ಬೆಳಗಾವಿ : ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿವೆ. ಚಿನ್ನಾಭರಣ, ಮೊಬೈಲ್ ಕಳ್ಳತನದ ಹೀಗೆ ಒಂದಿಲ್ಲೊಂದರಂತೆ ಕೇಸ್‌ಗಳು ದಾಖಲಾಗುತ್ತಿರುತ್ತವೆ. ಆದರೆ ಜಿಲ್ಲೆಯಲ್ಲೊಂದು ಪ್ರಕರಣ ಎಲ್ಲರನ್ನೂ ಶಾಕ್‌ಗೆ ಒಳಗಾಗುವಂತೆ ಮಾಡಿದೆ.

ನಗರದ ಪಿರಣವಾಡಿಯ ನಿವಾಸಿಗಳಾದ ಉಜ್ವಲಾ ಕಮ್ಮಾರ, ಶಿವಾ ಅಪ್ಪಯನವರ ಎನ್ನುವವರು ಕಳ್ಳತನದ ಪ್ರಕರಣದಲ್ಲಿ ಸಿಲುಕಿಕೊಂಡು ಕಂಬಿ ಹಿಂದೆ ಸೇರಿದ್ದಾರೆ. ಆರೋಪಿ ಉಜ್ವಲಾ ತನ್ನ ಅಳಿಯನ ಮನೆಯಲ್ಲಿನ ಚಿನ್ನವನ್ನು ಕಳ್ಳತನ ಮಾಡಿದ್ದಳು. ಅಳಿಯ ಹಾಗೂ ಮಗಳು ಇಬ್ಬರೂ ಬೇರೆಡೆ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಅತ್ತೆ ಉಜ್ವಲಾ ಸಂಬಂಧಿ ಶಿವಾ ಜೊತೆ ಸೇರಿ ಮಗಳ ಚಿನ್ನಕ್ಕೆ ಕನ್ನ ಹಾಕಿದ್ದಳು.
ಸ್ನೇಹಿತನ ಮದುವೆಗೆಂದು ಹೋಗಿ ಬರುತ್ತೇವೆ, ಮನೆಯಲ್ಲಿರುವಂತೆ ಅಳಿಯ ಅತ್ತೆಯ ನಂಬಿಕೆಯ ಮೇಲೆ ಹೇಳಿ ಹೋಗಿದ್ದ. ಆದರೆ ಮರಳಿ ಬರುವಷ್ಟರಲ್ಲಿ ಅಳಿಯನ ಮನೆಯಲ್ಲಿದ್ದ ಪುತ್ರಿಯ ಚಿನ್ನದ ಬಳೆ, ಉಂಗುರ, ನೆಕ್ಲೇಸ್, ಗಂಟನ್ ಸೇರಿ 110 ಗ್ರಾಮ ಚಿನ್ನಾಭರಣ ಕಳ್ಳತನ ಮಾಡಿದ್ದಳು, ಒಟ್ಟು 16.57 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಕದ್ದಿದ್ದಳು.
ಇದನ್ನೂ ಓದಿ : ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್
ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಅತ್ತೆಯನ್ನು ಅಳಿಯ ವಿಚಾರಿದಾಗ ನನಗೆ ಇದರ ಬಗ್ಗೆ ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದಾಳೆ. ಬಳಿಕ ಟಿಳಕವಾಡಿ ಠಾಣೆ ಪೊಲೀಸರಿಗೆ ಅಳಿಯ ದೂರು ನೀಡಿದ್ದಾರೆ. ನಂತರ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರ ಎದುರೂ ಅತ್ತೆಯ ಹೈಡ್ರಾಮಾ ನಡೆಸಿದ್ದಾಳೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಆಗ ನಾನೇ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿರುವ ಕಳ್ಳಿ ಅತ್ತೆಯ ಬಳಿಯಿಂದ ತಕ್ಷಣವೇ ಪೊಲೀಸರು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಇನ್ನಿಬ್ಬರು ಪುತ್ರಿಯರ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ವಿಚಾರಣೆಯಲ್ಲಿ ಅತ್ತೆ ಹೇಳಿದ್ದಾಳೆ. ಹಿರಿಯ ಅಳಿಯನು ಸಂಪಾದನೆ ಮಾಡಿ ಖರೀದಿಸಿದ್ದ ಚಿನ್ನಕ್ಕೆ ಕನ್ನ ಹಾಕಿರುವ ಅತ್ತೆಗೆ ಟಿಳಕವಾಡಿ ಖಾಕಿ ಜೈಲು ದಾರಿ ತೋರಿಸಿದೆ.
ನಾವು ದಿನಾಲೂ ಬೇರೆ ಬೇರೆ ರೀತಿಯ ಕಳ್ಳತನದ ಪ್ರಕರಣಗಳನ್ನು ನೋಡುತ್ತಿರುತ್ತೇವೆ. ಆದರೆ ಸಮಾಜದಲ್ಲಿನ ಬಡತನ, ಜನರಲ್ಲಿರುವ ಅತಿಯಾಸೆಗಳೇ ಈ ರೀತಿಯ ಕಳ್ಳತನದ ದಾರಿಗೆ ಮನುಷ್ಯರನ್ನು ತಳ್ಳುತ್ತದೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಅತ್ತೆಯು ಸ್ವಂತ ಅಳಿಯನ ಮನೆಗೆ ಕನ್ನ ಹಾಕಿದ್ದು ಅಪರಾಧವೆ, ಹಾಗೆಂದ ಮಾತ್ರಕ್ಕೆ ಇನ್ನಿಬ್ಬರ ಪುತ್ರಿಯರ ಮದುವೆಯ ಸಾಲ ತೀರಿಸೋಕೆ ಬೇರೆ ದಾರಿಯಿರಲಿಲ್ಲವೆ? ಅಥವಾ ಅಳಿಯ, ಮಗಳ ಮನೆ ಎನ್ನುವುದನ್ನೂ ಲೆಕ್ಕಿಸದ ಹಂತಕ್ಕೆ ತಲುಪಿರುವುದಕ್ಕೆ ಆ ಆರೋಪಿತ ಮಹಿಳೆಗೆ ಸಾಲಗಾರರಿಂದ ಮಾನಸಿಕ ಹಿಂಸೆಯು ಆಗಿರಬಹುದೆ? ಈ ಎಲ್ಲ ಪ್ರಶ್ನೆಗಳು ಹಾಗೆಯೇ ಉಳಿಯುತ್ತಿವೆ. ಕಾರಣ ಇದಕ್ಕೆ ಉತ್ತರ ಸಿಗಬೇಕಾದರೆ ಈ ಪ್ರಕರಣವನ್ನೂ ಹೊರತುಪಡಿಸಿ ಅತ್ತೆಯು ಮಾಡಿರುವ ಸಾಲದ ಮೂಲವನ್ನು ಅರಿತುಕೊಂಡಾಗ ಉತ್ತರ ದೊರೆಯಬಹುದೇನೋ..





