ಶ್ರೀಲಂಕಾ ಅಧ್ಯಕ್ಷರ ಸ್ಥಿತಿ ಪ್ರಧಾನಿ ಮೋದಿ ಅವರಿಗೂ ಬರಲಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಐದ್ರೀಸ್ ಅಲಿ ಹೇಳಿದ್ದಾರೆ.
ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಸರಕಾರಿ ವಿರೋಧಿ ಅಲೆ ಎದ್ದಿದ್ದು, ಪ್ರತಿಭಟನೆಗೆ ಬೆಚ್ಚಿದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಪರಾರಿಯಾಗಿದ್ದರು. ಪ್ರಸ್ತುತ ನಮ್ಮ ದೇಶದ ಸ್ಥಿತಿ ಗಮನಿಸಿದರೆ ಮುಂದೊಂದು ದಿನ ಇದೇ ಗತಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಬರಬಹುದು ಅವರು ಹೇಳಿದರು.
ಕೋಲ್ಕತಾದ ಸೀಲ್ದಬ್ ಮೆಟ್ರೋ ನಿಲ್ದಾಣ ಉದ್ಘಾಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸದ ಹಿನ್ನೆಲೆಯಲ್ಲಿ ಶಾಸಕ ಐದ್ರೀಸ್ ಅಲಿ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ ೧೧ರಂದು ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿಲ್ದಾಣ ಉದ್ಘಾಟಿಸಲಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಕೈಗೊಂಡ ಕ್ರಮಗಳಿಂದ ಮೆಟ್ರೋ ರೈಲು ಯೋಜನೆ ಅಸ್ತಿತ್ವಕ್ಕೆ ಬಂದಿದೆ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ ಅವರನ್ನು ಕಡೆಗಣಿಸಿರುವುದು ಅನ್ಯಾಯ ಎಂದು ಅವರು ವಿವರಿಸಿದರು.