ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯವನ್ನು ಸುತ್ತಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ನಾವು ಹೀಗೆ ಕೆಲಸ ಮಾಡುತ್ತೇವೆ, ಇಷ್ಟು ಅಭಿವೃದ್ಧಿ ಮಾಡ್ತೇವೆ ಎಂದು ಭರವಸೆಗಳ ಪಟ್ಟಿಯನ್ನೇ ನೀಡುತ್ತಿವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರು ಮಾತ್ರ ಅಭಿವೃದ್ಧಿ ವಿಚಾರ ಬೇಕಾಗಿಲ್ಲ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯಬೇಕು. ಟಿಪ್ಪು ವರ್ಸಸ್ ಸಾವರ್ಕರ್ ಎಂದಿದ್ದರು. ಅದಕ್ಕೂ ಮೊದಲು ಚರಂಡಿ, ರಸ್ತೆಗುಂಡಿ ಎಂದು ಮತ ನೀಡಬೇಡಿ, ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಲವ್ ಜಿಹಾದ್’ಗೆ ಒಳಗಾಗಬಾರದು ಅನ್ನೋ ಕಾರಣಕ್ಕೆ ಬಿಜೆಪಿಗೆ ಮತ ನೀಡಿ ಎಂದು ನೇರವಾಗಿಯೇ ಹೇಳಿದ್ದರು. ಆ ಮಾತನ್ನು ರಾಜ್ಯ ಬಿಜೆಪಿ ನಾಯಕರೂ ಸಮರ್ಥಿಸಿಕೊಂಡಿದ್ದರು. ಇದರ ನಡುವೆ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಪಕ್ಷ 40 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿ ಅಭಿಯಾನ ಮಾಡಿತ್ತು. ಅದನ್ನು ಬಿಜೆಪಿ ಅಲ್ಲಗಳೆದಿತ್ತು. ಆದರೆ ಅದು ಸತ್ಯ ಎನ್ನುವಂತೆ ಮಾಡಿದೆ ಈ ಪ್ರಕರಣಗಳು. ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಯಾವುದೇ ಪುರಾವೆ ಬೇಕಿಲ್ಲ.
ಮಕ್ಕಳಿಗೆ ಗುತ್ತಿಗೆ ಕೊಟ್ಟು ತಗ್ಲಾಕೊಂಡ BJP ಶಾಸಕ..!
ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ನೆಹರು ಓಲೇಕಾರ್ ಹಾಗು ಇಬ್ಬರು ಪುತ್ರರು ಸೇರಿ ಐವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ನೀಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗು ಎರಡು ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ ಮಾಡಿದೆ. 2012 ರಲ್ಲಿ ನಗರಸಭೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದ ಶಾಸಕ ನೆಹರು ಓಲೇಕಾರ್ ಹಾಗು ಮಕ್ಕಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ5 ಕೋಟಿ 35 ಲಕ್ಷ ರೂಪಾಯಿ ಹಣವನ್ನು ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎನ್ನುವುದನ್ನು ಕೋರ್ಟ್ ಒಪ್ಪಿಕೊಂಡಿದೆ. ಕ್ಲಾಸ್ ಓನ್ ಗುತ್ತಿಗೆದಾರ ಪ್ರಮಾಣಪತ್ರವನ್ನು ನಕಲಿಯಾಗಿ ಪಡೆದುಕೊಂಡು ಕಾಮಗಾರಿ ಮಾಡಿರುವುದು ಸಾಬೀತು ಆಗಿದೆ. ಆರೋಪಿ 1 ನೆಹರು ಓಲೇಕಾರ್, ಆರೋಪಿ 2 ಮಂಜುನಾಥ್ ಓಲೇಕಾರ್, ಆರೋಪಿ 3 ದೇವರಾಜ್ ಓಲೇಕಾರ್ ಆಗಿದ್ದು, ಆರೋಪಿ 4 ಎಚ್.ಕೆ ರುದ್ರಪ್ಪ, ಆರೋಪಿ 5 ಎಚ್.ಕೆ.ಕಲ್ಲಪ್ಪ, ಆರೋಪಿ 7 ಶಿವಕುಮಾರ್ ಪಿ, ಆರೋಪಿ 8 ಚಂದ್ರಮೋಹನ್ ಪಿ.ಎಸ್ ಎಂಬುವರ ಆರೋಪ ಸಾಬೀತಾಗಿದೆ. ಜೊತೆಗೆ ಕೋರ್ಟ್ನಲ್ಲಿ ಜಾಮೀನು ಪಡೆದುಕೊಳ್ಳಲಾಗಿದೆ.
ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ..!

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕ ಆಗಿರುವ ಎಂ.ಪಿ ಕುಮಾರಸ್ವಾಮಿಗೆ ಬರೋಬ್ಬರಿ 4 ವರ್ಷ ಜೈಲು ಶಿಕ್ಷೆಯಾಗಿದೆ. 8 ಜನರಿಗೆ ಎಂ.ಪಿ ಕುಮಾರಸ್ವಾಮಿ 1 ಕೋಟಿ 38 ಲಕ್ಷದ 65 ಸಾವಿರ ರೂಪಾಯಿ ಹಣಕ್ಕೆ ಎಲ್ಲರಿಗೂ ಚೆಕ್ ವಿತರಣೆ ಮಾಡಿದ್ದು, ಅದರಲ್ಲಿ 1 ಕೋಟಿ 36 ಲಕ್ಷದ 50 ಸಾವಿರ ಹಣ ಬಾಕಿ ಉಳಿಸಿಕೊಂಡಿದ್ದು. ಊವಪ್ಪಗೌಡ ಎಂಬುವವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ರು. ಈ ಹಿಂದೆ ಜಾಮೀನು ರಹಿತ ವಾರೆಂಟ್ ಕೂಡ ಜಾರಿಯಾಗಿತ್ತು. ಆದರೆ ಅನಾರೋಗ್ಯ ಕಾರಣ ನೀಡಿ ತಪ್ಪಿಸಿಕೊಂಡಿದ್ದರು. ಇದೀಗ ಎಂಪಿ ಕುಮಾರಸ್ವಾಮಿ ಪರ ವಕೀಲರಿಗೆ ಜನಪ್ರತಿನಿಧಿಗಳ ಕೋರ್ಟ್ 10 ದಿನಗಳ ಕಾಲಗಳ ಕಾಲಾವಕಾಶ ನೀಡಿದ್ದು, ಹತ್ತು ದಿನದಲ್ಲಿ ಹಣ ವಾಪಸ್ ಮಾಡಿಲ್ಲ ಅಂದ್ರೆ ಒಂದೊಂದು ಕೇಸ್ಗೆ ಸಂಬಂಧಿಸಿದಂತೆ ತಲಾ 6 ತಿಂಗಳ ಸಾದಾ ಜೈಲು ಶಿಕ್ಷೆ. ಅಂದರೆ ಒಟ್ಟು 4 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ಸೂಚನೆ ನೀಡಿದ್ದಾರೆ.
ಒಂದು ಕೇಸ್’ನಲ್ಲಿ ಭ್ರಷ್ಟಾಚಾರ, ಮತ್ತೊಂದು ವಂಚನೆ..!
2012ರಲ್ಲಿ ಅಂದರೆ ಬಿಜೆಪಿ ಸರ್ಕಾರದಲ್ಲೇ ಮೋಸ ಮಾಡಿ 5 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿರುವುದು ಸಾಬೀತಾಗಿದೆ. ಭ್ರಷ್ಟಾಚಾರ ಮಾಡಿರುವ ಕೇಸ್ನಲ್ಲಿ ಇಂದಲ್ಲ ನಾಳೆ ಶಿಕ್ಷೆ ಆಗುವುದು ಖಚಿತ. ಇನ್ನೊಂದು ಪ್ರಕರಣದಲ್ಲಿ ಶಾಸಕನೇ ಚೆಕ್ ಕೊಟ್ಟು ವಂಚನೆ ಮಾಡಿರುವುದು ಸಾಬೀತಾಗಿದೆ. ಇದು ಕಾಂಗ್ರೆಸ್ ಹಾಗು ಜೆಡಿಎಸ್ ಪಾಲಿಗೆ ಹಾಲು ಅನ್ನ ಎನ್ನುವಂತಾಗಿದೆ. ಜನರ ಎದುರು ಅಸಲಿ ಘಟನೆಗಳನ್ನೇ ಇಟ್ಟು ಜನರಿಗೆ ತೋರಿಸಬಹುದಾಗಿದೆ. ನಾಯಕರು ಎನಿಸಿಕೊಂಡವರೇ ಈ ರೀತಿ ಭ್ರಷ್ಟಾಚಾರ, ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪ ಎನ್ನುವಂತಾಗಿದೆ. ಇದನ್ನು ಬಿಜೆಪಿ ನಾಯಕರು ಯಾವ ರೀತಿ ನಿಬಾಯಿಸುತ್ತಾರೆ ಎನ್ನುವುದು ಕುತೂಹಲಕಾರಿ.