ಗಾಲ್ವಾನ್ ಕಣಿವೆಯಲ್ಲಿ ಭಾರತ vs ಚೀನೀ ಸೈನಿಕರ ಸಂಘರ್ಷದ ಬಳಿಕ ಚೀನಾದ ಮೇಲಿನ ಭಾರತದ ಅವಲಂಬನೆ ತಗ್ಗಿಸಲು ಭಾರತ ಸರ್ಕಾರ ಕೈಗೊಂಡ ಎಲ್ಲಾ ಕ್ರಮಗಳನ್ನೂ ಮೀರಿ ಭಾರತ-ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ 62.7% ರಷ್ಟು ಹೆಚ್ಚಳವಾಗಿದೆಯೆಂದು ನೂತನ ವರದಿ ಹೇಳಿದೆ. ಈ ವರ್ಷದ ಮೊದಲಾರ್ಧದಲ್ಲಿ, ಅಂದರೆ, ಕೋವಿಡ್ ಎರಡನೇ ಅಲೆ ಸಂಧರ್ಭದಲ್ಲಿ ಈ ಹೆಚ್ಚಳ ನಡೆದಿದೆ ಎನ್ನುವುದು ವಿಶೇಷ.
ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ (CGAC) ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಜನವರಿ ಮತ್ತು ಜೂನ್ ನಡುವಿನ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರವು 57.48 ಬಿಲಿಯನ್ ಡಾಲರ್ ತಲುಪಿದೆ. ಗಾಲ್ವಾನ್ ಸಂಘರ್ಷದ ಬಳಿಕ ಚೀನಾ ವಸ್ತುಗಳ ಆಮದಿನ ಪ್ರಮಾಣ ತಗ್ಗಿಸುವ ಹಲವು ವಿಧಾನಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿತ್ತು. ಇದರ ಭಾಗವಾಗಿ ಚೀನಾ ಮೂಲದ ಹಲವು ಅಪ್ಲಿಕೇಶನ್‌ಗಳಿಗೆ ಭಾರತದಲ್ಲಿ ನಿಷೇಧವನ್ನೂ ಹೇರಲಾಗಿತ್ತು.

ಅದಾದ ಸುಮಾರು ಒಂದು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರವು 2019ರ ಸಾಂಕ್ರಾಮಿಕ ಅವಧಿಯ ಪೂರ್ವದ ಮಟ್ಟವನ್ನು ಮೀರಿದೆ. ಎರಡೂ ದೇಶಗಳು 2019ರ ಮೊದಲಾರ್ಧದಲ್ಲಿ ದ್ವಿಪಕ್ಷೀಯ ವ್ಯಾಪಾರ 44.72 ಬಿಲಿಯನ್ ಡಾಲರ್ ತಲುಪಿತ್ತು.
ಚೀನಾದ ಏಜೆನ್ಸಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಭಾರತದ ಆಮದು ಮೊತ್ತದಲ್ಲಿ, ಮುಖ್ಯವಾಗಿ ವೈದ್ಯಕೀಯ ಸಾಮಗ್ರಿಗಳ ಖರೀದಿ ಪ್ರಮಾಣ ತೀವ್ರ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವೈದ್ಯಕೀಯ ಸಾಮಾಗ್ರಿಗಳ ಆಮದಿನಲ್ಲಿ ತೀವ್ರ ಹೆಚ್ಚಳವಾಗಿದೆ. ಈ ವರ್ಷ ವೈದ್ಯಕೀಯ ಸಾಮಾಗ್ರಿಗಳ ಖರೀದಿಯು 42.76 ಬಿಲಿಯನ್ ಡಾಲರ್ ತಲುಪಿದೆ. ಇದು 2019ರಲ್ಲಿ ಇದೇ ಅವಧಿಯಲ್ಲಿ ದಾಖಲಾದ. 35.8 ಬಿಲಿಯನ್ ಡಾಲರ್ ಗೆ ಹೋಲಿಸಿದರೆ ಶೇಕಡ 60.4ರಷ್ಟು ಹೆಚ್ಚಾಗಿದೆ.
