ಕಳೆದ ತಿಂಗಳಲ್ಲಿ ಮುಗಿದ ರಾಜ್ಯ ವಿಧಾನಸಭೆಯ ಚುಣಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಮೇಲೆ ಆ ಪಕ್ಷದ ಬಹುತೇಕ ಪುಢಾರಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ನಾಲ್ಕು ವರ್ಷಗಳ ಬಿಜೆಪಿ ದುರಾಡಳಿತದ ಹಿಂದೆ ಸಂಘಿ ಬ್ರಾಹ್ಮಣರ ಕೈಚಳಕವಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಸೋಲಿನಿಂದ ಬಿಜೆಪಿ ನಾಯಕರಿಂದ ಹದ್ದು ಮೀರಿದ ವರ್ತನೆಗಳು ಪ್ರದರ್ಶನವಾಗುತ್ತಿವೆ. ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿ ಜಾರಿಗೊಳಿಸಲಾರದು ಎಂದುಕೊಂಡಿದ್ದ ಬಿಜೆಪಿ ಈಗ ಇನ್ನಷ್ಟು ಕಂಗಾಲಾಗಿದೆ. ಕಾಂಗ್ರೆಸ್ ನುಡಿದಂತೆ ನಡೆದು ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದೆ. ಬಿಜೆಪಿಯ ಮೊದಲ ಹಂತದ ನಾಯಕರೆಲ್ಲ ಚುನಾವಣಾ ಫಲಿತಾಂಶದ ನಂತರ ಮೌನಕ್ಕೆ ಶರಣಾಗಿದ್ದಾರೆ. ಆದರೆ ಮಾಧ್ಯಮ ಧರ್ಮವನ್ನು ಕುಲಗೆಡಿಸಿ ರಾಜಕೀಯ ದಂಧೆಯಲ್ಲಿ ತೊಡಗಿರುವ ಮೈಸೂರಿನ ಸಂಸದ ಪ್ರತಾಪಸಿಂಹ ಹದ್ದು ಮೀರಿ ವರ್ತಿಸುತ್ತಿದ್ದಾನೆ. ಬಿಜೆಪಿ ಸೋಲಿನಿಂದ ಆತನ ಆಕ್ರಂದನ ಮುಗಿಲು ಮುಟ್ಟಿದೆ. ಮಾಸಿಕ ೨೦೦೦ ರೂಪಾಯಿಯ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸುವ ಭರದಲ್ಲಿ ಈತ ಮುಸ್ಲಿಮರಿಗೆ ನಾಲ್ಕು ಹೆಂಡತಿಯರಿರುತ್ತಾರೆ ಎನ್ನುವ ಅಸಂಬದ್ದ ಹಾಗು ಸಂಘದ ಮಲೀನ ಹಾಗು ಕುಲೀನ ಸಂಸ್ಕೃತಿಯ ಮಟ್ಟದ ಹೇಳಿಕೆ ನೀಡುವ ಮೂಲಕ ತನ್ನ ಪರಮ ನೀಚತನವನ್ನು ಪ್ರದರ್ಶಿಸಿದ್ದಾನೆ.
