ಕೇಂದ್ರ ಮಂತ್ರಿಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಲೋಕ ಜನಶಕ್ತಿ ಪಕ್ಷದ ನೇತೃತ್ವ ವಹಿಸಿದ್ದ ಚಿರಾಗ್ ಪಾಸ್ವಾನ್, ಈಗ ನಡು ನೀರಿನಲ್ಲಿ ಒಂಟಿಯಾಗಿ ನಿಂತಿದ್ದಾರೆ. LJPಯ ವಿಶ್ವಾಸಾರ್ಹ ನಾಯಕರು ಏಕಾಏಕಿ ಚಿರಾಗ್ ಪಾಸ್ವಾನ್ ವಿರುದ್ದ ತಿರುಗಿ ಬಿದ್ದಿದ್ದು, ಪಕ್ಷದಲ್ಲಿ ಚಿರಾಗ್ ಅವರ ಅಸ್ಥಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.

ಬಿಜೆಪಿ ಮತ್ತು ಜೆಡಿಯು ಜತೆಗಿನ ಒಳ ಒಪ್ಪಂದಿದಾಗಿ, LJPಯ ಆರು ಜನ ಸಂಸದರಲ್ಲಿ ಐದು ಜನರು ಚಿರಾಗ್ ವಿರುದ್ದ ಬಂಡೆದಿದ್ದಾರೆ. ಈಗ LJPಯ ನಾಯಕರಾಗಿ ಚಿರಾಗ್ ಕುಟುಂಬದವರೇ ಆಗಿರುವ ಪಶುಪತಿ ಕುಮಾರ್ ಪರಾಸ್ ಅವರು ಆಯ್ಕೆಯಾಗಿದ್ದಾರೆ. ವಿಧಾನಸಭೆ ಚುನಾವಣೆಯ ವೇಳೆ ನಿತೀಶ್ ಕುಮಾರ್ ವಿರುದ್ದ ಸಿಡಿದೆದ್ದು, ರಾಜ್ಯದಲ್ಲಿ ಎನ್ ಡಿ ಎ ಮೈತ್ರಿಕೂಟವನ್ನು ತೊರೆದಿದ್ದರಿಂದ ಪ್ರತಿಫಲವಾಗಿ ಈ ಘಟನೆಗಳು ನಡೆಯುತ್ತಿವೆ.
ವಿಧಾನಸಭಾ ಚುನಾವಣೆಯ ವೇಳೆ ನಿತೀಶ್ ವಿರುದ್ದ ಮುನಿಸಿಕೊಂಡು ಚಿರಾಗ್ ಪಾಸ್ವಾನ್ ಅವರು ಎನ್ ಡಿ ಎ ತೊರೆದಿದ್ದರು. ಯಾವ ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿದ್ದರೋ, ಅದೇ ಕ್ಷೇತ್ರದಿಮದ LJPಯ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿದ್ದರು. ಇದರಿಂದಾಗಿ ಜೆಡಿಯು ತೀವ್ರವಾದ ಹಿನ್ನಡೆ ಅನುಭವಿಸಿತು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣಾ ಪೂರ್ವ ನಿರ್ಧಾರಗಳಂತೆ ನಿತೀಶ್ ಕುಮಾರ್ ಸಿಎಂ ಪಟ್ಟ ಗಿಟ್ಟಿಸಿಕೊಂಡರು. ಆದರೆ, ತಮ್ಮ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದ್ದು ಸಹಿಸಲು ಸಾಧ್ಯವಾಗಿರಲಿಲ್ಲ.

ಬಿಹಾರ ಚುನಾವಣೆಯ ನಂತರ ಜನವರಿಯಲ್ಲಿ ಬಜೆಟ್ ಕುರಿತು ಚರ್ಚಿಸಲು ಕರೆದ ಸಭೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಚಿರಾಗ್ ಪಾಸ್ವಾನ್ ಅವರಿಗೆ ಆಹ್ವಾನ ನೀಡಿದ್ದರು. ಇದರ ವಿರುದ್ದ ಸಿಟ್ಟಾಗಿದ್ದ ಜೆಡಿಯು ನಾಯಕರು, ಚಿರಾಗ್ ಸಭೆಗೆ ಬಂದರೆ ತಾವು ಸಭೆಯನ್ನು ಬಹಿಷ್ಕರಿಸುವುದಾಗಿ ಧಮ್ಕಿ ನೀಡಿದ್ದರು. ಚಿರಾಗ್ ಅವರಿಗೆ ನೀಡಿದ ಆಹ್ವಾನ ವಾಪಾಸ್ ಪಡೆದ ನಂತರವೇ ಜೆಡಿಯು ನಾಯಕರು ಸಭೆಗೆ ಹಾಜರಾಗಿದ್ದರು.
