ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರ ರ್ಯಾಲಿಗೆ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆ ಅಡ್ಡಿಯಾಗಿ ಅವರು ಪ್ರವಾಸ ಮೊಟಕುಗೊಳಿಸಿ ವಾಪಸ್ ಆದ ವಿಷಯ ಇದೀಗ ರಾಜಕೀಯ ಕೆಸರೆರಚಾಟದ ಸ್ವರೂಪ ಪಡೆದುಕೊಂಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರಿದಿದೆ. ಸ್ವತಃ ಮೋದಿಯವರೇ “ಭಟಿಂಡಾ ವಿಮಾನ ನಿಲ್ದಾಣದ ವರೆಗೂ ತಾವು ಜೀವಂತವಾಗಿ ಬಂದಿರುವುದಕ್ಕಾಗಿ ನಿಮ್ಮ ಮುಖ್ಯಮಂತ್ರಿಗಳಿಗೆ ನನ್ನ ಧನ್ಯವಾದಗಳನ್ನು ತಿಳಿಸಿ” ಎಂದು ಪಂಜಾಬ್ ಭದ್ರತಾ ಅಧಿಕಾರಿಗಳಿಗೆ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ. ಆ ಮೂಲಕ ಸ್ವತಃ ಮೋದಿಯವರೇ ಈ ಘಟನೆಗೆ ರಾಜಕಾರಣ ಮತ್ತು ಚುನಾವಣಾ ವಾಗ್ವಾದದ ಆಯಾಮ ನೀಡಿದ್ದಾರೆ.
ಆದರೆ, ರಾಜಕೀಯ ಏನೇ ಇರಲಿ. ಪ್ರಧಾನಮಂತ್ರಿಯೊಬ್ಬರ ಸುರಕ್ಷತೆಯ ವಿಷಯದಲ್ಲಿ ನಿಜಕ್ಕೂ ಲೋಪವಾಗಿದೆಯೇ? ಲೋಪವಾಗಿದ್ದರೆ, ಅದಕ್ಕೆ ಯಾರು ಹೊಣೆ ಮತ್ತು ಏನು ಉದ್ದೇಶ? ಎಂಬುದು ದೇಶದ ಜನತೆಗೆ ಗೊತ್ತಾಗಲೇಬೇಕಾದ ಮತ್ತು ಅಧಿಕಾರಸ್ಥರು ತಲೆಕೊಡಲೇಬೇಕಾದ ವಿಷಯ.
ಏಕೆಂದರೆ; ನರೇಂದ್ರ ಮೋದಿಯವರ ಆ ಹೇಳಿಕೆಯನ್ನೇ ತೆಗೆದುಕೊಂಡರೆ, ದೇಶದ ಒಳಗೇ ಒಬ್ಬ ಪ್ರಧಾನಮಂತ್ರಿಗೆ ಸುರಕ್ಷತೆ ಇಲ್ಲವೆ? ಪ್ರಧಾನಮಂತ್ರಿಗಳ ಭದ್ರತೆಗಾಗಿಯೇ ನಿಯೋಜನೆಯಾಗಿರುವ ವಿಶೇಷ ರಕ್ಷಣಾ ದಳ(ಎಸ್ ಪಿಜಿ), ಅತಿ ಸುರಕ್ಷತೆಯ ವಾಹನ ಮತ್ತು ತಾಂತ್ರಿಕ ವ್ಯವಸ್ಥೆಗಳು ತಾವು ನಿರ್ವಹಿಸಲೇಬೇಕಿದ್ದ ಆ ರಕ್ಷಣಾ ಕಾರ್ಯದಲ್ಲಿ ವಿಫಲವಾದವೆ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ದೇಶದ ಜನಸಾಮಾನ್ಯರಲ್ಲಿ ಮೂಡುವ ಅಂತಹ ಪ್ರಶ್ನೆಗಳಿಗೆ ಕೇಂದ್ರ ಗೃಹ ಇಲಾಖೆ, ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ಸರ್ಕಾರಗಳು ಉತ್ತರ ಕೊಡುವ ಮೂಲಕ ದೇಶದ ಭದ್ರತಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ.
