ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ವಲಯದಲ್ಲಿ ಹಲವು ವರ್ಷಗಳನ್ನು ಸೇವೆ ಸಲ್ಲಿಸಿರುವ ಹಾಗೂ ಅವರ ಅತ್ಯಂತ ವಿಶ್ವಾಸಾರ್ಹ ಸಹಾಯಕರಾಗಿದ್ದ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ. 1998 ರ ಗುಜರಾತ್ ಕೇಡರ್ ಅರವಿಂದ್ ಕುಮಾರ್ ಶರ್ಮಾ ಅವರೇ ಉತ್ತರ ಪ್ರದೇಶದ ಲಖನೌದಲ್ಲಿ ಬಿಜೆಪಿಗೆ ಸೇರಿದವರು.
ಶರ್ಮಾ ಅವರನ್ನು ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ. ನಂತರ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡುವ ಸಂಭವಗಳೂ ಇವೆ ಎಂದು NDTV ವರದಿ ಮಾಡಿದೆ. ಜನವರಿ 28ರಂದು ಉತ್ತರ ಪ್ರದೇಶದ 12 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಅರವಿಂದ್ ಶರ್ಮಾ ಕೇಂದ್ರ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಲ್ಲಿ (ಎಂಎಸ್‌ಎಂಇ) ಕಾರ್ಯದರ್ಶಿಯಾಗಿದ್ದರು. ಈ ವಾರ ಅವರ ಸ್ವಯಂಪ್ರೇರಿತ ನಿವೃತ್ತಿ ಘೋಷಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಅವರು ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವೇಶ ಮಾಡುವುದರ ಮೂಲಕ ರಾಜಿನಾಮೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ನರೇಂದ್ರ ಮೋದಿಯೊಂದಿಗೆ ದೆಹಲಿಯಲ್ಲಿ ಮಾತ್ರವಲ್ಲದೆ 2014 ಕ್ಕಿಂತ ಮೊದಲು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಕೆಲಸ ಮಾಡಿದ್ದರು. 2001 ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅರವಿಂದ್ ಶರ್ಮಾ ಅವರು ಮೋದಿ ಆಪ್ತ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಧಾನಿ ಮೋದಿ ಗುಜರಾತ್‌ನಲ್ಲಿದ್ದಾಗ, ಶರ್ಮಾ ಅವರು ಗುಜರಾತ್ ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು. ನರೇಂದ್ರ ಮೋದಿ 2014 ರ ಭರ್ಜರಿ ವಿಜಯ ಸಾಧಿಸಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅವರು ಪ್ರಧಾನಿ ಕಚೇರಿಗೆ ಸೇರಿದ್ದರು.