ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 1.42 ಕೋಟಿ ಮೌಲ್ಯದ 245 ಕ್ವಿಂಟಲ್ ಅಡಿಕೆಯನ್ನು ಸಾಗರ ಗ್ರಾಮಂತರ ಪೊಲೀಸರು ಮಧ್ಯ ಪ್ರದೇಶದಲ್ಲಿ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಗರದ ವರ್ತಕನಿಂದ ಗುಜರಾತ್ ನ ಅಹಮದಾಬಾದ್ ಗೆ ತೆರಳಬೇಕಿದ್ದ ಮಾಲ್ ಮಧ್ಯಪ್ರದೇಶಕ್ಕೆ ಸಾಗಿದ್ದರ ಹಿಂದೆ ರೋಚಕ ಕಥೆ ಹಾಗೂ 22 ದಿನಗಳ ಪೊಲೀಸರ ಶ್ರಮವಿದೆ.
ಸಾಗರದ ಬಳಸಗೋಡು ಗ್ರಾಮದ ಮಧುಕರ್ ನರಸಿಂಹ ಹೆಗಡೆ ಅವರ ಗೋಡೌನ್ ನಿಂದ ದೋಲರಾಮ್ ಟ್ರಾವೆಲ್ ಏಜೆನ್ಸಿ ಮೂಲಕ ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಲೋಡ್ ಕಳುಹಿಸಿದರೆ, ತಲುಪಿಯೇ ಇರಲಿಲ್ಲ. ವಿಚಾರಿಸಲೆಂದು ಫೋನ್ ಮಾಡಿದರೆ ನಾಲ್ಕು ಮೊಬೈಲ್ ನಂಬರ್ ಗಳೂ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಪ್ರಕರಣ ಶಿವಮೊಗ್ಗ ಪೊಲೀಸರಿಗೆ ಸವಾಲಾಗಿತ್ತು.
ಆರೋಪಿಗಳು ಲೋಡ್ ಅಹಮದಾಬಾದ್ ತೆಗೆದುಕೊಂಡು ಹೋಗದೆ ಮೋಸ ಮಾಡಿದ ಬಗ್ಗೆ ಪ್ರಕರಣ ಕಳೆದ ತಿಂಗಳು ದಾಖಲಾಗಿದ್ದು, ಪ್ರಕರಣದ ಆರೋಪಿಗಳ ಪತ್ತೆಗಾಗಿ ಶಿವಮೊಗ್ಗ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ರೋಹನ್ ಜಗದೀಶ್ ಐಪಿಎಸ್ (ಪೋಲಿಸ್ ಸಹಾಯಕ ಅಧೀಕ್ಷಕರು ಸಾಗರ ಉಪ ವಿಭಾಗ) ಮೇಲುಸ್ತುವಾರಿಯಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ವಿ ಪ್ರವೀಣ್ ಕುಮಾರ್, ಕಾರ್ಗಲ್ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನಾಯ್ಕ್ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಅಂತೂ ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.
ಅಡಿಕೆ ಕಳ್ಳರ ಪತ್ತೆಗೆ 31-10-2022ರಂದು ಹೊರಟ ಪೊಲೀಸ್ ತಂಡ, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ, ಸೊಲ್ಲಾಪುರ, ಪುಣೆ, ಮುಂಬೈ, ದುಲೆ, ಗುಜರಾತಿನ ಸೂರತ್, ಅಹಮ್ಮದಾಬಾದ್, ವಡೋದರಾ, ಮಧ್ಯಪ್ರದೇಶ ರಾಜ್ಯದ ಇಂದೋರ, ಖಜ್ರನಾ, ಉಜ್ಜೆನಿ, ರಾಜಘಡ್ ಗಳಲ್ಲಿ ಸುಮಾರು 22 ದಿನಗಳ ಕಾರ್ಯಚರಣೆ ನಡೆಸಿದರು.