ಫಿರೋಜ್ ಪುರದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಭಟಿಂಡಾದಿಂದ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುವುದು ಪ್ರಧಾನಮಂತ್ರಿಗಳ ಪ್ರವಾಸದ ಯೋಜನೆಯಲ್ಲಿತ್ತು. ಆದರೆ, ಭಟಿಂಡಾಕ್ಕೆ ಪ್ರಧಾನಿ ತಲುಪುವ ಹೊತ್ತಿಗೆ ಆ ಪ್ರದೇಶದಲ್ಲಿ ಮೋಡ ಮತ್ತು ಮಳೆಯ ವಾತಾವರಣ ನಿರ್ಮಾಣವಾದ್ದರಿಂದ ಹೆಲಿಕಾಪ್ಟರ್ ಪ್ರಯಾಣ ಸುರಕ್ಷಿತವಲ್ಲ ಎಂಬ ಕಾರಣದಿಂದ ಕೊನೇ ಕ್ಷಣದಲ್ಲಿ ರಸ್ತೆ ಮಾರ್ಗದ ಮೂಲಕ ಎರಡು ಗಂಟೆಯ ಪ್ರಯಾಣ ಕೈಗೊಂಡು ಫಿರೋಜ್ ಪುರ ತಲುಪಲು ಪ್ರಧಾನಮಂತ್ರಿಗಳ ಭದ್ರತಾ ಪಡೆ ಎಸ್ ಪಿಜಿ ನಿರ್ಧರಿಸಿತು. ಅದರಂತೆ ಆ ಮಾರ್ಗದಲ್ಲಿ ತೆರಳಿದಾಗ ಫಿರೋಜ್ ಪುರದ ರ್ಯಾಲಿ ಸ್ಥಳದಿಂದ 10 ಕಿ.ಮೀ ದೂರದಲ್ಲಿ ಫ್ಲೈ ಓವರ್ ಒಂದರಲ್ಲಿ ರೈತ ಸಂಘಟನೆಗಳು ರಸ್ತೆ ತಡೆ ನಡೆಸುತ್ತಿದ್ದರು. ಪಂಜಾಬ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಪ್ರಯತ್ನಿಸಿದರೂ ರಸ್ತೆ ಸಂಚಾರಮುಕ್ತವಾಗಲಿಲ್ಲ. ಸುಮಾರು 20 ನಿಮಿಷ ಕಾದು ಬೇಸತ್ತ ಪ್ರಧಾನಮಂತ್ರಿಗಳು ಪ್ರಯಾಣ ಮೊಟಕುಗೊಳಿಸಿ ವಾಪಸ್ ಭಟಿಂಡಾ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಮರಳಿದರು.
ಇದು ಘಟನೆಯ ಕುರಿತ ಸಂಕ್ಷಿಪ್ತ ಮತ್ತು ಸಾಮಾನ್ಯ ವರದಿ. ಈ ಘಟನೆಯ ಕುರಿತು “ಭದ್ರತಾ ವೈಫಲ್ಯವೇನೂ ಆಗಿಲ್ಲ. ಹೆಲಿಕಾಪ್ಟರ್ ಮೂಲಕ ರ್ಯಾಲಿಗೆ ತೆರಳಬೇಕಿದ್ದ ಪ್ರಧಾನಿಗಳು ಕೊನೇ ಕ್ಷಣದಲ್ಲಿ ರಸ್ತೆ ಮೂಲಕ, ಅದರಲ್ಲೂ ನಿರ್ದಿಷ್ಟವಾಗಿ ರೈತರು ರಸ್ತೆ ತಡೆ ಪ್ರತಿಭಟನೆ ನಡೆಸುತ್ತಿದ್ದ ರಸ್ತೆಯ ಮೂಲಕವೇ ಪ್ರಯಾಣ ಬೆಳೆಸಿದ ವಿಷಯ ತಮಗೆ ಗೊತ್ತಾಗಿದ್ದೇ ಕೊನೇ ಕ್ಷಣದಲ್ಲಿ. ಆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಪ್ರತಿಭಟನಾನಿರತರನ್ನು