ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ನಲ್ಲಿ ದ್ವೇಷದ ರಾಜಕಾರಣ ಮಾಡಲಾಗ್ತಿದೆ ಎಂದು ಬಿಜೆಪಿ ಹಾಗು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಫೆಬ್ರವರಿಯಲ್ಲಿ ನಡೆದಿದ್ದ ಘಟನೆಗೆ ಜೂನ್ನಲ್ಲಿ ಬಂಧನದ ವಾರೆಂಟ್ ಜಾರಿ ಮಾಡುವ ಮೂಲಕ ಮಾಜಿ ಸಿಎಂ B.S Yadiyurappa ಅವರನ್ನು ಬಂಧನ ಮಾಡಲು CID ಪೊಲೀಸರು ತಯಾರಿ ನಡೆಸಿದ್ದರು. ಆದರೆ ಇದೀಗ ‘ದ್ವೇಷದ ರಾಜಕಾರಣ’ಕ್ಕೆ ಹೈಕೋರ್ಟ್ ತಡೆ ನೀಡಿರುವ ಕಾರಣ ಮಾಜಿ ಸಿಎಂ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಈ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ ಆದಂತೆ ಆಗಿದೆ. ಹೈಕೋರ್ಟ್ನಲ್ಲಿ ಸ್ವಾರಸ್ಯಕರ ವಾದ ಪ್ರತಿವಾದ ಹೇಗಿತ್ತು ಅನ್ನೋದನ್ನು ನೋಡೋದಾದರೆ..
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೋಕ್ಸೊ ಸೆಕ್ಷನ್ 8 ಅಡಿಯಲ್ಲಿ ಕೇಸ್ ದಾಖಲಾಗಿದೆ. ಫೆಬ್ರವರಿ 2ರ ಘಟನೆ ಬಗ್ಗೆ ಮಾರ್ಚ್ 14 ರಂದು ಎಫ್ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ದೂರುದಾರ ಮಹಿಳೆ ಹಿನ್ನಲೆ ಬಗ್ಗೆ ಸಿ.ವಿ ನಾಗೇಶ್ ಕೋರ್ಟ್ ಗಮನ ಸೆಳೆದಿದ್ದು, ಬೇರೆಯವರಿಗೆ ಬ್ಲಾಕ್ ಮೇಲ್ ಮಾಡುವುದೇ ಆ ಮಹಿಳೆ ಕೆಲಸ. ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಕೇಸ್ ಹಾಕುವುದೇ ಆ ಮಹಿಳೆಯ ಹವ್ಯಾಸ.. ಬ್ಯುಸಿನಸ್ ವುಮೆನ್ ಎಂದು ವ್ಯಂಗ್ಯ ಮಾಡಿದ್ದಾರೆ. ಮಹಿಳೆಯ ಮೇಲೆ 3 ಮೂರು ದೂರುಗಳು ದಾಖಲಾಗಿದೆ.
ಯಾವಾವ ಸೆಕ್ಷನ್ ಮೇಲೆ ಪ್ರಕರಣ ದಾಖಲಾಗಿದೆ..? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸ್ ಕೆಲಸಕ್ಕೆ ಅಡ್ಡಿಪಡಿಸಿದ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಆ ಕೇಸ್ನಲ್ಲಿ ಮಹಿಳೆಯನ್ನು ಅರೆಸ್ಟ್ ಮಾಡಿದ್ರಾ…? ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ಈ ವೇಳೆ ಇಲ್ಲ ಯಾವುದೇ ಕೇಸ್ನಲ್ಲಿ ಬಂಧನ ಆಗಿಲ್ಲ ಎಂದಿರುವ ಅಡ್ವೊಕೇಟ್ ಜನರಲ್ ಶಶಿಕಿರಣ್ ಒಂದು ಪ್ರಕರಣ ರದ್ದಾಗಿದೆ.. ಒಂದು ಪ್ರಕರಣ ಟ್ರಯಲ್ ನಡೆಯುತ್ತಿದೆ. ಇನ್ನೊಂದು ತನಿಖೆಯಲ್ಲಿ ಇದೆ ಎಂದಿದ್ದಾರೆ.