ನ.18ರಂದು ಮಧ್ಯಪ್ರದೇಶ ರಾಜ್ಯದ ಸಾರಂಗಪುರ ಟೌನ್ ನಲ್ಲಿ ಲಾರಿ ಚಾಲಕ ರಜಾಕ್ ಖಾನ್ @ ಸಲೀಂ ಖಾನ್, ತೇಜು ಸಿಂಗ್, ಅನೀಸ್ ಅಬ್ಬಾಸಿ ಸೆರೆ ಸಿಕ್ಕರು. ಆರೋಪಿಗಳನ್ನ ಮಧ್ಯಪ್ರದೇಶ ರಾಜಾಪುರ ಜಿಲ್ಲೆಯ ಶಾಜಾಪುರ ಟೌನ್ ಬೈಪಾಸ್ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಬಾಲಾಜಿ ಡಾಬಾ ಎದುರು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ 25 ಲಕ್ಷ ರೂ ಮೌಲ್ಯದ ಅಶೋಕ ಲೈ ಲ್ಯಾಂಡ್ 12 ಚಕ್ರದ ಲಾರಿ ಹಾಗೂ ಅಡಿಕೆ ಸಮೇತ ನ.23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಆರೋಪಿಗಳ ಮೇಲೆ ಮಧ್ಯಪ್ರದೇಶ, ಮಹರಾಷ್ಟ್ರ, ರಾಜ್ಯಸ್ಥಾನ ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್, ವ್ಯಾಪಾರಸ್ಥ ಮಧುಕರ್ ಮೂವತ್ತು ವರ್ಷಗಳಿಂದ ಅಡಕೆ ವ್ಯವಹಾರದಲ್ಲಿದ್ದಾರೆ. ಇವರು ಭದ್ರಾವತಿ ಮೂಲದ ಟ್ರಾನ್ಸ್ ಪೋರ್ಟರ್ ಧೋಲಾರಾಮ್ ಎಂಬುವರ ಮೂಲಕ 1.17 ಕೋಟಿ ಬೆಲೆ ಬಾಳುವ ಅಡಕೆಯನ್ನ ಸಾಗಿಸಲು ಕರಾರು ಮಾಡಿಕೊಳ್ಳಲಾಗುತ್ತೆ. ಧೋಲಾರಾಮ್ ಲಾರಿಯನ್ನ ಬುಕ್ ಮಾಡಿ ಅಡಕೆ ಸಾಗಿಸುತ್ತಾರೆ. ಈ ಮಧ್ಯೆ ಮಾಲ್ ಮಿಸ್ ಆದ ಬಗ್ಗೆ ದೂರು ದಾಖಲಾಗಿರುತ್ತೆ. ಪ್ರಕರಣದಲ್ಲಿ ಮೂರು ಆರೋಪಿಗಳು ಮಧ್ಯಪ್ರದೇಶದ ಶಹಜಾಹನ್ ಪುರದ ನಿವಾಸಿಗಳು. ಇವರು ಮೊದಲಿನಿಂದಲೂ ಇಂಥದೇ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಗುಜರಾತ್ ನಿಂದ ಬೆಂಗಳೂರಿಗೆ ಮುಂಬೈ ಮೂಲಕ ಗೋಧಿ ಲೋಡ್ ತಂದು ಬೆಂಗಳೂರಿನಲ್ಲಿ ಡಂಪ್ ಮಾಡಿ ಗುಜರಾತ್ ರಿಜಿಸ್ಟ್ರೇಷನ್ ಇರುವ ನಕಲಿ ನಂಬರ್ ಪ್ಲೇಟ್ ಹಾಗೂ ವಾಹನ ದಾಖಲೆ ಸೃಷ್ಟಿಸಿಕೊಳ್ಳುತ್ತಾರೆ. ಅವುಗಳ ಮೇಲೆ ನಾಲ್ಕು ಸಿಮ್ ಮಾರ್ಡ್ ಖರೀದಿ ಮಾಡುತ್ತಾರೆ. ಅಲ್ಲಿಂದ ತರೀಕೆರೆಗೆ ಬಂದು ಅಲ್ಲಿನ ಲಾರಿ ಚಾಲಕನೊಬ್ಬನ ಸಹಾಯದಿಂದ ಶಿವಮೊಗ್ಗದಿಂದ ಅಡಕೆ ತೆಗೆದುಕೊಂಡು ವಾಪಸ್ ಹೊಗಬಹುದು ಎಂಬ ಮಾಹಿತಿ ಪಡೆಯುತ್ತಾರೆ. ಆಗ ಧೋಲಾರಾಮ್ ಟ್ರಾವೆಲ್ ಏಜೆನ್ಸಿ ಪರಿಚಯವಾಗುತ್ತೆ. ಧೋಲಾರಾಮ್ ಇವರ ದಾಖಲಾತಿಗಳನ್ನ ಪರಿಶೀಲಿಸಿ ತಮಗೆ ಸಾಗರದ ಮಧುಕರ್ ನಿಂದ ಬಂದ ಅಡಕೆ ಸಾಗಣೆಯನ್ನ ಈ ಲಾರಿಯವರಿಗೆ ವಹಿಸಿಕೊಡಲು ಒಪ್ಪುತ್ತಾರೆ. ಐವತ್ತು ಸಾವಿರ ಅಡ್ವಾನ್ಸ್ ಕೂಡ ಪಡೆದಿದ್ದ ಲಾರಿ ಚಾಲಕ ಹಾಗೂ ಕ್ಲೀನರ್, ಅಡಕೆ ಲೋಡ್ ಮಾಡಿಕೊಂಡು ಮುಂಬೈಗೆ ತೆರಳಿ ಅಲ್ಲಿಂದ ಮಾರ್ಗ ಬದಲಿಸುತ್ತಾರೆ. ಅಲ್ಲಿ ಅವರ ನಾಲ್ಕು ಮೊಬೈಲ್ ಗಳನ್ನ ಪೂರ್ಣ ಚಾರ್ಜ್ ಮಾಡಿ ನಾಲ್ಕು ಲಾರಿಗಳ ಮೇಲೆ ಎಸೆದು ಇಂಧೋರ್ ಕಡೆ ತೆರಳಿರುತ್ತಾರೆ. ಮೊಬೈಲ್ ರೆಕಾರ್ಡ್ ಪರಿಶೀಲನೆ ವೇಳೆ ನಾಲ್ಕು ರಾಜ್ಯಗಳಿಂದ ಲೊಕೇಷನ್ ಟ್ರೆಸ್ ಆಗ್ತಿತ್ತು. ಇಲ್ಲೇನೋ ಮೊಸವಿದೆ ಎಂದು ಅರಿತ ಪೊಲೀಸರಿಗೆ ಮೊಬೈಲ್ ಲ್ಲಿದ್ದ ಒಂದು ಫೊಟೋ ಆಧಾರದ ಮೇಲೆ ಆರೋಪಿಗಳ ಜಾಡು ಸಿಕ್ಕಿತು ಎಂದು ತಿಳಿಸಿದ್ದಾರೆ.