ಚಾಮರಾಜಪೇಟೆ ಆಟದ ಮೈದಾನದ ಕಿಚ್ಚು ಯಾಕೋ ತಣ್ಣಗಾಗೋ ಲಕ್ಷಣಗಳೇ ಕಾಣ್ತಿಲ್ಲ. ನಿನ್ನೆಯಷ್ಟೇ ಹಿಂದೂ ಮುಖಂಡರ ಶಾಂತಿ ಸಭೆ ಮಾಡಿದ್ದ ಪೊಲೀಸರು ಇಂದು ಮುಸ್ಲಿಂ ಮುಖಂಡರ ಜೊತೆ ಸಭೆ ಮಾಡಿದ್ದು, ಶಾಂತಿ ಸೌರ್ಹದತೆ ಕದಡದಂತೆ ಎಚ್ಚರಿಸಿದ್ದಾರೆ.
ಹಿಂದೂ ಮುಖಂಡರ ಬಳಿಕ ಮುಸ್ಲಿಂ ಮುಖಂಡರ ಜೊತೆ ಪೊಲೀಸ್ ಇಲಾಖೆ ಶಾಂತಿ ಸಭೆ
ಈದ್ಗಾ ಮೈದಾನ ವಿವಾದ ಕೊನೆಯಾಗುವಂತೆ ಕಾಣ್ತಿಲ್ಲ. ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಸ್ಪಷ್ಟಪಡಿಸುತ್ತಿದ್ದಂತೆ ವಿವಾದ ಮತ್ತಷ್ಟು ತಾರಕಕ್ಕೇರುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಧ್ವಜಾರೋಹಣ ವಿಚಾರವಾಗಿ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಹೇಳಿಕೆಗಳು ಆಚೆ ಬರ್ತಿವೆ. ಇದರ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು, ಇಂದು ಮುಸ್ಲಿಂ ಮುಖಂಡರ ಜೊತೆ ಸಭೆ ಮಾಡಿ ಶಾಂತಿ ಕದಡುವ ಕೆಲಸ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆ ಸಭಾಂಗಣದಲ್ಲಿ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮತ್ತು ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 80 ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಭಾಗಿಯಾಗಿದ್ರು. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ವಿವಾದ ವಿಚಾರವಾಗಿ ಪರ ವಿರೋಧ ಹೇಳಿಕೆಗಳ ಕುರಿತು ಚರ್ಚೆ ನಡೆಸಿದ ಪೊಲೀಸರು, ವಿವಾದ ವಿಚಾರವಾಗಿ ಯಾವುದೇ ಕಾರಣಕ್ಕೂ ಯಾರು ಪ್ರಚೋದನಕಾರಿ ಹೇಳಿಕೆ ನೀಡದಂತೆ ಅಂತ ಎಚ್ಚರಿಸಿದ್ದಾರೆ.
ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಖಾಕಿ
ಇನ್ನೊಂದೆಡೆ ಸಭೆಯಲ್ಲಿ ಕಂದಾಯ ಇಲಾಖೆ ಅಥವಾ ಹಿಂದೂ ಪರ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡಬಾರದೆಂಬ ಆಗ್ರಹವನ್ನು ಮುಸ್ಲಿಂ ಮುಖಂಡರು ಮಾಡಿದ್ರು. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಸರ್ಕಾರ ಏನು ನಿರ್ದೇಶನ ನೀಡಲಿದೆಯೋ ಆ ಪ್ರಕಾರ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ. ಸರ್ಕಾರದ ನಿರ್ಧಾರಕ್ಕೆ ನಾವು ಬದ್ದವಾಗಿರಬೇಕು ಇಲ್ಲವಾದಲ್ಲಿ ಕಾನೂನಡಿ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಲಕ್ಷ್ಮಣ ನಿಂಬರಗಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಜನರಲ್ ಸೆಕರೆಟರಿ ಝೈನುದ್ದೀನ್, ನಾವು ಶಾಂತಿ ಕಾಪಾಡುವುದಾಗಿ ಹೇಳಿದ್ದೇವೆ. ನಮ್ಮ ಕರ್ತವ್ಯ ನಾವು ಮಾಡ್ತೇವೆ. ಪೊಲೀಸರಿಗೆ ನಾವು ಸಹಕಾರ ನೀಡ್ತೇವೆ. ಚಾಮರಾಜಪೇಟೆಯಲ್ಲಿ ನಾವೆಲ್ಲ 40 ವರ್ಷದಿಂದ ಅಣ್ಣ ತಮ್ಮಂದಿರ ಹಾಗೇ ಇದ್ದೇವೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಂದಾಯ ಇಲಾಖೆ ಹೇಳಿದ ಬಳಿಕ ಸ್ವಾತಂತ್ರೋತ್ಸವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.
