ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗಾಗಿ (PMNRF) ಡೆಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಂದ ಸಂಗ್ರಹಿಸಲಾಗಿದ್ದ ಸುಮಾರು 4 ಕೋಟಿ ರುಪಾಯಿಗಳನ್ನು ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ತ್ಯಾಗಿ ಯಾವುದೇ ಸದಸ್ಯರೊಡನೆ ಸಮಾಲೋಚಿಸದೆ ಪ್ರಧಾನಿ ಹೊಸದಾಗಿ ಸ್ಥಾಪಿಸಿದ ನಿಧಿ PM CARES ಗೆ ವರ್ಗಾಯಿಸಿದ್ದಾರೆಂದು ದೆಹಲಿ ವಿಶ್ವ ವಿದ್ಯಾಲಯದ ಶಿಕ್ಷಕರ ಸಂಘ ಆರೋಪಿಸಿದೆ.
ದೆಹಲಿ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದ ಬಳಿ ಮಾರ್ಚ್ ತಿಂಗಳ ಒಂದು ದಿನದ ವೇತನವನ್ನು ಉಪಕುಲಪತಿಯ ಪರಿಹಾರ ನಿಧಿಗೆ ನೀಡಬೇಕು, ಅದನ್ನು PMNRF ನಿಧಿಗೆ ಸಲ್ಲಿಸಲಾಗುತ್ತದೆಂದು ಯುನಿವರ್ಸಿಟಿಯ ರಿಜಿಸ್ಟ್ರಾರ್ ವಿನಂತಿಸಿದ್ದರು. ಆದರೆ ಅದನ್ನು PMNRF ಬದಲಾಗಿ PM-CARESಗೆ ನೀವು ಏಕಮುಖ ತೀರ್ಮಾನ ಮಾಡಿ ವರ್ಗಾಯಿಸಿದ್ದೀರಿ ಎಂದು ನೀವು ಹಳೆ ವಿದ್ಯಾರ್ಥಿಗಳಿಗೆ ಕಳುಹಿಸಿದ ಸಂದೇಶದಿಂದ ತಿಳಿದು ಆಘಾತಕ್ಕೊಳಗಾದೆವು ಎಂದು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ(DUTA) ದ ಅಧ್ಯಕ್ಷ ರಾಜೀಬ್ ರೇ ಮತ್ತು ಕಾರ್ಯದರ್ಶಿ ರಾಜಿಂದರ್ ಸಿಂಗ್ ಉಪಕುಲಪತಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ವಿಶ್ವವಿದ್ಯಾನಿಲಯವು ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಿ.ವಿಯ ಯಾವ ಶಿಕ್ಷಕರೊಂದಿಗೂ ಚರ್ಚಿಸಿರಲಿಲ್ಲ. ಮೊದಲಿಗೆ ವಿ.ವಿಯ ಇತರೆ ನಿಧಿಯಿಂದ PM-CARES ಗೆ ಹಣ ವರ್ಗಾಯಿಸಿರಬೇಕು ಅಂದುಕೊಂಡಿದ್ದೆವು ನಂತರ ಉಪಕುಲಪತಿ ಹಳೆಯ ವಿದ್ಯಾರ್ಥಿಗಳಿಗೆ ಕಳುಹಿಸಿದ ಸಂದೇಶದಿಂದ ನಾವು PMNRF ಗೆ ನೀಡಿದ ದೇಣಿಗೆಯನ್ನು PM-CARES ಗೆ ವರ್ಗಾಯಿಸಲಾಗಿದೆ ಅನ್ನುವುದು ತಿಳಿದು ಬಂದಿತು ಎಂದು ಪ್ರಾಧ್ಯಪಕರೊಬ್ಬರು ‘ದಿ ವೈರ್’ ಬಳಿ ಹೇಳಿಕೊಂಡಿದ್ದಾರೆಂದು ‘ದಿ ವೈರ್’ ವರದಿ ಮಾಡಿದೆ.
ರಾಷ್ಟ್ರೀಯ ಸೇವೆಗಾಗಿ ವಿವಿಯು ತಕ್ಷಣ ಸ್ಪಂದಿಸಿದೆ. ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳು ಮತ್ತು ಘಟಕದ ಅಧ್ಯಾಪಕರ ಹಾಗೂ ಸಿಬ್ಬಂದಿ ಸದಸ್ಯರ ಒಂದು ದಿನದ ಸಂಬಳ ನಾಲ್ಕು ಕೋಟಿ ರುಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು PMCARES ಗೆ ವರ್ಗಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ದೇಣಿಗೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆಂದು DUTA ಮತ್ತು ಹಳೆ ವಿದ್ಯಾರ್ಥಿಗಳಿಗೆ ಕಳುಹಿಸಿದ ಸಂದೇಶದಲ್ಲಿ ತ್ಯಾಗಿ ಹೇಳಿದ್ದಾರೆ.
