ಪ್ರತಿಪಕ್ಷಗಳು ತಮ್ಮ ಒಕ್ಕೂಟದ ಹೆಸರಾಗಿ ‘ಇಂಡಿಯಾ’ ಪದ ಬಳಸದಂತೆ ವಿರೋಧ ಪಕ್ಷಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಶುಕ್ರವಾರ (ಆಗಸ್ಟ್ 4) ವಿಚಾರಣೆ ನಡೆಸಿದೆ.
ಅರ್ಜಿಗೆ ಸಂಬಂಧಿಸದಂತೆ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಸೇರಿದಂತೆ ಪ್ರತಿಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮಣಿಸಲು ತಂತ್ರವಾಗಿ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಸಿವ್ ಅಲಯನ್ಸ್ ಇಂಡಿಯಾ) ರಚಿಸಿಕೊಂಡಿವೆ. ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಬಳಸಿರುವುದು ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಅಲ್ಲದೆ ಜುಲೈ 18ರಂದು ಎನ್ಡಿಎ ಮೈತ್ರಿಕೂಟದ 38 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನದ ಸಭೆ ನಡೆಸಿದ್ದರು.
ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, “ಭಾರತವು ಮೈತ್ರಿಕೂಟಗಳ ಸುದೀರ್ಘ ಪರಂಪರೆ ಹೊಂದಿದೆ. ಆದರೆ, ನಕಾರಾತ್ಮಕ ಚಿಂತನೆಯಿಂದ ರೂಪುಗೊಂಡ ಮೈತ್ರಿಕೂಟ ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ಹೇಳಿದ್ದರು.
“ʼಎನ್’ ಎಂದರೆ ನವ ಭಾರತ, ‘ಡಿ’ ಎಂದರೆ ಅಭಿವೃದ್ಧಿ ಹೊಂದಿದ ದೇಶ, ‘ಎ’ ಎಂದರೆ ಜನರು ಹಾಗೂ ಪ್ರದೇಶಗಳ ಆಕಾಂಕ್ಷೆಗಳು: ಎಂದು ಎನ್ಡಿಎ ಪದಕ್ಕೆ ಪ್ರಧಾನಿ ಮೋದಿ ಹೊಸ ವ್ಯಾಖ್ಯಾನ ನೀಡಿದ್ದರು.
ಪ್ರತಿಪಕ್ಷಗಳ ಇಂಡಿಯಾ ಪದ ಬಳಕೆ ಬಗ್ಗೆ ಸುದೀರ್ಘ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್ ವಾದ ಪ್ರತಿವಾದ ಆಲಿಸಿ ತೀರ್ಮಾನಿಸಲಿದೆ.
ಈ ಸುದ್ದಿ ಓದಿದ್ದೀರಾ? ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಪಿಸಿ ಆಮದಿಗೆ ಕೇಂದ್ರ ಸರ್ಕಾರ ನಿರ್ಬಂಧ
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳ ಒಕ್ಕೂಟವು ಪಟ್ಟು ಹಿಡಿದಿದೆ. ಇದರಿಂದ ಸಂಸತ್ತಿನ ಉಭಯ ಸದನಗಳ ಕಲಾಪ ಸುಗಮವಾಗಿ ನಡೆಯದೆ ಗದ್ದಲದಲ್ಲಿ ಕೊನೆಯಾಗುತ್ತಿದೆ. ಪ್ರತಿಪಕ್ಷಗಳು ಸದನದ ಹೊರಗೂ ಪ್ರತಿಭಟನೆ ನಡೆಸುತ್ತಿವೆ.
ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಪದ ಸೂಕ್ತವಾಗಿದೆಯೇ ಎಂಬ ಅಂಶದ ನಿರ್ಧಾರ ಸದ್ಯ ದೆಹಲಿ ಹೈಕೋರ್ಟ್ ಅಂಗಳದಲ್ಲಿದೆ.