ಪ್ರತಾಪಸಿಂಹ ಒಮ್ಮೆ ತಾನು ಬಲವಾಗಿ ಪ್ರತಿಪಾದಿಸುವ ಕಾಲ್ಪನಿಕ ಹಿಂದೂ ಧರ್ಮದ ಸುಳ್ಳು ಪುರಾಣದ ಕತೆಗಳು ಓದಿಕೊಳ್ಳಲಿ. ಕುರುವಂಶದ ರಾಜರು ಚಂದ್ರನ ಮಕ್ಕಳು ಎನ್ನುವ ಪ್ರತೀತಿಯಿದೆ. ಗುರುವಿನ ಪತ್ನಿ ತಾರಾಳೂ ಸೇರಿ ಚಂದ್ರನಿಗೆ ಒಟ್ಟು ೨೭ ಹೆಂಡತಿರಿದ್ದಾರೆ. ಅಯ್ಯೋದ್ಯೆಯ ಅರಸ ದಶರಥನಿಗೆ ಮೂವರು ಹೆಂಡತಿಯರು. ತ್ರೀಮೂರ್ತಿಗಳಲ್ಲಿ ಒಬ್ಬ ಹಾಗು ಬ್ರಾಹ್ಮಣ ಧರ್ಮದ ಸ್ಥಾಪಕ ಬ್ರಹ್ಮನಿಗೆ ಆತನ ಮಗಳೆ ಪತ್ನಿಯಂತೆ. ಮಹಾಭಾರತದ ಕೃಷ್ಣನೊ ಬಹು ಗೋಪಿಕಾಲೋಲ. ಅರ್ಜುನನ ಹೆಂಡತಿಯರ ಪಟ್ಟಿ ಈ ಲೇಖನದ ಉದ್ದಕ್ಕೆ ಸಾಕಾಗುವುದಿಲ್ಲ. ಸನಾತನ ಆರ್ಯ ವೈದಿಕರ ಪುರಾಣಗಳಲ್ಲಿ ಬಹುಪತ್ನಿತ್ವ ಹಾಗು ಬಹುಪತಿತ್ವ ಪಾಶ್ಚಾತ್ಯ ರಾಷ್ಟ್ರಗಳಿಗಿಂತ ಪೂರ್ಪದಲ್ಲೆ ಅಸ್ಥಿತ್ವದಲ್ಲಿ ಇತ್ತು ಎಂದು ಸನಾತನಿಗಳೆ ಪ್ರತಿಪಾದಿಸುತ್ತಾರೆ. ಗೋಬ್ರಾಹ್ಮಣ ರಕ್ಷಕˌ ಹಿಂದೂವಿ ಸಾಮ್ರಾಟನೆಂದು ತಪ್ಪಾಗಿ ಕರೆಯಲ್ಪಡುವ ಬಹಜನ ಸಾಮ್ರಾಟ ಶಿವಾಜಿಗೆ ೬ ಜನ ಹೆಂಡತಿಯರು. ಇತಿಹಾಸˌ ಪುರಾಣ ಬಿಟ್ಹಾಕಿ, ಅನೇಕ ಬಿಜೆಪಿಗರು ಮತ್ತವರ ತಾತ ಮುತ್ತಾತಂದಿರು ಕೂಡ ಒಂದಕ್ಕಿಂತ ಹೆಚ್ಚು ಹೆಂಡತಿಯರು ಹೊಂದಿರುವ ಉದಾಹರಣೆಗಳು ಸಾಕಷ್ಟಿವೆ.
ಸ್ಕ್ರೋಲ್. ಇನ್ ವೆಬ್ ಜರ್ನಲ್ಲಿನ ಜುಲೈ ೮, ೨೦೧೪ ರ ಸಂಚಿಕೆಯಲ್ಲಿ ವೆಂಕಟರಾಮಕೃಷ್ಣನ್ ಎಂಬ ಲೇಖಕರು ಬರೆದಿರುವ ಅಂಕಣದಲ್ಲಿ ಭಾರತೀಯ ಮುಸಲ್ಮಾನರಿಗೆ ಅನ್ವಯಿಸುವ ಇಸ್ಲಾಮಿಕ್ ಕಾನೂನನ್ನು ಇನ್ನಷ್ಟು ಸ್ತ್ರೀಪರಗೊಳಿಸಲು ಬಯಸುವ ಮುಸ್ಲಿಂ ಮಹಿಳಾ ಸಂಘಟನೆಯ ಹೋರಾಟದ ಕುರಿತು ಬರೆಯಲಾಗಿದೆ. ಮುಸಲ್ಮಾನರಲ್ಲಿ ಒಂದಕ್ಕಿಂತ ಹೆಚ್ಚು ಹೆಂಡತಿಯನ್ನು ಹೊಂದುವುದಕ್ಕೆ ಕಾನೂನಿನ ನಿರ್ಬಂಧ ಬೇಕು ಎನ್ನುತ್ತದೆ ಮುಸ್ಲಿಮ್ ಮಹಿಳಾ ಸಂಘಟನೆ. ಮದುವೆಗೆ ಅನ್ವಯಿಸುವ ಮುಸ್ಲಿಮ್ ವಯಕ್ತಿಕ ಕಾನೂನಿನ ನಿಬಂಧನೆಗಳನ್ನು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಮತ್ತಷ್ಟು ಪರಿಷ್ಕರಿಸಿದೆ ಎನ್ನುತ್ತಾರೆ ಲೇಖಕರು.
