ಯಾದಗಿರಿ : ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಡಕಾಯಿತಿ ಟೀಂನ ಗ್ಯಾಂಗ್ ಲೀಡರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರೋ ಘಟನೆ ಯಾದಗಿರಿಯಲ್ಲಿ ನಡೆದಿದೆ. ಮಹಮ್ಮದ್ ರಫಿ ಬಂಧಿತ ಆರೋಪಿ. ಮಹಮ್ಮದ್ ರಫಿಯನ್ನ ಬಂಧಿಸಲು ಹೋದಾಗ ಪಿಸ್ತೂಲ್ ಹಾಗೂ ಚಾಕುವಿನಿಂದ ಪೊಲೀಸರಿಗೆ ಹೆದರಿಸಿದ್ದಾನೆ. ಆದ್ರೂ ಪೊಲೀಸರು ಎದೆಗುಂದದೇ ಚೇಸ್ ಮಾಡಿ ರಫಿಯನ್ನ ಹಿಡಿಯಲು ಯತ್ನಿಸಿದಾಗ ಸಿಪಿಐ ಸುನೀಲ್ ವಿ ಮೂಲಿಮನಿ, ಪಿಸಿ ಅಬ್ದುಲ್ ಭಾಷ ಹಾಗೂ ಹರಿನಾಥರೆಡ್ಡಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಆರೋಪಿ ಕಾಲಿಗೆ ಗುಂಡು ಹಾರಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 24ರಂದು ಯಾದಗಿರಿ ನಗರದಲ್ಲಿ ಉದ್ಯಮಿ ನಂದಕಿಶೋರ್ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. 8-10 ಜನರ ತಂಡದ ನಾಲ್ಕು ಜನ ನಂದಕಿಶೋರ್ ಮನೆಯೊಳಗೆ ನುಗ್ಗಿ ಮನೆ ಮಂದಿಗೆ ಪಿಸ್ತೂಲ್, ಚಾಕುವಿನಿಂದ ಹೆದರಿಸಿದ್ದಾರೆ. ಆಗ ಮನೆಯಲ್ಲಿದ್ದ ನಾಲ್ಕು ತೊಲೆ ಬಂಗಾರ, ಮೂರು ತೊಲೆ ಬೆಳ್ಳಿ ಸೇರಿದಂತೆ ಮೊಬೈಲ್, ಕ್ಯಾಷ್ ಎಲ್ಲ ಕೈಗೆ ಸಿಕ್ಕಷ್ಟು ದೋಚಿದ್ದಾರೆ. ಮನೆಯಲ್ಲಿದ್ದ ನಂದಕಿಶೋರ್ ಕುಟುಂಬಸ್ಥರು ವಿರೋಧಿಸಿದಾಗ ಅಡುಗೆ ಮನೆಯಲ್ಲಿದ್ದ ಕಾರದಪುಡಿ ಎರಚಿ ವಿಕೃತಿ ಮರೆದಿದ್ರು. ಆದ್ರೆ ಅದಾಗಲೇ ನಂದಕಿಶೋರ್ ಸಹೋದರ ದೀಪಕ್ ಮೇಲಿನ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದ. ಮನೆಯಿಂದ ಹಾರಿ ಕೆಳಗಡೆ ಬಿದ್ದು, ಕಿರುಚಾಡಿ ಜನರನ್ನ ಸೇರಿಸಿದ್ದ. ಜನ ಬರುವಷ್ಟರಲ್ಲೇ ಭಯಗೊಂಡ ಡಕಾಯಿತರು ಇನ್ನೇನು ನಾವು ತಗ್ಲಾಕ್ಕೊಂತೀವಿ ಅನ್ಕೊಂಡು ಅಲ್ಲಿಂದ ಓಡಿ ಹೋಗಿದ್ರು.

8-10 ಜನರ ತಂಡದಿಂದ ಕಳ್ಳತನ ಆಗಿರೋದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗೊತ್ತಾಗಿತ್ತು. ನಗರದ ಪ್ರಮುಖ ಸರ್ಕಲ್ ಬಳಿ ಇರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಆಧರಿಸಿದಾಗ ಎಷ್ಟು ಜನ ತಂಡದಲ್ಲಿದ್ರು, ಯಾವ ರೀತಿ ಪ್ಲಾನ್ ಮಾಡಿದ್ರು ಅನ್ನೋ ಪಿನ್ ಟು ಪಿನ್ ಮಾಹಿತಿ ಪೊಲೀಸರಿಗೆ ಸಿಕ್ಕಾಗಿತ್ತು. ಅಂದಿನಿಂದಲೇ ಅಲರ್ಟ್ ಆದ ಯಾದಗಿರಿ ಎಸ್ಪಿ ಸಿಬಿ ವೇಧಮೂರ್ತಿ ಎಸ್ಪಿ ಸುನೀಲ್ ವಿ ಮೂಲಿಮನಿ ನೇತೃತ್ವ ಮೂರು ವಿಶೇಷ ತಂಡಗಳನ್ನ ರಚಿಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ರು. ಸತತ 15 ದಿನಗಳ ಕಾಲ ಹೈದ್ರಾಬಾದ್, ನಾರಾಯಣಪೇಟೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಾರ್ಯಚರಣೆ ಮಾಡಿದ್ದ ಪೊಲೀಸರ ತಂಡದಿಂದ ನಿನ್ನೆ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿತ್ತು. ಮಹ್ಮದ್ ಸಾಜೀದ್, ಸೈಯದ್ ಮುಕ್ತಿಯಾರ್, ಮಹೆಬೂಬ್, ಶಹಬಾಜ್ ಹೈಯಾಸ್ ನಿನ್ನೆ ಬಂಧಿತರಾಗಿದ್ದ ನಾಲ್ವರು ಆರೋಪಿಗಳು.
