• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಭೌತಿಕ ಸ್ವಾತಂತ್ರ್ಯವೂ ನೈತಿಕ ಜವಾಬ್ದಾರಿಯೂ

ಪ್ರತಿಧ್ವನಿ by ಪ್ರತಿಧ್ವನಿ
August 15, 2024
in ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ
0
ಭೌತಿಕ ಸ್ವಾತಂತ್ರ್ಯವೂ ನೈತಿಕ ಜವಾಬ್ದಾರಿಯೂ
Share on WhatsAppShare on FacebookShare on Telegram

ಮಾನವ ಸಮಾಜದ ಬದುಕಿನೊಂದಿಗೆ ಜೀವ ವೈವಿಧ್ಯತೆಯ ಸ್ವಾತಂತ್ರ್ಯವನ್ನೂ ಪ್ರೀತಿಸಬೇಕಿದೆ

ADVERTISEMENT

—-ನಾ ದಿವಾಕರ—-

ಬ್ರಿಟೀಷ್‌ ವಸಾಹತುಶಾಹಿ ದಾಸ್ಯದಿಂದ ವಿಮೋಚನೆ ಪಡೆದು 77 ಸಂವತ್ಸರಗಳನ್ನು ಪೂರೈಸಿರುವ ಭಾರತ 78ನೆಯ ವರ್ಷದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದೆ. “ ಹರ್‌ ಘರ್‌ ತಿರಂಗಾ –ಘರ್‌ ಘರ್‌ ತಿರಂಗಾ ) ಎಂಬ ಭಾವನಾತ್ಮಕ ಘೋಷಣೆಯೊಂದಿಗೆ ದೇಶದ ಪ್ರತಿಯೊಂದು ಮನೆಯೂ ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸುವ ಹೊತ್ತಿನಲ್ಲೇ ಕೇರಳದ ವಯನಾಡಿನಲ್ಲಿ ನೂರಾರು ಮನೆಗಳು ಭೂಪಟದಿಂದಲೇ ಅಳಿಸಿಹೋಗಿವೆ. ಸ್ವತಂತ್ರ ಭಾರತ ತನ್ನ ಪಯಣದಲ್ಲಿ ಕಂಡಿರುವ ಅಪ್ರತಿಮ ಸಾಧನೆಗಳು ಮತ್ತು ಯಶಸ್ಸಿನ ಯಶೋಗಾಥೆಗಳ ನಡುವೆಯೇ ಈ ಪಯಣದ ಮೂಲ ಫಲಾನುಭವಿಗಳಾದ ಸುಶಿಕ್ಷಿತ, ಆಧುನಿಕ, ಹಿತವಲಯದ ಜನರು ತಮ್ಮ ಸಾಮಾಜಿಕ ಜವಾಬ್ದಾರಿ, ಸಾಂಸ್ಕೃತಿಕ ಹೊಣೆಗಾರಿಕೆ ಹಾಗೂ ಸಾಂವಿಧಾನಿಕ ಬಾಧ್ಯತೆಗಳತ್ತ ಗಮನಹರಿಸಬೇಕಿದೆ.

 ಸ್ವಾತಂತ್ರ್ಯದ ಪೂರ್ವ ಸೂರಿಗಳನ್ನು ಸ್ಮರಿಸುತ್ತಲೇ ವಿಮೋಚನೆಯ ಹಾದಿಯಲ್ಲಿ ತಮ್ಮ ಸಕಲ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಭವಿಷ್ಯದ ಭಾರತಕ್ಕೆ ಬುನಾದಿ ನಿರ್ಮಿಸಿದ ಮಹನೀಯರನ್ನು ಗೌರವಿಸುವ ಪ್ರಜ್ಞಾವಂತ ಜನತೆಗೆ, ಈ ದಾರ್ಶನಿಕ ನಾಯಕರು ಬಿಟ್ಟು ಹೋದ ಹಾದಿಯ ಪರಿವೆ ಇರುವಂತೆಯೇ ಅವರ ಉದಾತ್ತ ಚಿಂತನೆಗಳ, ಆದರ್ಶಗಳ ಅರಿವೂ ಇರಬೇಕಾದ್ದು ವರ್ತಮಾನದ ತುರ್ತು. ವಸಾಹತು ದಾಸ್ಯದಿಂದ ವಿಮೋಚನೆ ಹೊಂದಿದ ಭಾರತ ಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿರುವ ಬಹುಸಾಂಸ್ಕೃತಿಕ, ಬಹುಭಾಷಿಕ, ಬಹುಧರ್ಮೀಯ ನೆಲೆಗಳನ್ನು ಸಂರಕ್ಷಿಸುವುದಷ್ಟೇ ಅಲ್ಲದೆ ಇನ್ನೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ದಾರ್ಶನಿಕರು ರೂಪಿಸಿದ ತಾತ್ವಿಕ ಹಾದಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿಯನ್ನು 21ನೆಯ ಶತಮಾನದ ನವ ಭಾರತ ಹೊರಬೇಕಿದೆ.