ಈ ಪರಿಷ್ಕೃತ ಕರಡು ಕಾನೂನಿನ ಪ್ರಕಾರ ಎಲ್ಲಾ ಬಗೆಯ ಬಹುಪತ್ನಿತ್ವ ವಿವಾಹಗಳು ಕಾನೂನುಬಾಹಿರ ಎನ್ನಲಾಗಿದೆಯಂತೆ. ಹಿಂದುತ್ವವಾದಿಗಳು ಬಹಳ ವರ್ಷಗಳಿಂದ ದೇಶದಲ್ಲಿ ಕಾಮನ್ ಸಿವಿಲ್ ಕೋಡ್ ತರಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಅವರ ಉದ್ದೇಶ ಮುಸಲ್ಮಾನರಲ್ಲಿನ ಬಹುಪತ್ನಿತ್ವವನ್ನು ನಿಲ್ಲಿಸುವುದು ಮತ್ತು ಆ ಮೂಲಕ ಮುಸ್ಲಿಮ್ ಜನಸಂಖ್ಯೆಯನ್ನು ನಿಯಂತ್ರಿಸುವುದು. ಆದರೆ ವಾಸ್ತವದಲ್ಲಿ ಬಹುಪತ್ನಿತ್ವದ ಅಂಕಿಅಂಶಗಳು ಬೇರೆಯದೆ ಕತೆ ಹೇಳುತ್ತವೆ. ಹಿಂದುತ್ವವಾದಿಗಳು ಮಾಡುವ ಆರೋಪ ಸುಳ್ಳೆಂದು ಹಾಗು ಮುಸ್ಲಿಮರಲ್ಲಿ ಬಹುಪತ್ನಿತ್ವದ ತೀವ್ರತೆ ಹಿಂದೂಗಳಷ್ಟಿಲ್ಲವೆಂದು ಈ ಅಂಕಿಅಂಶಗಳು ದೃಢಪಡಿಸತ್ತಿವೆ. ಇದರ ಕುರಿತು ಅತ್ಯಂತ ನಿಖರವಾಗಿ ಹೇಳುವುದು ಸಾಧ್ಯವಿಲ್ಲ ಎನ್ನುತ್ತಾರೆ ಲೇಖಕರು.
ಏಕೆಂದರೆ, ಜಾತಿ/ಧರ್ಮಾಧಾರಿತ ಮದುವೆಗಳ ಆಧಾರದಲ್ಲಿ ಮಾಡಲಾಗುತ್ತಿದ್ದ ಜನಗಣತಿಯು ೧೯೬೧ ರಲ್ಲಿ ನಿಂತಿದೆ. ಸರ್ವೇಕ್ಷಣೆಯೊಂದರನ್ವಯ, ಮುಸಲ್ಮಾನರಲ್ಲಿ ಬಹುಪತ್ನಿತ್ವದ ಪ್ರಮಾಣವ ಹಿಂದೂಗಳಿಗಿಂತ ಕಡಿಮೆ ಇದ್ದು ಅದು ಮುಸಲ್ಮಾನರಲ್ಲಿ ೫.೭% ಇದ್ದರೆ ಹಿಂದೂಗಳಲ್ಲಿ ಇದರ ಪ್ರಮಾಣವು ೫.೮ % ರಷ್ಟಿತ್ತು. ಇನ್ನು ಬೌದ್ಧ ಮತ್ತು ಜೈನರೂ ಸೇರಿದಂತೆ ಇತರ ಸಮುದಾಯಗಳಲ್ಲಿ ಇದು ಇನ್ನೂ ಹೆಚ್ಚಿದ್ದು ವಿಶೇಷವಾಗಿ ಬುಡಕಟ್ಟು ಜನಾಂಗದಲ್ಲಿ ಇದು ೧೫.೨೫% ಇತ್ತು ಎನ್ನುತ್ತದೆ ಸರ್ವೇಕ್ಷಣಾ ವರದಿ. ಇಸ್ಲಾಮ್ ವೈಯಕ್ತಿಕ ಕಾನೂನಿನನ್ವಯ ಮುಸ್ಲಿಮರಲ್ಲಿ ಬಹುಪತ್ನಿತ್ವದ ಪಿಡುಗು ಹೆಚ್ಚಿದೆ ಎಂದು ಹಿಂದುತ್ವವಾದಿಗಳ ಆರೋಪವಾಗಿದೆ. ಆದರೆ, ಅದು ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿಲ್ಲ ಎನ್ನುತ್ತಾರೆ ಸ್ತ್ರೀವಾದಿಗಳು ಹಾಗು ವಿದ್ವಾಂಸರಾದ ರಿತು ಮೆನನ್. ಮೆನನ್ ಅವರು “ಅನ್-ಇಕ್ವಲ್ ಸಿಟಿಜನ್ಸ್: ಎ ಸ್ಟಡಿ ಆಫ್ ಮುಸ್ಲಿಂ ಇನ್ ಇಂಡಿಯಾ” ಎಂಬ ಪುಸ್ತಕದ ಸಹ ಲೇಖಕರಾಗಿದ್ದು ಈ ಗ್ರಂಥದಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ ಎನ್ನುತ್ತಾರೆ ಲೇಖಕರು.
ಬಹುಪತ್ನಿತ್ವದ ಘಟನೆಗಳು ಬೇರೆಬೇರೆ ಸಮುದಾಯಗಳಲ್ಲಿ ಭಿನ್ನವಾಗಿವೆ. ದ್ವಿಪತ್ನಿತ್ವದ ವಿವಾಹಗಳು ಎಲ್ಲಾ ಧರ್ಮಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ ಎನ್ನುತ್ತಾರೆ ಮೆನನ್. ಮತ್ತೊಂದಷ್ಟು ಸರ್ವೆಯು ಇದನ್ನು ದೃಢಪಡಿಸಿದೆ. ೧೯೭೪ ರ ಸರಕಾರಿ ಸಮೀಕ್ಷೆಯ ಪ್ರಕಾರ ಮುಸ್ಲಿಮರಲ್ಲಿ ಬಹುಪತ್ನಿತ್ವದ ಅಂಕಿಅಂಶವನ್ನು ೫.೬% ಮತ್ತು ಮೇಲ್ಜಾತಿ ಹಿಂದೂಗಳಲ್ಲಿ ಇದು ೫.೮% ಎಂದು ಹೇಳಲಾಗಿದೆಯಂತೆ. ೧೯೯೩ ರಲ್ಲಿ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‌ನ ಮಲ್ಲಿಕಾ ಬಿ ಮಿಸ್ತ್ರಿ ನಡೆಸಿದ ಸರ್ವೆ, ಮತ್ತು ಜಾನ್ ದಯಾಳ್ ಅವರ ದಾಖಲೆಯ ಪ್ರಕಾರ, “ಬಹುಪತ್ನಿತ್ವ ವಿವಾಹಗಳು ಮುಸ್ಲಿಮರಲ್ಲಿ ಹಿಂದೂಗಳಿಗಿಂತ ಶೇಕಡಾವಾರು ಹೆಚ್ಚು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ” ಎನ್ನುತ್ತವೆ ದಾಖಲೆಗಳು.
೨೦೦೬ ರಲ್ಲಿ ನಡೆಸಲಾದ ೩ ನೇಯ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯು, ೨% ಮಹಿಳೆಯರು ತಮ್ಮ ಗಂಡಂದಿರು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದಾರೆಂದು ಹೇಳಿದ್ದಾರಂತೆ. ಈ ಸರ್ವೆ ಪ್ರಕಾರ, ಬಹುಪತ್ನಿತ್ವದ ಘಟನೆಗಳು ಧರ್ಮಾಧಾರದಲ್ಲಿ ನೋಡುವದಕ್ಕಿಂತ, ದಂಪತಿಗಳಿಗೆ ಮಕ್ಕಳಾಗದಿರುವ, ಪತಿ-ಪತ್ನಿಯರ ನಡುವಿನ ಹೊಂದಾಣಿಕೆಯ ಕೊರತೆಯˌ ಹಾಗು ಶಿಕ್ಷಣದ ಕೊರತೆಯ ಕಾರಣಗಳನ್ನು ಗುರುತಿಸಲಾಗಿದೆ. ಬಹು ಪತ್ನಿತ್ವದ ವಿವಾಹ ಪ್ರಕರಣಗಳು ಈಶಾನ್ಯ ಭಾರತದಲ್ಲಿ ಹೆಚ್ಚಿದ್ದು, ಆನಂತರದ ಸ್ಥಾನಗಳಲ್ಲಿ ದಕ್ಷಿಣ ಮತ್ತು ಪೂರ್ವ ಭಾರತದ ಭಾಗಗಳಿವೆಯಂತೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ, ಬಹಪತ್ವಿತ್ವದ ಘಟನೆಗಳು ಅತಿ ವಿರಳ ಎನ್ನುವ ಕುರಿತು ಲೇಖಕರು ಉಲ್ಲೇಖಿಸಿದ್ದಾರೆ.