ಏಪ್ರಿಲ್‌ನಲ್ಲಿ ಮಾತ್ರ ಭಾರತವು 26,000 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಉತ್ಪಾದಕಗಳನ್ನು ಆಮದು ಮಾಡಿಕೊಂಡಿದೆ ಎಂದು ದತ್ತಾಂಶ ಸೂಚಿಸಿದೆ. ಚೀನಾಕ್ಕೆ ಭಾರತದ ರಫ್ತು ಸಹ 69.6% ನಷ್ಟು ಏರಿದ್ದು, 14.72 ಬಿಲಿಯನ್ ಡಾಲರ್‌ಗೆ ತಲುಪಿದೆ, ಮುಖ್ಯವಾಗಿ ಕಬ್ಬಿಣದ ಅದಿರು, ಹತ್ತಿ ಮತ್ತು ಇತರ ಸರಕುಗಳ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿದೆ.

ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ ಭಾರತವು ಒಟ್ಟು 20.28 ದಶಲಕ್ಷ ಟನ್ ಕಬ್ಬಿಣದ ಅದಿರನ್ನು ಚೀನಾಕ್ಕೆ ರಫ್ತು ಮಾಡಿದೆ ಎಂದು ಸಿಜಿಎಸಿ ಅಂಕಿಅಂಶಗಳು ಬಹಿರಂಗಪಡಿಸಿವೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು 66% ಹೆಚ್ಚಾಗಿದೆ. ಇದು ಭಾರತದ ಒಟ್ಟು ಕಬ್ಬಿಣದ ಅದಿರಿನ ರಫ್ತಿನ ಸುಮಾರು 90% ನಷ್ಟಿದೆ.
ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಕಾರಣದಿಂದ, ಚೀನಾದೊಂದಿಗಿನ ಭಾರತದ ವ್ಯಾಪಾರವು 2020 ರಲ್ಲಿ 5.6% ನಷ್ಟು ಇಳಿಕೆಯಾಗಿ 87.6 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಅದರ ಹೊರತಾಗಿಯೂ ಚೀನಾ ಇನ್ನೂ ಅಮೆರಿಕಾವನ್ನು ಹಿಂದಿಕ್ಕಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿ ಉಳಿಯುವಲ್ಲಿ ಯಶಸ್ವಿಯಾಗಿದೆ.
ಮುಖ್ಯಾಂಶ
- ಚೀನಾಕ್ಕೆ ಭಾರತದ ಒಟ್ಟು ರಫ್ತು 14.72 ಬಿಲಿಯನ್ ಡಾಲರ್, ಇದು 69.6% ಹೆಚ್ಚಾಗಿದೆ
- ಜನವರಿ ಮತ್ತು ಜೂನ್ 2021 ರ ನಡುವೆ ಭಾರತ ಮತ್ತು ಚೀನಾ ನಡುವಿನ ಒಟ್ಟು ವ್ಯಾಪಾರ 57.48 ಬಿಲಿಯನ್ ಡಾಲರ್
- ಈ ವರ್ಷದ ಮೊದಲಾರ್ಧದಲ್ಲಿ 42.76 ಬಿಲಿಯನ್ ಡಾಲರ್ ಮೊತ್ತದ ಸಾಮಾಗ್ರಿ ಭಾರತದ ಆಮದು ಮಾಡಿಕೊಂಡಿದೆ, 2019 ರ ಅವಧಿಗಿಂತ 60.4% ಹೆಚ್ಚಳ
- 2019 ರ ಇದೇ ಅವಧಿಯಲ್ಲಿ ದಾಖಲಾದ ಒಟ್ಟು ದ್ವಿಪಕ್ಷೀಯ ವ್ಯಾಪಾರ44.72 ಬಿಲಿಯನ್ ಡಾಲರ್