ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲೇ ಬಿಹಾರದಲ್ಲಿ 125 ಯೂನಿಟ್ ಉಚಿತ ವಿದ್ಯುತ್ (Free Electricity) ಘೋಷಣೆ ಮಾಡಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಹೇಳಿದ್ದಾರೆ.

ಬಿಹಾರದ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಮೋತಿಹಾರಿಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ₹7 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಪ್ರಧಾನಿ ಮೋದಿಯವರೊಟ್ಟಿಗೆ ಚಾಲನೆ ನೀಡಿದರು. ಬಿಹಾರದಲ್ಲಿ 125 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಗುರುವಾರವಷ್ಟೇ ನಿತೀಶ್ ಕುಮಾರ್ ಘೋಷಣೆ ಮಾಡಿದ್ದರು. ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ.

‘ರಾಜ್ಯದ ಜನರು ವಿದ್ಯುತ್‌ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಈ ಯೋಜನೆ ಜಾರಿಗೊಳಿಸಲು ಬೇಕಾಗಿರುವ ನೆರವನ್ನು ಪ್ರಧಾನಿ ಮೋದಿಯವರೇ ನೀಡಿದ್ದಾರೆ. ಅವರನ್ನು ನಾವು ಗೌರವಿಸುತ್ತೇವೆ. ಅವರ ಮಾರ್ಗದರ್ಶನದಲ್ಲೇ ನಾವು ಕೆಲಸ ಮಾಡುತ್ತೇವೆ’ ಎಂದು ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಯೋಜನೆಗಳಿಗೆ ಸರಿಯಾದ ಅನುದಾನ ನೀಡಿಲ್ಲ. ಬಿಹಾರದಲ್ಲಿ ಯಾವುದೇ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳು ನಡೆದಿರಲಿಲ್ಲ ಎಂದು ಕಿಡಿಕಾರಿದರು.

‘ಇದು ಉಚಿತ ಯೋಜನೆಯಲ್ಲ. ಸರ್ಕಾರದಿಂದ ನೀಡುತ್ತಿರುವ ಶೇ 100ರ ಸಬ್ಸಿಡಿಯಾಗಿದೆ’ ಎಂದು ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸಮರ್ಥ್ ಚೌದರಿ ಅವರು ತಿಳಿಸಿದ್ದಾರೆ. ಈ ವರ್ಷ ಬಿಹಾರಕ್ಕೆ ಮೋದಿಯವರ 6ನೇ ಭೇಟಿಯಾಗಿದೆ. ಅಧಿಕಾರಕ್ಕೆ ಬಂದ ನಂತರ ಅವರು 53 ಬಾರಿ ಬಿಹಾರಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ತಿಳಿಸಿದರು. ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿಯಲ್ಲಿದೆ. ಕಾಂಗ್ರೆಸ್‌ನ ಉಚಿತ ಯೋಜನೆಗಳನ್ನು ಬಿಜೆಪಿ ವಿರೋಧಿಸಿಕೊಂಡು ಬಂದಿತ್ತು.