ಮೇಲಿನ ಈ ಎಲ್ಲಾ ಸರ್ವೇಕ್ಷಣೆಗಳು ೧೯೫೦ ರ ಹಿಂದೂ ಕೋಡ್ ಬಿಲ್ ಜಾರಿಯಾದ ನಂತರದ ಕಾಲದ್ದು. ಇದು ಹಿಂದೂಗಳು ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ನಿಷೇಧಿಸುತ್ತದೆ. ಹಿಂದೂ ವಿವಾಹ ಕಾನೂನು ಅಸ್ತಿತ್ವದಲ್ಲಿದ್ದರೂ ಕೂಡ ಜನರು ಪುನಃ ಮದುವೆಯಾಗುವದು ನಿಲ್ಲಿಸಿಲ್ಲ. ಕಾನೂನಿನಲ್ಲಿ ಬಾಲ್ಯವಿವಾಹ ಬೇಡವೆಂದರೂ, ಅದು ಇಂದಿಗೂ ನಿಂತಿಲ್ಲ” ಎನ್ನುವ ಮೆನನ್ ಅವರ ಹೇಳಿಕೆಯನ್ನು ಲೇಖಕರು ಉಲ್ಲೇಖಿಸಿದ್ದಾರೆ. ಅಂಕಿಅಂಶ ಹಾಗು ಸರ್ವೇಕ್ಷಣೆಗಳು ಏನೇ ಹೇಳಲಿ, ಮುಸ್ಲಿಮ್ ಸಮಾಜದಲ್ಲಿ ಬಹುಪತ್ನಿತ್ವ ನಿಷೇಧಿಸಬೇಕು, ಆಗ ಮಾತ್ರ ಸ್ತ್ರೀಯರ ಘನತೆ ಹೆಚ್ಚುತ್ತದೆ ಎಂಬುದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನಕಾರ್ತಿಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರಂತೆ.
ಈ ಚಳುವಳಿಯ ಸಹ-ಸಂಸ್ಥಾಪಕಿ ಝಕಿಯಾ ಸೋಮನ್ “ಲಿಂಗ ಸಮಾನತೆಗಾಗಿ ಹಾಗು ಸ್ತ್ರೀ ಶೋಷಣೆಯ ವಿರುದ್ಧ ಹೋರಾಡಲು ಕಾನೂನಿನ ಬೆಂಬಲ ಬೇಕಿದೆ ಎನ್ನುತ್ತಾರೆ. ಕೇವಲ ಕಾನೂನುಗಳು ಸಮಾಜದಲ್ಲಿ ಬದಲಾವಣೆ ತರಲಾರವು, ಜನರ ತಿಳುವಳಿಕೆಯ ಮಟ್ಟ ಸುಧಾರಿಸದ ಹೊರತು ಇದು ಅಸಾಧ್ಯ. ಆದರೆ ಅದಕ್ಕಾಗಿ ಕಾನೂನಿನ ಬೆಂಬಲ ಬೇಕಿದೆ ಎನ್ನುತ್ತಾರೆ ಝಕಿಯಾ ಅವರು. ಹಿಂದುತ್ವವಾದಿಗಳು ಮಾಮೂಲಿನಂತೆ ಸುಳ್ಳನ್ನು ಅತಿ ಹೆಚ್ಚು ಪ್ರಚಾರ ಮಾಡುತ್ತಾರೆ. ಮುಸ್ಲಿಮ್ ದ್ವೇಷವು ಅವರ ಅಧಿಕಾರ ರಾಜಕೀಯದ ಮುಖ್ಯ ಅಜೆಂಡಾ ಆಗಿದ್ದು, ಜನರು ಈ ಸತ್ಯವನ್ನು ತಿಳಿದುಕೊಳ್ಳುವ ಅಗತ್ಯವಿದೆ.
~ಡಾ. ಜೆ ಎಸ್ ಪಾಟೀಲ.