ನಾನು ಮುಸ್ಲಿಂ ವಿರೋಧಿಯಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದೇನೆ. ಆದರೆ, ಮಕ್ಕಳ ಭವಿಷ್ಯಕ್ಕಾಗಿ ಒಮ್ಮೆ ಯೋಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗುಜರಾತ್ ರಾಜ್ಯದಲ್ಲಿ 2002 ರ ನಂತರ ಒಂದೇ ಒಂದು ಗಲಭೆ ನಡೆದಿಲ್ಲ. ದೇಶವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಸಮಾಜದಲ್ಲಿ ಕೊರತೆಯನ್ನು ಅನುಭವಿಸಿದರೆ ಅದಕ್ಕೆ ಕಾರಣವೇನು? ಕಾಂಗ್ರೆಸ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆಗಳ ಲಾಭ ಏಕೆ ಸಿಗಲಿಲ್ಲ? ಕಾಂಗ್ರೆಸ್ ಅವಧಿಯಲ್ಲಿ ನೀವು ಈ ದುಸ್ಥಿತಿಗೆ ಬಲಿಯಾಗಿದ್ದೀರಾ? ಎಂಬುವುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಜಗತ್ತಿನಲ್ಲಿ ಮುಸ್ಲಿಂ ಸಮಾಜ ಬದಲಾಗುತ್ತಿದೆ. ನಾನು ಗಲ್ಫ್ ದೇಶಗಳಿಗೆ ಹೋಗುತ್ತೇನೆ. ತುಂಬಾ ಗೌರವ ಸಿಗುತ್ತದೆ. ಯೋಗವು ಸೌದಿ ಅರೇಬಿಯಾದಲ್ಲಿ ಅಧಿಕೃತ ಪಠ್ಯಕ್ರಮದ ವಿಷಯವಾಗಿದೆ. ಆದರೆ, ನಾನು ಇಲ್ಲಿ ಯೋಗದ ಬಗ್ಗೆ ಮಾತನಾಡಿದರೆ ಮುಸ್ಲಿಂ ವಿರೋಧಿ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮುಸ್ಲಿಂ ಸಮುದಾಯವು ಕನಿಷ್ಠ ತಮ್ಮ ಮಕ್ಕಳ ಜೀವನದ ಬಗ್ಗೆ ಯೋಚಿಸಿ, ಅವರ ಭವಿಷ್ಯದ ಬಗ್ಗೆ ಯೋಚಿಸಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ತ್ರಿವಳಿ ತಲಾಖ್ ರದ್ದುಗೊಳಿಸಿದಾಗ ಎಲ್ಲರೂ ನನ್ನನ್ನು ಹರಸಿದ್ದಾರೆ. ಆಯುಷ್ಮಾನ್ ಕಾರ್ಡ್ ಎಲ್ಲರಿಗೂ ನೀಡಿದ್ದೇನೆ. ಕೋವಿಡ್ ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಿದ್ದೇನೆ. ನಾನು ದೇಶದಲ್ಲಿನ ಯಾರೊಬ್ಬರಿಗೂ ತಾರತಮ್ಯ ಮಾಡಿಲ್ಲ ಎಂದು ಹೇಳಿದ್ದಾರೆ.