ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಪಿಎಂ ಕೇರ್ಸ್ ನಿಧಿಯ ಜಾಡು ಹಿಡಿಯುವ ಪ್ರಯತ್ನ ಸಾಮಾಜಿಕ ಕಾರ್ಯಕರ್ತರು ಇನ್ನೂ ಕೈಬಿಟ್ಟಿಲ್ಲ. ಪಿಎಂ ಕೇರ್ಸ್ ಸಾರ್ವಜನಿಕ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ವಾದಿಸುತ್ತಿದ್ದ ಪ್ರಧಾನ ಮಂತ್ರಿ ಕಾರ್ಯಲಯ ತನ್ನದೇ ತಪ್ಪಿನಿಂದ ಈಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
ಪಿಎಂ ಕೇರ್ಸ್ ನಿಧಿಗೆ ಬಂದಿರುವ ದೇಣಿಗೆಯ ಕುರಿತು ಆರ್ಟಿಐ ಮಾಹಿತಿ ಕೇಳಿದರೂ ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗಪಡಿಸದಿದ್ದ ಪ್ರಧಾನ ಮಂತ್ರಿ ಕಾರ್ಯಲವು ಈಗ ಉತ್ತರವನ್ನು ಹೇಳಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಎಂ ಕೇರ್ಸ್ ನಿಧಿಯ ಕುರಿತು ವ್ಯಾಪಕವಾದ ಮಾಹಿತಿಯನ್ನು ಕೆದಕುತ್ತಿದ್ದ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು, ಪಿಎಂ ಕೇರ್ಸ್ ಆರ್ಟಿಐ ಅಡಿಯಲ್ಲಿ ಬರುತ್ತದೆ. ಒಂದು ವೇಳೆ ಪ್ರಧಾನಿ ಕಾರ್ಯಾಲಯ ಇದಕ್ಕೊಪ್ಪದಿದ್ದಲ್ಲಿ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿದ್ದಾರೆ.
ಆರ್ಟಿಐ ಕಾಯ್ದೆಯ ಸೆಕ್ಷನ್ 2 (h)(d) ಪ್ರಕಾರ ಸರ್ಕಾವು ನೋಟಿಫಿಕೇಶನ್ ಅಥವಾ ಆದೇಶ ಹೊರಡಿಸಿ ಅಸ್ಥಿತ್ವಕ್ಕೆ ಬಂದಂತಹ ಯಾವುದೇ ವಿಚಾರವೂ ಸಾರ್ವಜನಿಕ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. ಈ ಸೆಕ್ಷನ್ ಪ್ರಕಾರ ಪಿಎಂ ಕೇರ್ಸ್ ನಿಧಿಯೂ ಸಾರ್ವಜನಿಕ ಅಧಿಕಾರದ ವ್ಯಾಪ್ತಿಗೆ ಬರಲೇಬೇಕಾಗುತ್ತದೆ.
ಪ್ರಧಾನ ಮಂತ್ರಿ ಕಾರ್ಯಾಲಯವು ಈವರೆಗೆ ಪ್ರತಿಪಾದಿಸುತ್ತಿದ್ದ ವಿಚಾರವೇನೆಂದರೆ ಯಾವುದೇ ಗೆಜೆಟ್ ನೋಟಿಫಿಕೇಶನ್ನ ಮುಖಾಂತರ ಪಿಎಂ ಕೇರ್ಸ್ ನಿಧಿ ಸ್ಥಾಪಿತವಾಗಿಲ್ಲವೆಂದು. ಆದರೆ, ಪಿಎಂ ಕೇರ್ಸ್ ನಿಧಿ ಸ್ಥಾಪನೆಯ ಕುರಿತು ಸರ್ಕಾರ ಹೊರಡಿಸಿದ ನೋಟಿಫಿಕೇಶನ್ ಪ್ರಧಾನ ಮಂತ್ರಿ ಕಾರ್ಯಾಲಯದ ವ್ಯವಸ್ಥಿತ ಯೋಜನೆಯನ್ನು ಬುಡಮೇಲಾಗಿಸಿದೆ.
ಮಾರ್ಚ್ 3, 2020ರಂದು ಸರ್ಕಾರದ ಜಂಟಿ ಕಾರ್ಯದರ್ಶಿ ಜ್ಞಾನೇಶ್ವರ್ ಕುಮಾರ್ ಸಿಂಗ್ ಅವರ ಸಹಿ ಇರುವಂತಹ ನೋಟಿಫಿಕೇಶನ್ ಒಂದನ್ನು ಸಾಕೇತ್ ಗೋಖಲೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಪಿಎಂ ಕೇರ್ಸ್ ಕುರಿತಾದ ಉಲ್ಲೇಖವಿದೆ. ಇದರಲ್ಲಿ, ಪಿಎಂ ಕೇರ್ಸ್ ನಿಧಿಯು ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಪಿಎಂ ಕೇರ್ಸ್ ಆರ್ಟಿಐ ವ್ಯಾಪ್ತಿಗೆ ಬರಬೇಕು ಎಂಬುದು ಸಾಕೇತ್ ಅವರ ವಾದ.
ಒಟ್ಟಿನಲ್ಲಿ, ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ಪಿಎಂ-ಕೇರ್ಸ್ ನಿಧಿಯ ರಹಸ್ಯ ಇನ್ನಾದರೂ ಬಯಲಾಗಬಹುದೇ? ಅಥವಾ ಇನ್ನಾವುದಾದರೂ ಕಾರಣ ನೀಡಿ ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ನೀಡುವುದರಿಂದ ತಪ್ಪಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.