ದಿಢೀರನೇ ತೆರವು ಮಾಡುವುದು ವಿಳಂಬವಾಗಿರಬಹುದು. ಆದರೆ ಅದರಲ್ಲಿ ಪ್ರಧಾನಿಗಳು ಹೇಳಿದಂತೆ ಜೀವಕ್ಕೆ ಅಪಾಯ ತರುವಂತಹ ಯಾವ ಸಂಗತಿಯೂ ಇರಲಿಲ್ಲ. ಇದೆಲ್ಲಾ ಪಂಜಾಬ್ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ತಂತ್ರಗಾರಿಕೆ. ಜೊತೆಗೆ ಪ್ರಧಾನಿಗಳ ರ್ಯಾಲಿಗೆ 70 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಬಿಜೆಪಿಗಿತ್ತು. ಆದರೆ, ಅಲ್ಲಿಗೆ ಬಂದಿದ್ದು ಏಳುನೂರು ಮಂದಿಯೂ ಇರಲಿಲ್ಲ. ಈ ಮುಖಭಂಗದಿಂದ ತಪ್ಪಿಸಿಕೊಳ್ಳಲು ಕೊನೇ ಕ್ಷಣದಲ್ಲಿ ಬಿಜೆಪಿಯ ‘ಚಾಣಕ್ಯ’ರು ಹೂಡಿದ ನಾಟಕ ಇದು” ಎಂಬ ರಾಜಕೀಯ ವಾದಗಳು ಇವೆ.
ಅದೇನೇ ಇರಲಿ. ಪ್ರಧಾನಮಂತ್ರಿ, ಕೇಂದ್ರ ಗೃಹ ಇಲಾಖೆ ಮತ್ತು ಬಿಜೆಪಿಯ ನಾಯಕರ ಹೇಳಿಕೆಗಳನ್ನೇ ಗಂಭೀರವಾಗಿ ಪರಿಗಣಿಸಿದರೂ, ಈ ಘಟನೆ ಭದ್ರತಾ ವೈಫಲ್ಯ ಎಂಬುದನ್ನು ಗಂಭೀರವಾಗಿ ಪರಿಗಣಿಸಿದರೂ, ಏಳುವ ಪ್ರಶ್ನೆಗಳಿಗೆ ಉತ್ತರಬೇಕಿದೆ.
ಮುಖ್ಯವಾಗಿ, ಪ್ರಧಾನಿ ಮೋದಿಯ ಪಂಜಾಬ್ ಭೇಟಿಯನ್ನು ವಿರೋಧಿಸಿ ಅಲ್ಲಿನ ರೈತ ಸಂಘಟನೆಗಳು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿವೆ ಮತ್ತು ರ್ಯಾಲಿಯ ದಿನ ರಸ್ತೆ ತಡೆ ಹಮ್ಮಿಕೊಂಡಿವೆ ಎಂಬುದು ನಿರಂತರ ವರದಿಯಾಗುತ್ತಲೇ ಇದ್ದರೂ, ಆ ವಿಷಯ ಎಸ್ ಪಿಜಿ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ತಿಳಿದಿರಲಿಲ್ಲವೆ? ಹವಾಮಾನ ವೈಪರೀತ್ಯದಿಂದಾಗಿ ಅನಿವಾರ್ಯವಾಗಿ ಕೊನೇ ಕ್ಷಣದಲ್ಲಿ ರಸ್ತೆ ಮೂಲಕವೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಅಷ್ಟರಲ್ಲಾಗಲೇ ರೈತರು ರಸ್ತೆ ತಡೆ ನಡೆಸುತ್ತಿದ್ದ ವಿಷಯ ಎಸ್ ಪಿಜಿ ಗಮನಕ್ಕೆ ಬಂದಿರಲಿಲ್ಲವೆ?
ಪ್ರಯಾಣಕ್ಕೆ ಸಂಪೂರ್ಣ ಸಂಚಾರಮುಕ್ತ(ಸ್ಯಾನಿಟೈಸ್) ಆಗದೆ, ಆ ರಸ್ತೆಯಲ್ಲಿ ಎಸ್ ಪಿಜಿ ಯಾವ ಸುರಕ್ಷತೆ ಮತ್ತು ಭದ್ರತೆಯ ಭರವಸೆಯ ಮೇಲೆ ಪ್ರಧಾನಮಂತ್ರಿಗಳನ್ನು ಕರೆದೊಯ್ಯಿತು? ರಸ್ತೆಯಲ್ಲಿ ನಡೆಯುತ್ತಿದ್ದ ರಸ್ತೆ ತಡೆಯನ್ನು ತೆರವು ಮಾಡಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ಪಂಜಾಬ್ ಪೊಲೀಸ್ ಮುಖ್ಯಸ್ಥರಿಂದ ಪಡೆದ ಬಳಿಕ ಎಸ್ ಪಿಜಿ ಅಂತಹ ನಿರ್ಧಾರ ಕೈಗೊಂಡಿತೆ? ಹಾಗಿದ್ದರೆ, ರಸ್ತೆ ಸಂಚಾರಮುಕ್ತವಾಗಿರುವ ಬಗ್ಗೆ ಮತ್ತು ಪ್ರಧಾನಿಗಳ ಸುರಕ್ಷತೆಯ ಬಗ್ಗೆ ಖಚಿತ ಮಾಹಿತಿ ನೀಡದೆ ಹೋದ ಪಂಜಾಬ್ ಪೊಲೀಸ್ ಮುಖ್ಯಸ್ಥರು ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಲ್ಲವೆ? ಅಥವಾ ಅಂತಹ ಮಾಹಿತಿ ಪಡೆಯದೇ ಎಸ್ ಪಿಜಿಯೇ ನಿರ್ಧಾರ ಕೈಗೊಂಡಿದ್ದರೆ, ಆ ಲೋಪದ ಹೊಣೆ ಎಸ್ ಪಿಜಿ ಮುಖ್ಯಸ್ಥರು ಮತ್ತು ಅಂತಿಮವಾಗಿ ಗೃಹ ಖಾತೆಯ ಮುಖ್ಯಸ್ಥರೇ ಹೊರಬೇಕಲ್ಲವೆ?
ಅದೆರಡೂ ಆಗಿಲ್ಲವೆಂದಾದರೆ, ಬಹುತೇಕ ನೆಟ್ಟಿಗರು ಮತ್ತು ಕಾಂಗ್ರೆಸ್ಸಿಗರು ಹೇಳುವಂತೆ, ಪ್ರಧಾನಿಗಳ ರ್ಯಾಲಿಗೆ ಜನರೇ ಬರದಿರುವುದರಿಂದ ಉಂಟಾಗಲಿದ್ದ ಭಾರೀ ಮುಖಭಂಗದಿಂದ ಬಚಾವಾಗಲು ಮತ್ತು ಅದೇ ಹೊತ್ತಿಗೆ ಇದೇ ಘಟನೆಯನ್ನು ಬಳಿಸಿಕೊಂಡು ಅನುಕಂಪದ ಅಲೆ ಎಬ್ಬಿಸಿ ರಾಜಕೀಯ ಲಾಭ ಗಳಿಸಲು ಸೃಷ್ಟಿಸಲಾದ ಚುನಾವಣಾ ಗಿಮಿಕ್ ಇದು ಎಂಬ ವಾದಕ್ಕೆ ಸಹಜವಾಗೇ ಪುಷ್ಟಿ ಸಿಗಲಿದೆ.