ಆಕೆ ಪೊಲೀಸ್ ಅಧಿಕಾರಿಗಳ ಮೇಲೂ ಆರೋಪ ಮಾಡಿದ್ದಾರಾ..? ಎನ್ನುವ ಜಡ್ಜ್ ಪ್ರಶ್ನೆಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಉತ್ತರಿಸಿ ಹೌದು ಮಾಡಿದ್ದಾರೆ.. ಪಿಟಿಷನ್ಗಳನ್ನು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪ ಮಾಡಲಾಗಿಲ್ಲ. ಯಾವುದೇ ಅಧಿಕಾರಿಯ ವಿರುದ್ಧ ಯಾವುದೇ ಆರೋಪ ಮಾಡಲಾಗಿಲ್ಲ. ಆದರೆ, ಪ್ರಕರಣದ ತನಿಖೆಯ ಬಗ್ಗೆ ಅತೃಪ್ತಿಯನ್ನು ದೂರುದಾರೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ವಿರುದ್ಧದ 23 ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಮತ್ತು ಹಾಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧವೂ ಆರೋಪ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಪ್ರಕರಣಗಳ ಸ್ಥಿತಿಗತಿ ತಿಳಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಎಲ್ಲವನ್ನೂ ದಾಖಲೆಯಲ್ಲಿ ಸಲ್ಲಿಸಲಾಗುವುದು ಎಂದು ಕೋರ್ಟ್ಗೆ ಮಾಹಿತಿ ನೀಡಲಾಗಿದೆ.
ಅಲೋಕ್ ಕುಮಾರ್ ಮೇಲೆ 7 ಪಿಟಿಷನ್ ನೀಡಿದ್ದಾರೆ. ಭಾಸ್ಕರ್ ರಾವ್ ವಿರುದ್ಧ 2 ಪಿಟಿಷನ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶ ಮಾಡಿ ದೂರಿನ ಸಾರಾಂಶ ಓದಿದ ಸಿ.ವಿ ನಾಗೇಶ್, ಅಲೋಕ್ ಕುಮಾರ್ ಮೇಲೆ ಹನಿಟ್ರ್ಯಾಫ್ ಆರೋಪ ಮಾಡಿದ್ದಾರೆ ಎಂದಿದ್ದಾರೆ. ಈ ವೇಳೆ ನಾನು ಇಲ್ಲಿ ಹಾಜರಾಗಿರುವುದು ಪ್ರಕರಣ ರದ್ದು ಕೋರಿ ಹಾಕಿರೋ ಅರ್ಜಿ ವಿಚಾರಣೆಗೆ ಎಂದಿದ್ದಾರೆ ಅಡ್ವೊಕೇಟ್ ಜನರಲ್. ಸಂತ್ರಸ್ತೆ ತನ್ನ ಮಗಳ ಮೇಲೆ ಆಗಿರೋ ದೌರ್ಜನ್ಯದ ಮಾಹಿತಿ ನೀಡಿದ್ದಾರೆ. ಸಂತ್ರಸ್ಥೆ ಬಾಲಕಿಯಾಗಿದ್ದು, ಆಕೆಯ ಮೇಲೆ ಒಂದು ದೂರು ದಾಖಲಾಗಿದೆ. ಆಕೆಯಿಂದ 164 ಹೇಳಿಕೆ ದಾಖಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಮಾಹಿತಿ ಕೊಟ್ಟಿದ್ದಾರೆ.
ಮ್ಯಾಜಿಸ್ಟ್ರೇಟ್ ಅವರು ಯಡಿಯೂರಪ್ಪ ವಿರುದ್ಧ ವಾರೆಂಟ್ ಜಾರಿ ಮಾಡಿದ್ದಾರೆ. ತನಿಖಾಧಿಕಾರಿ ಮಾಹಿತಿ ಬಚ್ಚಿಟ್ಟು ವಾರೆಂಟ್ ಜಾರಿ ಮಾಡಲು ಕೋರಿದ್ದಾರೆ. ಇದಕ್ಕೆ ನ್ಯಾಯಾಲಯ ಅನುಮತಿಸಿದೆ ಎಂದು ಸಿ.ವಿ ನಾಗೇಶ್ ಕೋರ್ಟ್ಗೆ ತಿಳಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಅದಕ್ಕೆ ಯಡಿಯೂರಪ್ಪ ಸಮಯ ಕೇಳಿದಾಗ ತನಿಖಾಧಿಕಾರಿ ವಾರೆಂಟ್ ಜಾರಿ ಮಾಡಲು ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.. ತನಿಖಾಧಿಕಾರಿ ನೋಟಿಸ್ ನೋಡಿದಾಗ ಅದಕ್ಕೆ ಯಡಿಯೂರಪ್ಪ ಹಾಜರಾಗಿ ಧ್ವನಿ ಮಾದರಿ ನೀಡಿದ್ದಾರೆ.
