ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಸಂಪೂರ್ಣವಾಗಿ ಮುಗಿಯುವುದಕ್ಕೂ ಮುಂಚೆ ಪೊಲೀಸರು ಆರೋಪಿ ಅಥವಾ ಸಂತ್ರಸ್ಥರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂದು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಮುಖ್ಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಮೇಲಿನ ನಿಯಮ ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತಗೆದುಕೊಳ್ಳಬೇಕೆಂದು ಹೇಳಿದೆ.
ವಕೀಲೆ ದೀಪಶ್ರೀ ಎಂಬುವವರು ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸುದ್ದಿ ಅಥವಾ ಇನ್ನಾವುದೇ ಕಾರ್ಯಕ್ರಮದ ಭಾಗವಾಗಿ ಅಸಭ್ಯ ಮತ್ತು ಅಶ್ಲೀಲ ವಿಚಾರ ಪ್ರಕಟಿಸುವುದಕ್ಕೆ ತಡೆ ನೀಡುವ ಸಲುವಾಗಿ ಶಾಸನಬದ್ಧ ನಿಯಮಗಳನ್ನು ರೂಪಿಸಲು ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು. ಇದರ ಮೇರೆಗೆ ಮೇಲಿನ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ ತನಿಖೆಯ ಪ್ರಕರಣ ಪೂರ್ಣಗೊಳ್ಳುವುದಕ್ಕೂ ಮುಂಚೆ ಮಾಧ್ಯಮಗಳಿಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಬಹಿರಂಗಗೊಳಿಸಿರುವುದು ನ್ಯಾಯಾಲಯ ಗಮನಿಸಿದೆ. ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ರೀತಿ ಕ್ರಮಕೈಗೊಂಡಿದೆ ಎಂದು ಕೋರ್ಟ್ ಪ್ರಶ್ನಿಸಿದೆ.
ಸರ್ಕಾರವನ್ನುದ್ದೇಶಿಸಿ -ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನಾ “ನಿಮ್ಮ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಲ್ಲಿ ಆರೋಪಿಗಳ ವಿರುದ್ಧ ನಮ್ಮಲ್ಲಿ 100% ಪುರಾವೆಗಳಿವೆ ಎಂದು ಹೇಳುತ್ತಾರೆ. ಅಧಿಕಾರಿಗಳಿಗೆ ನೀತಿ ಸಂಹಿತೆ ಇರಬೇಕೆಂದು ನ್ಯಾಯಾಲಯ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ಇಂತಹ ನಿದರ್ಶನಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದೆ.

ಸರ್ಕಾರದ ಪರ ಹಾಜರಾದ ವಕೀಲರು ತನಿಖಾ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡುವುದಿಲ್ಲವೆಂದು ಸಮಜಾಯಿಷಿ ನೀಡಿದರು. ಇದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ “ನೇರವಾಗಿ ಅಥವಾ ಪರೋಕ್ಷವಾಗಿ ಮಾಹಿತಿ ಸೋರಿಕೆಯಾಗುತ್ತಿದೆ” ಎಂದು ನ್ಯಾಯಾಲಯ ತಿರುಗೇಟು ನೀಡಿದೆ.
ತನಿಖೆ ನಡೆಯುವುದಕ್ಕೂ ಮುಂಚೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡುವುದರಿಂದ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಕರಣದ ಆರೋಪಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೆ ನ್ಯಾಯಾಂಗದ ತನಿಖೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರಕ್ಕೆ ಈ ವಿಚಾರ ಸಂಬಂಧ 4 ವಾರಗಳಲ್ಲಿ ಮಾರ್ಗಸೂಚಿ, ನಿರ್ದೇಶನಗಳನ್ನು ರೂಪಿಸುವಂತೆ ನಿರ್ದೇಶಿಸಿದ ಕೋರ್ಟ್ ವಿಚಾರಣೆಯನ್ನು ಜುಲೈ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ






