ಸಚಿವ ಕೆ.ಸ್.ಈಶ್ವರಪ್ಪ ವಿರು ದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಶಂಕಿತ ಸಾವಿನ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಟ್ಟು ಬಂಧನಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ನಾಯಕರು ಅಹೋರಾತ್ರಿ ಧರಣಿ ನಡೆಸುತ್ತದ್ದಾರೆ. ಅತ್ತಇಂದು (ಶುಕ್ರವಾರ ) ಸಂಜೆ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದು, ಇತ್ತ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ತನಿಖೆಗೆ ಪೊಲೀಸರು ತಂಡಗಳನ್ನು ರಚಿಸಿದ್ದಾರೆ.
ಉಡುಪಿ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಮಲ್ಪೆ ಸಿಪಿಐ ಶರಣಗೌಡ ಪಾಟೀಲ್ ಮತ್ತು ಬ್ರಹ್ಮಾವರ ಸಿಪಿಐ ಅನಂತಪದ್ಭಾನಾಭ ಅವರು ತನಿಖೆಯ ಭಾಗವಾಗಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಮೃತರ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಮತ್ತು ಸಂತೋಷ್ ಮಡಿಕೇರಿ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಅವರ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ಧಾರೆ.
ಪ್ರಕರಣದಲ್ಲಿ ಹೆಸರಿಸಲಾದ ಚುನಾಯಿತ ಪ್ರತಿನಿಧಿಯ ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಒಂದು ತಂಡವನ್ನು ಬೆಳಗಾವಿಗೆ ಕಳುಹಿಸಲಾಗಿದ್ದು, ಇನ್ನೊಂದು ತಂಡವು ತನಿಖೆಯ ತಾಂತ್ರಿಕ ಅಂಶಗಳನ್ನು ಪರಿಶೀಲಿಸುತ್ತದೆ. ಡಸ್ಟ್ಬಿನ್ನಲ್ಲಿ ಸಿಕ್ಕ ವಿಷದ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬಾಟಲಿ ಮತ್ತು ಖರೀದಿಸಿದ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ವಾಟ್ಸಾಪ್ ಸಂದೇಶಗಳನ್ನು ಸಹ ಪರಿಶೀಲಿಸಲಾಗುತ್ತದೆ.
ಎರಡು ಮೂರು ದಿನಗಳಲ್ಲಿ ಎಫ್ಎಸ್ಎಲ್ ವರದಿ ಬರುವ ನಿರೀಕ್ಷೆ ಇದೆ. ತಂಡವು ಕೊಠಡಿ ಮತ್ತು ಕಾರಿನಿಂದ ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.