸಿಕೊಂಡು ಮುಂಬರುವ ಚುನಾವಣೆಳಿಗೆ ಸಜ್ಜಾಗುತ್ತಿದ್ದಾರೆ. ಇತ್ತ ಅಧಿಕಾರಿಗಳು ಹೈರಾಣವಾಗಿದ್ದಾರೆ. ಆದರೆ ಅಧಿಕಾರಿಗಳ ತಾಳ್ಮೆ ಯಾವಾಗ ಕದಡುತ್ತದೋ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.
ಮುಂದುವರೆಯಲಿದೆ………..