ಆದರೆ, ಆಗ ದೇಶದ ಭದ್ರತಾ ವ್ಯವಸ್ಥೆ, ದೇಶದ ಪ್ರಧಾನಮಂತ್ರಿಗಳ(ಹುದ್ದೆ) ಭದ್ರತಾ ವ್ಯವಸ್ಥೆ ಮತ್ತು ಪಂಜಾಬ್ ಪೊಲೀಸ್ ವ್ಯವಸ್ಥೆಗೆ ಅಳಿಸಲಾಗದ ಮಸಿ ಅಂಟಲಿದೆ. ಇದು ದೇಶದ ಸುರಕ್ಷತೆ ಮತ್ತು ನಾಯಕರ ಭದ್ರತೆಯ ಘನ ಉದ್ದೇಶದ ಭದ್ರತಾ ಸಂಸ್ಥೆಗಳ ಸಾಂಸ್ಥಿಕ ಘನತೆ ಮತ್ತು ಭರವಸೆಗೆ ಕೊಡುವ ಭಾರೀ ಪೆಟ್ಟು. ಹಾಗಾಗಿ, ನಿಜವಾಗಿಯೂ ಪಂಜಾಬ್ ನಲ್ಲಿ ಬುಧವಾರ ನಡೆದಿದ್ದು ಏನು? ಲೋಪವಾಗಿದ್ದರೆ, ಎಲ್ಲಿ ಆಯಿತು? ಅದಕ್ಕೆ ಯಾರು ಹೊಣೆ? ಎಂಬುದು ದೇಶದ ಸಾರ್ವಜನಿಕರಿಗೆ ಗೊತ್ತಾಗಬೇಕಿದೆ.
ಈ ನಡುವೆ, ಪಂಜಾಬ್ ಸರ್ಕಾರ ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಾಧೀಶ ಮೆಹ್ತಾಬ್ ಗಿಲ್ ನೇತೃತ್ವದಲ್ಲಿ ದ್ವಿಸದಸ್ಯ ಆಯೋಗ ರಚಿಸಿದ್ದು, ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಕೇಂದ್ರ ಗೃಹ ಸಚಿವಾಲಯ ಕೂಡ ತನ್ನದೇ ಆಗ ಸಮಿತಿ ರಚಿಸಿ ತನಿಖೆ ನಡೆಸಲು ಮುಂದಾಗಿದೆ. ಅಲ್ಲದೆ, ಪ್ರಧಾನಮಂತ್ರಿಗಳ ಭದ್ರತಾ ವೈಫಲ್ಯ ಘಟನೆಯ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಬೇಕು ಎಂದು ಸುಪ್ರೀಂಕೋರ್ಟಿಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಸಿಜೆಐ ನ್ಯಾ. ಎನ್ ವಿ ರಮಣ ಅವರ ಪೀಠವೇ ಅರ್ಜಿಯ ವಿಚಾರಣೆಗೆ ಸ್ವೀಕರಿಸಿದೆ. ಪೀಠ ನಾಳೆ ಅರ್ಜಿಯ ವಿಚಾರಣೆ ಆರಂಭಿಸಲಿದೆ.
ಕಳೆದ ಲೋಕಸಭಾ ಚುನಾವಣೆ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ್ ಮತ್ತು ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕೂಡ ಮೋದಿಯವರು ತಮ್ಮ ಹತ್ಯೆಯ ಸಂಚು ನಡೆದಿತ್ತು, ಪ್ರಾಣಕ್ಕೆ ಅಪಾಯವಿದೆ, ದಾಳಿ ನಡೆಸುವ ಸಾಧ್ಯತೆ ಇದೆ ಎಂಬಂತಹ ಹೇಳಿಕೆಗಳನ್ನು ನೀಡಿದ್ದರು. ಇದೀಗ ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಪ್ರಚಾರದಲ್ಲಿರುವ ಅವರು ಮತ್ತೊಮ್ಮೆ ಆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ ಇದು ಗಂಭೀರ ವಿಷಯ. ಆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿಯೇ ಭದ್ರತಾ ಲೋಪದ ಕುರಿತ ತನಿಖೆ ನಡೆದಲ್ಲಿ ಸತ್ಯ ಹೊರಬರುವ ನಿರೀಕ್ಷೆ ಇದೆ.