ಉತ್ತರಾಖಂಡ್ ಚುನಾವಣೆಗೆ ದಿನಗಣನೆ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ. ಜನರಲ್ ರಾವತ್ ಬದುಕಿದ್ದ ಸಮಯದಲ್ಲಿ ಅವರನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದ ಕಾಂಗ್ರೆಸ್ ಇದೀಗ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಅವರ ಕಟೌಟ್ ಬಳಸುತ್ತಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ಉತ್ತರಾಖಂಡದ ಶ್ರೀನಗರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಉಗ್ರರ ವಿರುದ್ದ ಸರ್ಜಿಕಲ್ ಸ್ಟ್ರೈಕ್ ಮಾಡಿದ ಸೇನೆಯ ಬಗ್ಗೆ ಸಂಶಯ ಪಟ್ಟಿದ ಕಾಂಗ್ರೆಸ್ ಪುರಾವೆಗಳನ್ನು ಕೇಳಿತ್ತು. ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಸಿಡಿಎಸ್ ರಾವತ್ ಅವರನ್ನು ಬೀದಿಬದಿಯ ಗೂಂಡಾ ಎಂದು ಕರೆದಿದ್ದರು ಎಂದು ಹರಿಹಾಯ್ದರು.

ದೇಶದಲ್ಲಿ ಯಾವುದಾದರು ಒಂದು ಪಕ್ಷ ಅಧಿಕಾರಕ್ಕಾಗಿ ಹಪಹಪಿಸುತ್ತದೆ ಎಂದರೆ ಅದು ಕಾಂಗ್ರೆಸ್ ಪಕ್ಷ. ತ್ಯಾಗದ ಬೆಲೆ ಎಂದಿಗೂ ಈ ಪಕ್ಷಕ್ಕೆ ಅರ್ಥವಾಗುವುದಿಲ್ಲ. ಜನರಲ್ ರಾವತ್ಗೆ ಅಗೌರವ ತೋರಿದ ಹಾಗೂ ಅವರ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡ ಕಾಂಗ್ರೆಸ್ಸಿಗೆ ಜನರು ಮುಂಬರುವ ಚುನಾವಣೆಯಲ್ಲಿ ಉತ್ತರಾಖಂಡದ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ಹಿಂದಿನ ಕಾಂಗ್ರೆಸ್ ಸರ್ಕಾರಗಳು ಅಭಿವೃದ್ದಿ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ಆದ್ದರಿಂದ ಉತ್ತರಾಖಂಡದ ಜನರು ಪ್ರತಿ ವರ್ಷ ಹೆಚ್ಚು ಬೇರೆಡೆಗೆ ವಲಸೆ ಹೋಗುತ್ತಿದ್ದರು. ಆದರೆ, ಬಿಜೆಪಿ ಉತ್ತರಾಖಂಡ್ ಜನರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.