ಹಿಂದಿನಿಂದಲೂ ರಾಷ್ಟ್ರೀಯ ದುರಂತದ ಸಂಧರ್ಭದಲ್ಲಿ ವಿವಿ ಉದ್ಯೋಗಿಗಳು ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಆದರೆ PMNRF ಗೆ ನೀಡಿದ ದೇಣಿಗೆಯನ್ನು PM CARES ಗೆ ವರ್ಗಾಯಿಸಿದ ತ್ಯಾಗಿ ಅವರ ಏಕಪಕ್ಷೀಯ ನಿರ್ಧಾರದಿಂದ ವಿವಿಯ ನೌಕರರು ಹಾಗೂ ಆಡಳಿತದ ನಡುವೆ ವಿಶ್ವಾಸ ಉಲ್ಲಂಘನೆಗೆ ಕಾರಣವಾಗಿದೆ.

ಹಿಂದಿನಿಂದಲೂ ನಾವು ಸಿಬ್ಬಂದಿ ಸಂಘದಿಂದ PMNRF ಗೆ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣಕಾಸಿನ ನೆರವು ನೀಡುತ್ತಾ ಬಂದಿದ್ದೇವೆ. ಸಿಬ್ಬಂದಿ ಹಾಗೂ ವಿವಿಯ ನಡುವಿನ ವಿಶ್ವಾಸ ಮತ್ತು ಪಾರದರ್ಶಕತೆಯಿಂದಾಗಿ ಇದು ಯಶಸ್ವಿಯಾಗುತ್ತಾ ಬಂದಿದೆ. ಆದರೆ ಈ ಪ್ರಕರಣದಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿದ್ದು ಕಂಡುಬಂದಿರುವುದು ನೋವಿನ ವಿಚಾರ.PMNRF ಗೆ ದೇಣಿಗೆ ನೀಡಲು ವಿನಂತಿಸಿ ಸಂಗ್ರಹವಾದ ಮೊತ್ತವನ್ನು PMCARES ಗೆ ನೀಡಿದ ವಿವಿಯ ಈ ಕ್ರಮವನ್ನು ಒಪ್ಪಲಾಗುವುದಿಲ್ಲ. ಇಂತಹ ಘಟನೆಗಳು ವಿವಿಯ ವೃತ್ತಿಪರತೆಯ ಮೇಲೆ ನಮಗೆ ಸಂದೇಹನ್ನು ಹುಟ್ಟುಹಾಕುತ್ತದೆ. ಸಿಬ್ಬಂದಿಗಳ ಕೊಡುಗೆಯನ್ನು ಪಿಎಮ್ ಕೇರ್ಸ್‌ಗೆ ವರ್ಗಾಯಿಸಲಾಗುತ್ತದೆಯೆಂದು ನಮಗೆ ಯಾಕೆ ತಿಳಿಸಲಿಲ್ಲ? PMNRF ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದ ಔಚಿತ್ಯವೇನು? ಎಲ್ಲಾ ಸಿಬ್ಬಂದಿಗಳಿಗೂ ಸಹಾಯ ಕೋರಲಾದ ನಿಧಿಗೆ ದೇಣಿಗೆ ವರ್ಗಾಯಿಸದ ಕಾರಣವನ್ನು ತಿಳಿಯುವ ಹಕ್ಕಿದೆ ಎಂದು ದೆಹಲಿ ವಿವಿ ಶಿಕ್ಷಕರ ಸಂಘ ಹೇಳಿದೆ.
ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುವಂತೆ ವಿವಿ ರಿಜಿಸ್ಟ್ರಾರ್ ಕೇಳಿದಾಗ್ಯೂ ದೆಹಲಿ ವಿ.ವಿಯ ಅಡಿಯಲ್ಲಿ ಬರುವ ಕೆಲವೊಂದು ಕಾಲೇಜುಗಳಲ್ಲಿ ಬಲವಂತವಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಅನೇಕ ಕಾಲೇಜುಗಳಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ವೇತನವನ್ನು ನಿಯಮಿತವಾಗಿ ಪಡೆಯುತ್ತಿಲ್ಲ. ಅಂತಹ ಸಿಬ್ಬಂದಿಗಳಿಗೆ ದೇಣಿಗೆ ನೀಡುವುದು ಕಷ್ಟವಾಗುತ್ತಿದೆ. ಆದರೂ ಹೆಚ್ಚಿನ ಕಾಲೇಜು ಮಂಡಳಿ ವಿ.ವಿ ರಿಜಿಸ್ಟ್ರಾರಿನ ಶಿಫಾರಸ್ಸನ್ನು ನಿರ್ದೇಶನದಂತೆ ಅನುಷ್ಠಾನಕ್ಕೆ ತಂದಿದೆ. ಎಂದು ದಕ್ಷಿಣ ಕ್ಯಾಂಪಸ್ಸಿನಲ್ಲಿ ಬೋಧಿಸುವ ಸಹಾಯಕ ಪ್ರಾಧ್ಯಾಪಕರು ‘ದಿ ವೈರ್’ಗೆ ತಿಳಿಸಿದ್ದಾರೆ.
ವಿ.ವಿ ರಿಜಿಸ್ಟ್ರಾರ್ ನೌಕರರ ಬಳಿ PMNRFಗಾಗಿ ದೇಣಿಗೆ ಕೇಳಿ ಮನವಿ ಕಳುಹಿಸುವಾಗ PMCARES ನಿಧಿಯನ್ನು ರಚಿಸಿದ್ದರೂ ಅದು ತನ್ನ ಕಾರ್ಯ ನಿರ್ವಹಿಸಲು ಪ್ರಾಂಭಿಸಿರಲಿಲ್ಲ. ನಂತರ ಸದ್ದಿಲ್ಲದೆ ತನ್ನ ಸುತ್ತೋಲೆಯನ್ನು PMCARES ಗೆ ಮಾರ್ಪಡಿಸಿತು.
UGC ಸಿಬ್ಬಂದಿಗಳು ಕೋವಿಡ್ 19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಕೋವಿಡ್ 19 ವಿರುದ್ಧದ ಹೋರಾಟಕ್ಕೆ ವಿ.ವಿಯ ಸಿಬ್ಬಂದಿಗಳೂ PMNRF ಗೆ ದೇಣಿಗೆ ನೀಡಬೇಕೆಂದು ನಾನು ಮನವಿ ಮಾಡಿದ ಬಳಿಕ PMCARES ನ್ನು ಪ್ರಾರಂಭಿಸಲಾಗಿದೆ ಎಂದು UGC ಚೇರ್‌ಮನ್ ಡಿ.ಪಿ. ಸಿಂಗ್ ಪತ್ರಿಕೆಗೆ ಹೇಳಿದ್ದಾರೆ.
ದೆಹಲಿ ವಿ.ವಿಯ ಉಪಕುಲಪತಿಯ ಏಕಪಕ್ಷೀಯ ನಿರ್ಧಾರದ ಹಿಂದೆ UGC ಸುತ್ತೋಲೆ ನೇರ ಪರಿಣಾಮ ಬೀರಿದೆ. PMNRF ಬದಲು PMCARES ಗೆ ದೇಣಿಗೆ ನೀಡುವಂತೆ UGCಯ ಮೇಲೆ ಒತ್ತಡ ಹೇರುವಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು(MHRD) ತನ್ನ ಪ್ರಭಾವ ಬೀರಿದೆ ಎಂದು ದಿ ವೈರ್ ವರದಿ ಮಾಡಿದೆ.
‘ದಿ ಹಿಂದೂ’ ಜತೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿ.ವಿ ಅಧಿಕಾರಿಯೊಬ್ಬರು MHRD ಯ ನಿರ್ದೇಶನದ ಆಧಾರದ ಮೇಲೆ ಉಪಕುಲಪತಿಯ ನಿರ್ಧಾರದಲ್ಲಿ ಬದಲಾವಣೆ ತಂದಿದ್ದಾರೆ.ದೇಣಿಗೆ ಹಣವನ್ನು PMCARES ಗೆ ನಿಧಿ ಕಳುಹಿಸುವಂತೆ ಸಚಿವಾಲಯವು ನಿರಂತರ ಸಂಪರ್ಕಿಸಿತ್ತು ಅದರಂತೆ 4.04 ಕೋಟಿ ರುಪಾಯಿಗಳನ್ನು ಹೊಸ ನಿಧಿಗೆ ವರ್ಗಾಯಿಸಲಾಯಿತು ಎಂದು ಹೇಳಿದ್ದಾರೆ.
ದಿ ವೈರ್’ನೊಂದಿಗೆ ಮಾತನಾಡಿರುವ ವಿವಿ ಶೈಕ್ಷಣಿಕ ಮಂಡಳಿಯ ಚುನಾಯಿತ ಪ್ರತಿನಿಧಿಯಾಗಿರುವ ಸೈಕಟ್ ಘೋಷ್ ‘ಶೈಕ್ಷಣಿಕ ಸಮುದಾಯದ ದೊಡ್ಡ ವರ್ಗವು ಹಣವನ್ನು ಬೇರೆ ನಿಧಿಗೆ ವರ್ಗಾಯಿಸಿದ ಕುರಿತು ಅಸಮಧಾನ ಹೊಂದಿದೆ .ನಾವು ಸ್ವಯಂ ಪ್ರೇರಿತವಾಗಿ PMNRF ಗೆ ನೀಡಿದ ದೇಣಿಗೆಯನ್ನು PMCAREs ನಿಧಿಗೆ ವರ್ಗಾಯಿಸಿರುವುದು ಉಒಕುಲಪತಿಯ ಏಕಪಕ್ಷೀಯ ಮತ್ತು ಅಸಹ್ಯಕರ ತೀರ್ಮಾನ. UGC ಅಥವಾ ಸಚಿವಾಲಯವು ದೇಣಿಗೆಯನ್ನು ಹೊಸ ನಿಧಿಗೆ ಕಳುಹಿಸುವಂತೆ ಶಿಫಾರಸ್ಸು ಮಾಡಿರಬೇಕು. ಆದರೆ ಉಪಕಲಪತಿಯು ಇದನ್ನು ನಿರ್ದೇಶನದಂತೆ ಅನುಸರಿಸಿದ್ದಾರೆ’ಎಂದಿದ್ದಾರೆ.
ಈ ಕುರಿತು ಸ್ಪಷ್ಟನೆಗಾಗಿ ಉಪಕುಲಪತಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು “ದಿ ವೈರ್” ವರದಿ ಮಾಡಿದೆ.
ಅಂದಿನ ಪ್ರಧಾನಿ ಜವಹಾರ್‌ಲಾಲ್ ನೆಹರೂ ಅವರ ದೂರದರ್ಶಿತ್ವದ ಫಲವಾಗಿ ರಾಷ್ಟ್ರೀಯ ವಿಪತ್ತುಗಳನ್ನು ನಿಭಾಯಿಸಲು 1948ರಲ್ಲಿ PMNRF ನ್ನು ಸ್ಥಾಪಿಸಲಾಗಿತ್ತು. ಇದರ ವ್ಯವಸ್ಥೆಯು ಪಾರದರ್ಶಕವಾಗಿದ್ದು ಇದುವರೆಗೂ ಎಲ್ಲಾ ಪ್ರಧಾನಮಂತ್ರಿಗಳೂ ಇದರ ಮೂಲಕವೇ ದೇಣಿಗೆ ಸಂಗ್ರಹಿಸಲು ಕರೆ ನೀಡುತ್ತಿದ್ದರು. ಆದರೆ ನರೇಂದ್ರ ಮೋದಿ ಹೊಸದಾಗಿ ಪ್ರಾರಂಭಿಸಿರುವ PMCARES ನಿಧಿಯು NGO ಮಾದರಿಯ ಚಾರಿಟೇಬಲ್ ಫಂಡ್ ಆಗಿದ್ದು ಇದನ್ನು ಸಾರ್ವಜನಿಕ ಲೆಕ್ಕ ಪರಿಶೋಧನೆಗೆ ಒಳಪಡಿಸಲಾಗುವುದಿಲ್ಲ. ಇದನ್ನು ಸಾರ್ವಜನಿಕ ಟ್ರಸ್ಟ್‌ಗಳಂತೆ ನಿಯಂತ್ರಿಸಲಾಗುವುದಿಲ್ಲ ಅಲ್ಲದೆ ಯಾವುದೇ ಸಾಂವಿಧಾನಿಕ ಕಛೇರಿಯಿಂದಲೂ ಇದನ್ನು ನಿಯಂತ್ರಿಸಲಾಗುವುದಿಲ್ಲ.
ಪ್ರಧಾನಿ ಸೇರಿ ಹೊಸ ನಿಧಿಯ ಇತರ ಮೂರು ಟ್ರಸ್ಟಿಗಳಲ್ಲಿ ಯಾರೂ ವಿರೋಧ ಪಕ್ಷದ ಮುಖ್ಯಸ್ಥರಿಲ್ಲ. ಕೋಟ್ಯಾಂತರ ರುಪಾಯಿಗಳನ್ನು ದೇಣಿಗೆಯಾಗಿ ನಿರ್ವಹಿಸುತ್ತಿರುವ ಈ ನಿಧಿಯನ್ನು ಅತ್ಯಂತ ದುರ್ಬಲ ಕಾನೂನಿನಡಿಯಲ್ಲಿ ರಚಿಸಲಾಗಿದೆ.
PMCARES ನ ಪಾರದರ್ಶಕತೆಯ ಬಗ್ಗೆ ವಿರೋಧ ಪಕ್ಷಗಳು ಹಾಗೂ ಜನರಲ್ಲಿ ಸಂದೇಹಗಳು ಇರುವಾಗ PMNRFಗೆ ನೀಡಿದ ದೇಣಿಗೆಯನ್ನು ಸದ್ದಿಲ್ಲದೆ PMCARESಗೆ ವರ್ಗಾಯಿಸಿದ್ದು ಸಹಜವಾಗಿಯೇ ಆಕ್ರೋಶಕ್ಕೆ ಗುರಿಯಾಗಿದೆ.