ಇನ್ನು ಸಭೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಮುಖಂಡ ಅಬ್ದುಲ್ ರಜಾಕ್ ಮಾತನಾಡಿ, ಶಾಂತಿ ಸಭೆ ಆಗಿದೆ. ಪೊಲೀಸರು ಶಾಂತಿ ಕಾಪಾಡುವಂತೆ ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಬೇಡಿ ಅಂತ ಹೇಳಿದ್ದಾರೆ. ಮೈದಾನದಲ್ಲಿ ನಾವೇ ಧ್ವಜಾರೋಹಣ ಮಾಡ್ತೇವೆ. ನಾವು ಬಿಬಿಎಂಪಿ ಆದೇಶ ಒಪ್ಪಲ್ಲ. ಇಲ್ಲಿಯೇ ಧ್ವಜಾರೋಹಣ ಮಾಡ್ತೇವೆ. ಕಂದಾಯ ಇಲಾಖೆ ಸಚಿವರಿಗೆ ಬುದ್ದಿ ಇದೆ. ಸುಪ್ರೀಂ ಆದೇಶ ಉಲ್ಲಂಘಿಸಿ ಕಂದಾಯ ಇಲಾಖೆ ಧ್ವಜಾರೋಹಣ ಮಾಡಲು ಸಾಧ್ಯವಿಲ್ಲ. ಆಸ್ತಿ ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದು ಎಂಬುದಕ್ಕೆ ಇಲಾಖೆಯಲ್ಲಿ ಒಂದು ತುಂಡು ಪೇಪರ್ ಸಾಕ್ಷಿ ಇಲ್ಲ. ಇದ್ದರೆ ತೋರಿಸಲಿ ಸಾರ್ವಜನಿಕರ ಮುಂದೆಯೇ ಇಡಲಿ. ನಮ್ಮ ಕಡೆಯಿಂದ ಯಾವುದೇ ಒತ್ತಡ ಇಲ್ಲ. ಹಿಂದೂ ಮುಸ್ಲಿಂ ಭಾಯ್ ಭಾಯ್. ನಾವೆಲ್ಲ ಒಂದೇ ಎನ್ನುವುದರ ಜೊತೆಗೆ ಮೈದಾನದಲ್ಲಿ ನಾವೇ ಧ್ವಜಾರೋಹಣ ಮಾಡ್ತೇವೆ ಎನ್ನುವುದರ ಜೊತೆಗೆ ಕಂದಾಯ ಇಲಾಖೆಗೂ ಟಾಂಗ್ ನೀಡಿದ್ರು. ಒಟ್ಟಾರೆ ಪೊಲೀಸರ ಸಭೆ ಬಳಿಕ ಶಾಂತಿ ಕಾಪಾಡುವ ಭರವಸೆಯನ್ನೇನೋ ಎರಡು ಧರ್ಮದ ಮುಖಂಡರು ನೀಡಿದ್ದಾರೆ, ಆದರೆ ವಿವಾದದ ವಿಚಾರವಾಗಿ ಎಷ್ಟು ದಿನ ಇದೇ ಮಾತನ್ನ ಉಳಿಸಿಕೊಳ್ತಾರೋ ಕಾದು ನೋಡಬೇಕಿದೆ.