ಒಟ್ಟು 8-10 ಆರೋಪಿಗಳಿದ್ದ ತಂಡದ ಗ್ಯಾಂಗ್ ಲೀಡರ್ ಮಹಮ್ಮದ್ ರಫೀ ಹಾಗೂ ಸಲೀಂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಳ್ತಿದ್ರು. ಮಹಮ್ಮದ್ ರಫಿ ಬಳಿ ಪಿಸ್ತೂಲ್ ಇದ್ದಿದ್ರಿಂದ ತುಂಬಾ ಎಚ್ಚರಿಕೆಯಿಂದಲೇ ಪೊಲೀಸರು ಹೆಜ್ಜೆ ಇಟ್ಟಿದ್ರು. ಸಲೀಂ ಹಾಗೂ ರಫಿ ಯಾದಗಿರಿ ನಗರದ ವರ್ಕನಳ್ಳಿ ಭಾಗದಲ್ಲಿ ಒಂದೇ ಕಡೆ ಅಡಗಿ ಕುಳಿತಿದ್ದ ಖಚಿತ ಮಾಹಿತಿ ಪಡೆದ ಸಿಪಿಐ ಸುನೀಲ್ ನೇತೃತ್ವದ ತಂಡ ಬೆಳ್ಳಂಬೆಳ್ಳಗ್ಗೆ ದಾಳಿ ಮಾಡಿ, ಆರೋಪಿಗಳನ್ನ ಹಿಡಿಯಲು ಮುಂದಾಗಿದ್ದಾರೆ. ಪೊಲೀಸರನ್ನ ನೋಡಿದ ಕೂಡಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಗ್ಯಾಂಗ್ ಲೀಡರ್ ಮಹ್ಮಧ್ ರಫಿ ಆರಂಭದಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗಲು ಹೇಳಿದ್ರೂ ಕೇರ್ ಮಾಡದ ರಫಿ ಪಿಸ್ತೂಲ್ ತೆಗೆದು ಫೈರ್ ಮಾಡಲು ಮುಂದಾಗ್ತಿದ್ದಂತೆ, ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಮೂಲಿಮನಿ ರಫಿ ಬಲಗಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ಈ ಗ್ಯಾಂಗಸ್ಟರ್ ಮಹಮ್ಮದ್ ರಫಿ ಉದ್ಯಮಿ ನಂದಕಿಶೋರ್ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದ. ದೀಪಕ್ ನಂದಕಿಶೋರ್ ಜವಾಹರ್ ಸಿಗರೇಟ್ ಸೇರಿದಂತೆ ಸಗಟು ವ್ಯಾಪಾರದ ವ್ಯಾಪರಸ್ಥನಾಗಿದ್ದ. ಕೆಲ ದಿನಗಳ ಹಿಂದೆ ದೀಪಕ್ ಜವಾಹರ್ ಮನೆಯಲ್ಲಿ ಸಿಗರೇಟ್ ಬಾಕ್ಸ್ ಗಳನ್ನ ರಫಿ ಕದ್ದು ಸಿಕ್ಕಿಬಿದ್ದಿದ್ದ. ಆಗ ಪೊಲೀಸರಿಗೆ ದೂರು ನೀಡದೇ ಬುದ್ದಿ ಹೇಳಿ, ಕೆಲಸದಿಂದ ಕಿಕ್ ಔಟ್ ಮಾಡಿದ್ರು. ದೀಪಕ್ ಅವರ ವ್ಯವಹಾರದ ಬಗ್ಗೆ ಪೂರ್ಣ ಮಾಹಿತಿ ಹೊಂದಿದ್ದ ರಫಿ ಕೆಲಸದಿಂದ ತೆಗೆದಿದ್ದ ಸಿಟ್ಟನ್ನೇ ಮನದಲ್ಲಿಟ್ಕೊಂಡು, ತಂಡದ ಸಮೇತ ಮನೆ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಅದರಂತೆ ಫೆಬ್ರವರಿ 24ರಂದು ಮನೆಗೆ ನುಗ್ಗಿ ಕಳ್ಳತನ ಮಾಡಿ, ಇಡೀ ತಂಡ ಎಸ್ಕೇಪ್ ಆಗಿತ್ತು.
ಆರೋಪಿಗಳ ಪ್ರತಿದಾಳಿಯಿಂದ ಗಾಂಯಗೊಂಡಿದ್ದ ಸಿಪಿಐ ಸುನೀಲ್ ಬಿಪಿ ಏರುಪೇರಾಗಿತ್ತು. ಆಸ್ಪತ್ರೆಗೆ ಬಂದ ಕೂಡಲೇ ವೈದ್ಯರು ತಪಾಸಣೆ ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಸದ್ಯ ಸಿಪಿಐ ಹಾಗೂ ಇಬ್ಬರು ಸಿಬ್ಬಂದಿಗಳು ಮತ್ತು ಆರೋಪಿ ರಫಿ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯ ಇಲ್ಲ ಅಂತಾ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಗೆ ಬೇಟಿ ನೀಡಿದ ಎಸ್ಪಿ ಡಾ. ಸಿಬಿ ವೇಧಮೂರ್ತಿ ಗಾಯಾಳು ಸಿಪಿಐ ಹಾಗೂ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ್ದಾರೆ ..