ಪ್ರಕರಣದಲ್ಲಿ ಎಲ್ಲ ಧ್ವನಿ ಪರೀಕ್ಷೆಯನ್ನು ಮಾಡಿದ್ದಾರೆ. ಏಪ್ರಿಲ್ 12 ರಲ್ಲಿಯೇ ವಿಚಾರಣೆಗೆ ಹಾಜರಾಗಿ ಧ್ವನಿ ಮಾದರಿ ನೀಡಿದ್ದಾರೆ. ತನಿಖೆಗೆ ಇಷ್ಟೆಲ್ಲಾ ಸಹಕಾರವನ್ನು ನೀಡಿದ್ದಾರೆ. ಪ್ರಕರಣ ಯಾವಾಗ ದಾಖಲಾಯ್ತು..? ತನಿಖೆಯ ಮೊದಲ ಹಂತ ಏನು..? ಮೊದಲು ನೋಟಿಸ್ ನೀಡಿದ ಕೂಡಲೇ ವಿಚಾರಣೆಗೆ ಹಾಜರಾಗಿದ್ದಾರೆ ಎಂದಿದ್ದಾರೆ. ಈ ವೇಳೆ ಈಗ ಯಾಕೆ ಅರೆಸ್ಟ್ ಮಾಡಬೇಕಿದೆ..? ಎಂದು ಕೋರ್ಟ್ ಪ್ರಶ್ನಿಸಿದೆ. ಈ ವೇಳೆ ಅವರು ವಿಚಾರಣೆಗೆ ಬಂದಿಲ್ಲ ಎಂದು ಅಡ್ವೊಕೇಟ್ ಜನರಲ್ ಮಾಹಿತಿ ನೀಡಿದ್ದಾರೆ. ಧ್ವನಿ ಮಾದರಿ ಸಂಗ್ರಹ ಮಾಡಲಾಗಿದೆ.. ವಿಚಾರಣೆ ಆಗಿದೆ ಈಗ ಯಾಕೆ ಬಂಧನ ಅನಿವಾರ್ಯತೆ ಇದೆ ಎಂದು ಮರು ಪ್ರಶ್ನೆ ಮಾಡಿದೆ ಕೋರ್ಟ್.
ಈಗ ಧ್ವನಿ ಪರೀಕ್ಷೆಯ ವರದಿ ಬಂದಿದೆ.. ಮೊಬೈಲ್ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಸತ್ಯಾಸತ್ಯತೆ ಗೊತ್ತಾಗಿದೆ.. ಎಫ್ಐಆರ್ ನಂತರ ತನಿಖೆ ಯಾವಾಗ ಆರಂಭವಾಯಿತು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಮಾರ್ಚ್ 14 ರ ಎಫ್ಐಆರ್ ನಂತರ ಏಪ್ರಿಲ್ 12ರಂದು ನೋಟಿಸ್ ನೀಡಿದ್ದಾರೆ.. ಅಲ್ಲೀವರೆಗೂ ಪೊಲೀಸರು ಏನು ಮಾಡಿದರೆಂಬುದು ತಿಳಿದಿಲ್ಲ ಎಂದು ಸಿ ವಿ ನಾಗೇಶ್ ಮಧ್ಯಪ್ರವೇಶ ಮಾಡಿದ್ದಾರೆ. ಈ ವೇಳೆ ನೀವು ಏಕೆ ಯಡಿಯೂರಪ್ಪ ಅವರನ್ನು ಬಂಧಿಸಬೇಕು..? ಎಂದು ಪೀಠ ಪ್ರಶ್ನಿಸಿದೆ.
ಧ್ವನಿ ಮಾದರಿ ಪಡೆಯಲಾಗಿದೆ. ಫೆಬ್ರವರಿ 2ರಂದು ನಡೆದ ಘಟನೆಯ ಬಗ್ಗೆ ಅಸಲಿಯತ್ತು ತಿಳಿಯಲು ಧ್ವನಿ ಮಾದರಿ, ಮೊಬೈಲ್ ಕುರಿತಾದ ಎಫ್‌ಎಸ್‌ಎಲ್ ವರದಿ ಪಡೆಯಲಾಗಿದೆ.. 2024ರ ಮಾರ್ಚ್ 17ರಂದು ಯಡಿಯೂರಪ್ಪ ಅವರ ಮೊಬೈಲ್ ಜಪ್ತಿ ಮಾಡಲಾಗಿದೆ. ಏಪ್ರಿಲ್ 6ರಂದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಮೇ 13ರಂದು ವರದಿ ಬಂದಿದೆ. ಗುಜರಾತ್ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಅವುಗಳನ್ನು ಮತ್ತೆ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಎಫ್‌ಎಸ್‌ಎಲ್ ಪ್ರಕ್ರಿಯೆ ಬಗ್ಗೆ ಪೀಠಕ್ಕೆ ವಿವರಿಸಿದ್ದಾರೆ ಅಡ್ವೊಕೇಟ್ ಜನರಲ್ ಶಶಿಕಿರಣ್.