ದೊಡ್ಡ ಮಟ್ಟದಲ್ಲಿ ಚಿರಾಗ್ ವಿರುದ್ದ ತಂತ್ರಗಾರಿಕೆ ಹೆಣೆಯಲು ಆರಂಭವಾಗಿದ್ದು, ಕೇಂದ್ರ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆಯ ಸುದ್ದಿಗಳು ಕೇಳಿ ಬಂದಾಗ. ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದಿಂದಾಗಿ, LJPಗೆ ಮೀಸಲಾಗಿದ್ದ ಒಮದು ಮಂತ್ರಿ ಸ್ಥಾನ ಖಾಲಿ ಉಳಿದಿತ್ತು. ಈ ಸ್ಥಾನಕ್ಕೆ ಚಿರಾಗ್ ಅವರು ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದ್ದವು. ಇದೇ ಸ್ಥಾನದ ಮೇಲೆ ಜೆಡಿಯು ಕೂಡಾ ಕಣ್ಣಿಟ್ಟಿದ್ದು, ಇಷ್ಟೆಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ.
ಸಚಿವ ಸಂಪುಟದಲ್ಲಿಯೂ ಚಿರಾಗ್ ಅವರೊಂದಿಗೆ ಸ್ಥಾನವನ್ನು ಹಂಚಿಕೊಳ್ಳಲು ನಿತೀಶ್ ಸಿದ್ದರಿರಲಿಲ್ಲ. ಈ ಕಾರಣಕ್ಕಾಗಿ, ಬಿಹಾರ ವಿಧಾನಸಭೆಯ ಉಪಸಭಾಧ್ಯಕ್ಷರಾಗಿರುವ ಮಹೇಶ್ವರ್ ಪ್ರಸಾದ ಹಜಾರಿ ಅವರ ನೇತೃತ್ವದಲ್ಲಿ ಪಾಟ್ನಾದಲ್ಲಿ ಒಂದು ರಹಸ್ಯ ಸಭೆ ನಾಡೆಲಾಗಿತ್ತು. ಈ ಸಭೆಯಲ್ಲಿ ಚಿರಾಗ್ ಪಾಸ್ವಾನ್ ಅವರನ್ನು ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಿರ್ಧರಿಸಲಾಯಿತು ಎಂದು ಜೆಡಿಯು ಮೂಲಗಳು ತಿಳಿಸಿವೆ.
ಚಿರಾಗ್ ಪಾಸ್ವಾನ್ ಪಕ್ಷದ ಮುಖ್ಯಸ್ಥನ ಸ್ಥಾನದಲ್ಲಿ ಇಲ್ಲದಿದ್ದರೆ ಮಾತ್ರ ನೀವು ಬಿಹಾರ ಮತ್ತು ಕೇಂದ್ರದಲ್ಲಿ ಎನ್ ಡಿ ಎ ಸದಸ್ಯರಾಗಿರಬಹುದು ಎಂದು LJPಯ ನಾಯಕರಾಗಿ ಆಯ್ಕೆಯಾಗಿರುವ ಪಶುಪತಿ ಅವರಿಗೆ ಹೇಳಲಾಯಿತು.
ಪಶುಪತಿ ಅವರು ರಾಮ್ ವಿಲಾಸ್ ಪಾಸ್ವಾನ್ ಅವರ ಬಲಗೈ ಬಂಟನಂತಿದ್ದರೂ, ಅವರ ಮರಣದ ನಂತರ ಚಿರಾಗ್ ವಿರುದ್ದ ಮುನಿಸಿಕೊಂಡಿದ್ದರು. ಮುಖ್ಯವಾಗಿ ನಿತೀಶ್ ಕುಮಾರ್ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದ ಪಶುಪತಿ ಅವರು ಬಿಹಾರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದನ್ನು ವಿರೋಧಿಸಿದ್ದರು.

ಪಕ್ಷದಲ್ಲಿ ತಮ್ಮ ಮಾತಿಗೆ ಬೆಲೆಯಿಲ್ಲ ಎಂಬುದು ಬಂಡಾಯ ಸಂಸದರ ಅಳಲಾಗಿದೆ. ಚಿರಾಗ್ ಪಕ್ಷದ ನೇತೃತ್ವವನ್ನು ವಹಿಸಿಕೊಂಡ ನಂತರ, ಅವರ ರಾಜಕೀಯ ಕಾರ್ಯದರ್ಶಿಯಾದ ಸೌರಭ್ ಪಾಂಡೆ ಮಾತುಗಳನ್ನು ಮಾತ್ರ ಕೇಳುತ್ತಾರೆ. ಪಾಂಡೆ ತೋರಿಸದಲ್ಲಿ ಸಹಿ ಹಾಕುತ್ತಾರೆ ಎಂದು ಸಂಸದರು ಆರೋಪಿಸಿದ್ದಾರೆ. ಇದಕ್ಕೂ ಮಿಗಿಲಾಗಿ, ರಾಮ್ ವಿಲಾಸ್ ಪಾಸ್ವಾನ್ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಹಲವು ಹಿರಿಯ ನಾಯಕರನ್ನು ಭೇಟಿಯಾಗಲು ಕೂಡಾ ಚಿರಾಗ್ ಬಯಸುತ್ತಿರಲಿಲ್ಲ, ಎಂದು ಹೇಳಿದ್ದಾರೆ.