 ಸಂಭ್ರಮದ ನಡುವೆ !!!!

 ಸ್ವಾತಂತ್ರ್ಯೋತ್ಸವ ಎಂದಾಕ್ಷಣ ಅಲ್ಲೊಂದು ಸಂಭ್ರಮ ಮನೆಮಾಡಿರುವುದು ಸಹಜ. ಏಕೆಂದರೆ ಸ್ವತಂತ್ರ ಭಾರತ ನಾಗರಿಕರಿಗೆ ಒಂದು ಸ್ವಾಯತ್ತ-ಸ್ವಾವಲಂಬಿ ಬದುಕನ್ನು ಕಲ್ಪಿಸಿದೆ. ವರ್ತಮಾನ ಭಾರತ ಇಂದು ನಾಲ್ಕೂ ಗಡಿಗಳಿಂದ ಭೌಗೋಳಿಕ ಸವಾಲುಗಳನ್ನು, ರಾಜತಾಂತ್ರಿಕ ಅಪಾಯಗಳನ್ನು ಎದುರಿಸುತ್ತಿದ್ದರೂ ಈ ದೇಶದ ಐಕ್ಯತೆ ಮತ್ತು ಅಖಂಡತೆಯನ್ನು ಕಾಪಾಡುತ್ತಿರುವುದು ಇಲ್ಲಿನ ಬಹುಸಾಂಸ್ಕೃತಿಕ ಸಮಾಜಗಳು. ಆಂತರಿಕವಾಗಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಭೌಗೋಳಿಕವಾಗಿ ಭಾರತವನ್ನು ಒಂದು ಹೆಮ್ಮೆಯ ರಾಷ್ಟ್ರವನ್ನಾಗಿ ಕಟ್ಟುವ ಪ್ರಕ್ರಿಯೆಯಲ್ಲಿ ಈ ಸಾಂಸ್ಕೃತಿಕ ನೆಲೆಗಳೇ ಪ್ರಧಾನ ಭೂಮಿಕೆ ವಹಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಂವಿಧಾನ ಪ್ರಣೀತ ಸೋದರತ್ವ, ಸಮನ್ವಯ ಮತ್ತು ವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು ಕಿಂಚಿತ್ತು ಘಾಸಿಗೊಳಗಾದರೂ, ಅಂತಹ ಪ್ರಯತ್ನಗಳ ವಿರುದ್ಧ ಸಿಡಿದೇಳುವ ಒಂದು ನಾಗರಿಕ ಸಮಾಜ (Civil Society) ನಮ್ಮಲ್ಲಿ ಜಾಗೃತಾವಸ್ಥೆಯಲ್ಲಿ ಇದ್ದೇ ಇರುತ್ತದೆ.

 ಈ ನಾಗರಿಕ ಸಮಾಜವನ್ನು ನಿರ್ದೇಶಿಸಲು ತಳಸಮಾಜದ ಜನತೆ ಅವಲಂಬಿಸುವ ತಾತ್ವಿಕ-ಬೌದ್ಧಿಕ ಚಿಂತನಾವಾಹಿನಿಗಳು ಗಾಂಧಿ, ಅಂಬೇಡ್ಕರ್‌, ನೆಹರೂ, ಠಾಗೋರ್‌, ಲೋಹಿಯಾ, ಭಗತ್‌ ಸಿಂಗ್ ಮೊದಲಾದ ಪೂರ್ವಸೂರಿಗಳಿಂದ‌ ಹರಿದುಬಂದು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯೂರಿವೆ. ತತ್ವ-ಸಿದ್ಧಾಂತಗಳನ್ನು ಬದಿಗಿಟ್ಟು ನೋಡಿದಾಗ ಈ ಮಹನೀಯರ ಆದರ್ಶಗಳು ಭಾರತದ ಬಹುಸಾಂಸ್ಕೃತಿಕ ಸಮಾಜದಲ್ಲಿ ಅಂತರ್ಗತವಾಗಿರುವುದೂ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಬೌದ್ಧಿಕ ಅಂತರ್‌ವಾಹಿನಿಯನ್ನು ವರ್ತಮಾನ ಭಾರತದ ಡಿಜಿಟಲ್‌ ಯುಗಕ್ಕೆ ತಲುಪಿಸುವುದು ಹೇಗೆ ? ಅದರೊಳಗಿನ ಚಿಂತನಾಧಾರೆಗಳನ್ನು ತಳಸಮಾಜಕ್ಕೆ ಮನದಟ್ಟು ಮಾಡುವುದು ಹೇಗೆ ? ಆ ಕಾಲದ ಚಿಂತನೆಗಳನ್ನು ಈವತ್ತಿನ ಸಂದರ್ಭದಲ್ಲಿಟ್ಟು ನೋಡುವಾಗ ಇದೇ ಚಿಂತನೆಗಳನ್ನು ಪುನರ್‌ಮಂಥನ ಮಾಡಿ, ಡಿಜಿಟಲ್‌ ಯುಗದ ಮಿಲೆನಿಯಂ ತಲೆಮಾರಿಗೆ ತಲುಪಿಸುವುದು ಹೇಗೆ ? ಭವಿಷ್ಯ ಭಾರತಕ್ಕೆ ಮತ್ತು ಭಾರತದ ಭವಿತವ್ಯಕ್ಕೆ ಈ ತಾತ್ವಿಕ ಬೋಧನೆಗಳ ಫಲಶ್ರುತಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಾರ್ಗಗಳು ಯಾವುವು ? ಈ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಈವತ್ತಿನ ತುರ್ತು.