ಸುಟ್ಟ ಮೊಬೈಲ್ ಚಿಪ್ನಲ್ಲಿದ್ದ ಡಾಟಾ ತೆಗೆಯಲು ಗುಜರಾತ್ ಎಫ್‌ಎಸ್‌ಎಲ್‌ಗೆ ಕಳುಹಿಸಲಾಯಿತು.. ಅದಾದ ನಂತರ ಧ್ವನಿ ಪರೀಕ್ಷೆಗೆ ಬೆಂಗಳೂರು ಎಫ್‌ಎಸ್‌ಎಲ್‌ಗೆ ಕಳುಹಿಸಲಾಯಿತು ಎಂದು ತನಿಖಾಧಿಕಾರಿ ಎಡಿಜಿಪಿ ಬಿ.ಕೆ.ಸಿಂಗ್ ಹೈಕೋರ್ಟ್ಗೆ ಹೇಳಿದ್ದಾರೆ. ಈಗ ತನಿಖೆ ನಡೆಯುತ್ತಿದೆ. ಈಗ ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ. ಈ ವೇಳೆ ಕಸ್ಟಡಿಗೆ ಪಡೆಯುವ ಅಗತ್ಯ ಎಲ್ಲಿದೆ ? ಎಂದು ಪೀಠ ಪ್ರಶ್ನಿಸಿದೆ. ಬೆಳಗ್ಗೆ 11.30ಕ್ಕೆ ನೋಟಿಸ್ ನೀಡಲಾಗಿದ್ದು, ಯಡಿಯೂರಪ್ಪ ಅವರು ಸಂಜೆ 5.30ಕ್ಕೆ ವಿಮಾನ ಬುಕ್ ಮಾಡಿ ದೆಹಲಿಗೆ ಹಾರಿದ್ದಾರೆ. ಒಂದೊಮ್ಮೆ ನಾಳೆ ಬರದಿದ್ದರೂ ಮಾರನೇಯ ದಿನ ಬಂದರೆ ಏನಾಗುತ್ತದೆ..? ಆಕಾಶ ಕಳಚಿ ಬೀಳಲಿದೆಯೇ..? ಬಿ.ಎಸ್ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ.. ಅವರು ದೇಶ ತೊರೆಯುತ್ತಾರೆ ಎಂಬುದು ನಿಮ್ಮ ಅನುಮಾನವೇ..? ಎಂದು ಪ್ರಶ್ನಿಸಿದೆ ಕೋರ್ಟ್.
ಹೆಚ್ಚುವರಿ ಎಸ್‌ಪಿಪಿ ಜಗದೀಶ್ ಬಿ.ಎಸ್ ಯಡಿಯೂರಪ್ಪ ಕಸ್ಟಡಿ ಅಗತ್ಯದ ಬಗ್ಗೆ ವಿವರಣೆ ನೀಡಿದ್ದಾರೆ. ದೂರುದಾರರಿಗೆ ಹಣ ನೀಡಿ ಪ್ರಕರಣ ಮುಚ್ವಿ ಹಾಕಲು ಯತ್ನ ಮಾಡಿದ್ದಾರೆ.. ಹೀಗಾಗಿ ಬಂಧನದ ಅಗತ್ಯವಿದೆಯೆಂದು ವಾರೆಂಟ್ ಪಡೆಯಲಾಗಿದೆ ಎಂದು ಅಡ್ವೊಕೇಟ್ ಜನರಲ್ ಮಾಹಿತಿ ನೀಡಿದ್ದಾರೆ. ದೂರುದಾರರಿಗೆ ಹಣ ನೀಡಿ ಪ್ರಕರಣ ಮುಚ್ವಿ ಹಾಕಲು ಯತ್ನ ಮಾಡಿದ್ದಾರೆ. ಹೀಗಾಗಿ ಬಂಧನದ ಅಗತ್ಯವಿದೆ ಎಂದು ವಾರೆಂಟ್ ಪಡೆಯಲಾಗಿದೆ. ಜೂನ್ 12ರಂದು ತನಿಖೆಗೆ ಹಾಜರಾಗದಿದ್ದರಿಂದ ವಾರೆಂಟ್ ಪಡೆಯಲಾಗಿದೆ ಎಂದಿದ್ದಾರೆ. ಈ ವೇಳೆ ಮಾಜಿ ಸಿಎಂ ತನಿಖೆಗೆ ಬರಲ್ಲ ಎಂದು ಹೇಗೆ ಭಾವಿಸಿದ್ರಿ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಕೃಷ್ಣಮಣಿ