ಮೈಸೂರು: ಏ.೦9: ಹುಲಿ ಯೋಜನೆ ಯಶಸ್ಸು ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಹೆಮ್ಮೆಯ ವಿಚಾರವಾಗಿದೆ. ಭಾರತ ಸ್ವಾತಂತ್ರ್ಯಗಳಿಸಿ 75 ವರ್ಷ ಪೂರ್ಣಗೊಳಿಸಿದೆ. ಇದೇ ಸಮಯದಲ್ಲಿ ವಿಶ್ವದ ಹುಲಿ ಸಂಖ್ಯೆಯಲ್ಲಿ ಶೇ.75 ರಷ್ಟು ಭಾರತದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆ ಸುವರ್ಣ ಮಹೋತ್ಸವ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆಗೊಳಿಸಿ, ಇಂಟರ್ ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಪ್ರಾಜೆಕ್ಟ್ ಟೈಗರ್ ಹುಲಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಮಾರ್ಗವಾಗಿದೆ. ಇದು ಪ್ರಕೃತಿ ಪೂಜಿಸುವ ಭಾರತದ ಸಂಸ್ಕೃತಿಯ ಭಾಗವಾಗಿದೆ. ಹುಲಿ ಯೋಜನೆ 50 ವರ್ಷ ಪೂರ್ಣಗೊಳಿಸಿರುವುದು ಅತ್ಯಂತ ಮಹತ್ವದ ಮೈಲಿಗಲ್ಲು ಆಗಿದೆ. ಭಾರತದ ಹುಲಿಗಳನ್ನು ಮಾತ್ರ ರಕ್ಷಿಸುತ್ತಿಲ್ಲ. ಅವುಗಳು ಪ್ರವರ್ಧಮಾನಕ್ಕೆ ಬರಲು ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ನೀಡಿದೆ ಎಂದರು.


ಇದೇ ಸಂದರ್ಭದಲ್ಲಿ ಹೊಸ ಹುಲಿ ಗಣತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಹೊಸ ಹುಲಿ ಗಣತಿ ಮಾಹಿತಿ ಪ್ರಕಾರ ದೇಶದಲ್ಲಿ 3,167 ಹುಲಿಗಳಿರುವುದಾಗಿ ಹೇಳಲಾಗಿದೆ. ಡೇಟಾ ಪ್ರಕಾರ, 2006ರಲ್ಲಿ 1,411 ಹುಲಿಗಳಿದ್ದರೆ, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಮತ್ತು 2022 ರಲ್ಲಿ 3,167 ಹುಲಿಗಳಿರುವುದಾಗಿ ಮಾಹಿತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಹುಲಿ ಸಂರಕ್ಷಣೆಯ ದೂರದೃಷ್ಟಿವುಳ್ಳ ‘ಅಮೃತ ಮಹೋತ್ಸವದ ಹುಲಿ ವಿಷನ್” ಕಿರುಹೊತ್ತಿಗೆಯನ್ನು ಮೋದಿ ಬಿಡುಗಡೆ ಮಾಡಿದರು.