ಪಕ್ಷದಲ್ಲಿನ ಹುದ್ದೆಯನ್ನು ಕಳೆದುಕೊಳ್ಳಲಿರುವ ಚಿರಾಗ್?
LJPಯ ಆರು ಜನ ಸಂಸದರಲ್ಲಿ ಚಿರಾಗ್ ಕೂಡಾ ಒಬ್ಬರು. ಪಶುಪತಿ ಅವರನ್ನು ಸಂಸದೀಯ ನಾಯಕರಾಗಿ ಹೆಚ್ಚಿನ LJP ಸಂಸದರು ಆಯ್ಕೆ ಮಾಡಿದ್ದರಿಂದ ಚಿರಾಗ್ ಬಳಿ ಹೆಚ್ಚಿನ ಅಧಿಕಾರ ಉಳಿದುಕೊಂಡಿಲ್ಲ. ಪಕ್ಷದ ಹಿರಿಯ ನಾಯಕರೇ ಬಂಡೆದ್ದ ಪರಿಣಾಮ ಚಿರಾಗ್ ಅವರ ಬಳಿ ಉಳಿದುಕೊಂಡಿರುವ ಪಕ್ಷ ‘ಸಂಸದೀಯ ನಾಯಕ’ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.
ಪಶುಪತಿ ಅವರ ಬೆನ್ನ ಹಿಂದೆ ಖುದ್ದು ನಿತೀಶ್ ಅವರೇ ನಿಂತಿರುವುದರಿಂದ ಈ ಸಂಕಟದಿಂದ ಪಾರಾಗುವುದು ಅಷ್ಟು ಸುಲಭವೇನಲ್ಲ. ರಾಮ್ ವಿಲಾಸ್ ಅವರ ಪತ್ನಿಯನ್ನು (ಚಿರಾಗ್ ತಾಯಿ) ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡುವುದಾಗಿ ಚಿರಾಗ್ ಅವರು ಮನವೊಲಿಸುವ ಪ್ರಯತ್ನ ಮಾಡಿದ್ದರು. ಇದಕ್ಕು ಐದು ಜನ ಸಂಸದರು ಬಗ್ಗಿರಲಿಲ್ಲ.

ತಂದೆಯ ನಂತರ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಧ್ಯೆಯದಿಂದ ನಿತೀಶ್ ವಿರುದ್ದ ಸಿಡಿದೆದ್ದಿದ್ದ ಚಿರಾಗ್, ಈಗ ಏಕಾಂಗಿಯಾಗಿದ್ದಾರೆ. ತಾವೇ ಅಧ್ಯಕ್ಷರಾಗಿರುವ ಪಕ್ಷದಲ್ಲಿ ಒಬ್ಬ ಸಂಸದನಾಗಿ ಮಾತ್ರ ಉಳಿದುಕೊಳ‌್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆ ಅಧ್ಯಕ್ಷ ಸ್ಥಾನವನ್ನು ಕೂಡಾ ಕಳೆದುಕೊಳ‌್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಬಿಹಾರ ರಾಜಕಾರಣ ಉದ್ದ ಅಗಲಗಳನ್ನು ಅರಿತಿರುವ ನಿತೀಶ್ ಕುಮಾರ್ ವಿರುದ್ದ ಹೋಗಿದ್ದೇ ಇದಕ್ಕೆಲ್ಲಾ ಕಾರಣ ಎಂದು ಖುದ್ದು ಜೆಡಿಯು ನಾಯಕರೇ ಹೇಳುತ್ತಾರೆ. ಬಿಹಾರ ಚುನಾವಣೆಯಲ್ಲಿ ಜೆಡಿಯು 32 ಸೀಟುಗಳನ್ನು ಕಳೆದುಕೊಳ್ಳಲು ಚಿರಾಗ್ ಅವರೇ ಕಾರಣ ಎಂದು ಸಿಟ್ಟಿನಿಂದ ಕುದಿಯುತ್ತಿರುವ ಜೆಡಿಯು ನಾಯಕರು ರೂಪಿಸಿದ ತಂತ್ರಗಾರಿಕೆಗೆ ಚಿರಾಗ್ ಸದ್ಯಕ್ಕೆ ತತ್ತರಿಸಿ ಹೋಗಿದ್ದಾರೆ. ಈ ತಂತ್ರಗಾರಿಕೆಗೆ ಚಿರಾಗ್ ಅವರು ಶೀಘ್ರವೇ ಪ್ರತಿತಂತ್ರ ರೂಪಿಸುತ್ತಾರೋ? ಇಲ್ಲ ಕಾದು ನೋಡಿ ಸಂದರ್ಭ ಎದುರಾದಾಗ ಮಾತ್ರ ಪ್ರತಿದಾಳಿ ನಡೆಸುತ್ತಾರೋ? ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ.