ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಎಲ್ಲವೂ ನಿರೀಕ್ಷೆಯಂತೆ ಆಗುತ್ತಿದೆ. ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರನ್ನೇ ಪಂಜಾಬ್ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆ ಎಂದು ‘ಪ್ರತಿಧ್ವನಿ’ ಜನವರಿ 28ರಂದೇ ವರದಿ ಮಾಡಿತ್ತು. ಜೊತೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಪಸ್ವರ ಇರುತ್ತದೆ ಎಂಬುದಾಗಿಯೂ ಹೇಳಿತ್ತು. ಈಗ ಅದೇ ರೀತಿ ಆಗುತ್ತಿದೆ. ಭಾನುವಾರ (ಫೆಬ್ರವರಿ 6)ರಂದು ಮಧ್ಯಾಹ್ನ 3ಗಂಟೆಗೆ ರಾಹುಲ್ ಗಾಂಧಿ ಅವರು ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ನವಜೋತ್ ಸಿಂಗ್ ಖ್ಯಾತೆ ತೆಗೆದಿದ್ದಾರೆ.
ನಿಜ, ಯಾವುದೇ ರಾಜಕೀಯ ಪಕ್ಷ ‘ಮ್ಯಾಜಿಕ್ ನಂಬರ್’ ದಾಟಿದಾಗ ಮಾತ್ರವೇ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಉದ್ಭವಿಸುವುದು. ಈಗ ನವಜೋತ್ ಸಿಂಗ್ ಸಿಧು ಇದೇ ಮಾತನ್ನು ಬೇರೆ ರೀತಿ ಹೇಳುತ್ತಿದ್ದಾರೆ. ‘117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ 60 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ. ಈ ಮೂಲಕ 60 ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಆಯ್ಕೆ ಮಾಡುವಂತಹ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ನಾಳೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಇಟ್ಟುಕೊಂಡು ಇಂದು ಸಿಧು ಸಲಹೆ ಕೊಟ್ಟಿರುವುದರ ಉದ್ದೇಶ ಸ್ಪಷ್ಟ. ಚರಣಜಿತ್ ಸಿಂಗ್ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ವಿಷಯ ನವಜೋತ್ ಸಿಂಗ್ ಸಿಧುಗೆ ಅರಿವಾಗಿದೆ. ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗುವುದಿಲ್ಲ ಎಂಬುದು ಖಾತರಿಯಾಗಿದೆ. ಈ ಹಿನ್ನಲೆಯಲ್ಲಿ ಈಗ ಅವರು ಹೊಸ ವರಸೆ ಆರಂಭಿಸಿದ್ದಾರೆ.
ಚರಣಜಿತ್ ಸಿಂಗ್ ಚನ್ನಿಯೇ ಏಕೆ ಸಿಎಂ ಅಭ್ಯರ್ಥಿ?
ಚರಣಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿ ಆದ ಬಳಿಕ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಬಹುತೇಕರಲ್ಲಿ ಅವರಿಗೆ ಇನ್ನೊಂದು ಅವಕಾಶ ಕೊಡಬೇಕು ಎಂಬ ಅಭಿಪ್ರಾಯ ಇದೆ. ಚರಣಜಿತ್ ಸಿಂಗ್ ಚನ್ನಿ ಮೂಲ ಕಾಂಗ್ರೆಸಿಗರು. ನವಜೋತ್ ಸಿಂಗ್ ಸಿಧು ಬಿಜೆಪಿಯಿಂದ ಬಂದವರು. ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಬದಲಿಸಿದರೆ ಟೀಕೆಗಳು ಬರಲಿವೆ.
ಜಾತಿ ಲೆಕ್ಕಾಚಾರ ಕೂಡ ಚನ್ನಿ ಪರವಾಗಿಯೇ ಇದೆ. ಪಂಜಾಬಿನಲ್ಲಿ ಶೇಕಡಾ 23ರಷ್ಟು ಜಾಟ್ ಸಿಖ್ ಮತದಾರರಿದ್ದಾರೆ. ಶೇಕಡಾ 36ರಷ್ಟು ದಲಿತ್ ಸಿಖ್ ಮತದಾರರಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಜಾಟ್ ಸಿಖ್ ಸಮುದಾಯದವರು. ಹಾಗಾಗಿಯೇ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ. ಹಿಂದೆ ಜಾಟ್ ಸಿಖ್ ಸಮುದಾಯ ಬೆಂಬಲಿಸಿದ ಕಾರಣಕ್ಕಾಗಿಯೇ ಅಖಾಲಿದಳ- ಬಿಜೆಪಿ ಸರ್ಕಾರ ಬರಲು ಸಾಧ್ಯವಾಗಿತ್ತು. ಜಾಟ್ ಸಿಖ್ ಪ್ರಾಬಲ್ಯದ ಕಾರಣಕ್ಕಾಗಿಯೇ ಆಮ್ ಆದ್ಮಿ ಪಕ್ಷ ಕೂಡ ಅದೇ ಸಮುದಾಯದ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರುವುದು. ದಲಿತ್ ಸಿಖ್ ಮತದಾರರ ಸಂಖ್ಯೆ ಶೇಕಡಾ 36ರಷ್ಟಿದ್ದರೂ ಅವರು ಬಿಜೆಪಿ, ಅಖಾಲಿದಳದ ಜೊತೆಗೆ ಹೋಗಲಾರರು. ಅನಿವಾರ್ಯವಾಗಿ ಕಾಂಗ್ರೆಸ್ ಅನ್ನೇ ಬೆಂಬಲಿಸಬೇಕಾಗಿದೆ.

ಜಾಟ್ ಸಿಖ್ ಸಮುದಾಯ ಇಷ್ಟೆಲ್ಲಾ ಪ್ರಭಾವ ಹೊಂದಿದ್ದರೂ ಈ ಬಾರಿ ಕಾಂಗ್ರೆಸ್ ಚರಣಜಿತ್ ಸಿಂಗ್ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಮಾಡುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಇಷ್ಟು ದಿನ ದಲಿತ್ ಸಿಖ್ ಎದುರಿಸುತ್ತಿದ್ದ ಸಮಸ್ಯೆಯನ್ನು ಈಗ ಜಾಟ್ ಸಿಖ್ ಸಮುದಾಯ ಎದುರಿಸುತ್ತಿದೆ. ಕಾಂಗ್ರೆಸ್ ದಲಿತ್ ಸಿಖ್ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ತಕ್ಷಣ ಜಾಟ್ ಸಿಖ್ ಸಮುದಾಯ ಸಿಡಿದೆದ್ದು ಬಿಜೆಪಿ ಅಥವಾ ಅಖಾಲಿ ದಳವನ್ನು ಬೆಂಬಲಿಸಲು ಸಾಧ್ಯವಿಲ್ಲ. ಕೃಷಿ ಕಾನೂನುಗಳ ವಿಷಯದಲ್ಲಿ ದೊಡ್ಡ ಮಟ್ಟದ ಪೆಟ್ಟು ತಿಂದಿರುವವರು ಇದೇ ಜಾಟ್ ಸಿಖ್ ಮತದಾರರು. ಈ ಎಲ್ಲಾ ಹಿನ್ನಲೆಯಲ್ಲಿ ಚನ್ನಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಚೆನ್ನ ಎಂದು ಕಾಂಗ್ರೆಸ್ ನಿರ್ಧರಿಸಿದೆ.
ಅಂದೇ ಸುಳಿವು ನೀಡಿದ್ದ ರಾಹುಲ್ ಗಾಂಧಿ
ಜನವರಿ 27ರಂದು ಪಂಜಾಬ್ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ‘ಪಂಜಾಬ್ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಕಾರ್ಯಕರ್ತರು ಶೀಘ್ರವೇ ನಿರ್ಧರಿಸಲಿದ್ದಾರೆ’ ಎಂದು ಹೇಳಿದ್ದಾರೆ. ಅಲ್ಲದೆ ‘ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲು ಸಾಧ್ಯವಿಲ್ಲ. ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರಲ್ಲಿ ಯಾರದೇ ಹೆಸರನ್ನು ಪ್ರಕಟಿಸಿದರೂ ಇನ್ನೊಬ್ಬರು ಬೆಂಬಲಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದರು. ಇದಾದ ಮೇಲೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಕಾರ್ಯಕರ್ತರು ಚರಣಜಿತ್ ಸಿಂಗ್ ಚನ್ನಿ ಹೆಸರನ್ನೇ ಸೂಚಿಸಿದ್ದಾರೆ. ಈಗ ರಾಹುಲ್ ಗಾಂಧಿ ಚರಣಜಿತ್ ಸಿಂಗ್ ಚನ್ನಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಸಿಎಂ ಅಭ್ಯರ್ಥಿಯನ್ನು ಘೋಷಿಸಲೇ ಬೇಕು ಏಕೆ?
ಆಮ್ ಆದ್ಮಿ ಪಕ್ಷ ಸಂಸದ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡದೇ ಇದ್ದರೆ ಕಾಂಗ್ರೆಸ್ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆಮ್ ಆದ್ಮಿ ಪಕ್ಷ ತಾನು ಸಿಎಂ ಅಭ್ಯರ್ಥಿಯನ್ನು ಘೋಷಿಸಿದ್ದಷ್ಟೇಯಲ್ಲದೆ ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಶೀತಲ ಸಮರ ನಡೆಯುತ್ತಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುತ್ತಿಲ್ಲ ಎಂದು ಹೇಳುತ್ತಿದೆ. ಇದರಿಂದ ಜಾಟ್ ಸಿಖ್ ಮತ್ತು ದಲಿತ್ ಸಿಖ್ ಎರಡೂ ಸಮುದಾಯಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಇದನ್ನು ತಪ್ಪಿಸಲು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಿದೆ. ಜೊತೆಗೆ ರಾಹುಲ್ ಗಾಂಧಿ ಅವರು ‘ಚನ್ನಿ ಹಾಗೂ ಸಿಧು ಇಬ್ಬರಲ್ಲಿ ಯಾರದೇ ಹೆಸರನ್ನು ಪ್ರಕಟಿಸಿದರೂ ಇನ್ನೊಬ್ಬರು ಬೆಂಬಲಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿರುವ ಮೂಲಕ ಇಬ್ಬರ ವಿಶ್ವಾಸ ಗಳಿಸಿದ್ದಾರೆ ಎನ್ನಲಾಗುತ್ತಿದೆ. ಇಷ್ಟಕ್ಕೂ ಮೀರಿ ಅಧಿಕೃತ ಘೋಷಣೆಯ ಬಳಿಕ ಸಿಧು ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾಗಿರಲಿದೆ.