ಮಂಗಳೂರು : ಪ್ರಧಾನಿ ಮೋದಿ ಹೋದಲ್ಲಿ ಬಂದಲೆಲ್ಲ ಭಯೋತ್ಪಾದನೆ ಹಾಗೂ ಸುರಕ್ಷತೆ ಬಗ್ಗೆ ಮಾತನಾಡಿದ್ದಾರೆ. ಆದರೆ ಎಲ್ಲಿಯೂ ದೇಶದಲ್ಲಿನ ನಿರುದ್ಯೋಗಿತನ, ಬೆಲೆ ಏರಿಕೆ ಬಗ್ಗೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಗುಡುಗಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಪ್ರಿಯಾಂಕ ಗಾಂಧಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಸರ್ಕಾರದ ಆಡಳಿತದಲ್ಲಿಯೇ ಸಮಸ್ಯೆಗಳು ಹೆಚ್ಚಾಗಿದೆ. ಇವುಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಡಬಲ್ ಇಂಜಿನ್ ಸರ್ಕಾರದ ಆಡಳಿತದಲ್ಲಿ ಅಡುಗೆ ಅನಿಲ, ಬೇಳೆ ಕಾಳುಗಳು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಖರೀದಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಅವರು ಭಯೋತ್ಪಾದನೆ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ರಾಜ್ಯದಲ್ಲಿ ಪ್ರತಿನಿತ್ಯ 5 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಲ್ಲಿ ಜನರಿಗೆ ಭಯವಿರುವುದು ನಿರುದ್ಯೋಗ, ಬೆಲೆ ಏರಿಕೆಯಿಂದಾಗಿ. 6400 ರೈತರು ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, 500ಕ್ಕೂ ಹೆಚ್ಚು ಜನ ಬಡತನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರುದ್ಯೋಗದಿಂದ 1600 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿಗಳೇ ಕರ್ನಾಟಕದಲ್ಲಿ ಭಯೋತ್ಪಾದನೆ ಆಗಿದ್ದರೆ ಅದು ನಿಮ್ಮದೇ ಸರ್ಕಾರದ 40% ಕಮಿಷನ್ ನಿಂದಾಗಿ ಎಂದು ಕಿಡಿಕಾರಿದರು.
ನೀವು ನಿಮ್ಮ ಪರಿಶ್ರಮದಿಂದ ನಂದಿನಿ ಕಟ್ಟಿ ಬೆಳೆಸಿದ್ದು, ಇದು ನಿಮ್ಮ ಹೆಮ್ಮೆಯ ಪ್ರತೀಕವಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗಿ, ಕ್ಷೀರ ಭಾಗ್ಯ ಯೋಜನೆ ಜಾರಿ ಮಾಡಲಾಗಿತ್ತು. ರೈತರಿಗೆ ಕಾಂಗ್ರೆಸ್ ಸರ್ಕಾರ 5 ರೂ. ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಈಗ ನಂದಿನಿಯಲ್ಲಿ ಕೇವಲ 71 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆ ಆಗುತ್ತಿದ್ದು, ಹೀಗಾಗಿ ಅಮೂಲ್ ಹಾಲು ರಾಜ್ಯದ ಮಾರುಕಟ್ಟೆಗೆ ಪರಿಚಯಿಸುತ್ತೇವೆ ಎನ್ನುತ್ತಿದ್ದಾರೆ. ಇದು ನಂದಿನಿ ಸಂಸ್ಥೆಯನ್ನು ನಾಶ ಮಾಡಿ ಗುಜರಾತಿನ ಅಮೂಲ್ ಜತೆ ವಿಲೀನ ಮಾಡುವ ಹುನ್ನಾರ ಎಂದು ಆರೋಪಿಸಿದರು.