ತತ್ವ-ಸಿದ್ಧಾಂತ-ಅಸ್ಮಿತೆಗಳ ನಡುವೆ

 ಆದರೆ ಎಲ್ಲ ದಾರ್ಶನಿಕರನ್ನೂ ತತ್ವ-ಸಿದ್ಧಾಂತಗಳ ಚೌಕಟ್ಟುಗಳಲ್ಲಿ ಬಂಧಿಸಿಟ್ಟು ತನ್ನದೇ ಆದ ಅಸ್ಮಿತೆಯ ಲೋಕಗಳನ್ನು ಸೃಷ್ಟಿಸಿಕೊಂಡಿರುವ ಭಾರತೀಯ ಸಮಾಜವು ದಿನದಿಂದ ದಿನಕ್ಕೆ ಮತ್ತಷ್ಟು ವಿಘಟನೆಯತ್ತಲೇ ಸಾಗುತ್ತಿರುವುದು ಯೋಚಿಸಬೇಕಾದ ವಿಚಾರ. ಇದಕ್ಕೆ ಕಾರಣ ನಾವು ಚರಿತ್ರೆಯನ್ನು ನೋಡುತ್ತಿರುವ ವಿಧಾನ. ಇತಿಹಾಸದಲ್ಲಿ ಆಗಿಹೋದ ದಾರ್ಶನಿಕರನ್ನು ಈವತ್ತಿನ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳ ನಡುವೆ ನೋಡುವಾಗ ನಮ್ಮಲ್ಲಿರಬೇಕಾದ ನೇರನೋಟ ಅಥವಾ ಒಳನೋಟ ಇಂದು ಕಾಣೆಯಾಗುತ್ತಿದೆ. ಇದಕ್ಕೆ ಕಾರಣ ನಾವು ವ್ಯಕ್ತಿ ವೈಭವೀಕರಣ ಅಥವಾ ತುಷ್ಟೀಕರಣದತ್ತ ವಾಲುತ್ತಿದ್ದೇವೆ. ವರ್ತಮಾನದ ತಾತ್ವಿಕ ಗ್ರಹಿಕೆಗಳ ಮೂಸೆಯಲ್ಲಿ ಚರಿತ್ರೆಯ ದಾರ್ಶನಿಕತೆಯನ್ನು ನೋಡುವಾಗ ಸಹಜವಾಗಿಯೇ ಅದು ವ್ಯಕ್ತಿ ಕೇಂದ್ರಿತವಾಗುತ್ತದೆ. ಅಲ್ಲಿ ವಸ್ತುನಿಷ್ಠ ಗ್ರಹಿಕೆ ಇಲ್ಲವಾದಾಗ, ಈ ದಾರ್ಶನಿಕರನ್ನು ವೈಭವೀಕರಿಸುವ, ಭಾವಪ್ರಧಾನವಾಗಿಸುವ (Romanticise) ಪ್ರಯತ್ನಗಳು ನಡೆಯುತ್ತವೆ.

 ಈ Romanticisation ಪ್ರಕ್ರಿಯೆಯಲ್ಲಿ ಸಿಲುಕುವ ಪೂರ್ವಸೂರಿಗಳನ್ನು ಒಂದು ನೆಲೆಯಲ್ಲಿ ಮೂರ್ತೀಕರಣಕ್ಕೊಳಪಡಿಸಿದರೆ (Idolisation) ಮತ್ತೊಂದೆಡೆ ವ್ಯಕ್ತಿ ಕೇಂದ್ರೀತ ಪ್ರತಿಮಾಕರಣಕ್ಕೆ (Iconisation) ಒಳಪಡಿಸಲಾಗುತ್ತದೆ. ಈ ದಾರ್ಶನಿಕ ಚಿಂತನೆಗಳ ನಡುವೆ ಇದ್ದಿರಬಹುದಾದ ಭಿನ್ನ ನಿಲುವುಗಳನ್ನು ನಮ್ಮದೇ ಆದ ವರ್ತಮಾನದ ತಾತ್ವಿಕ ಚೌಕಟ್ಟಿನೊಳಗಿಟ್ಟು ಅಪವಾಖ್ಯಾನಕ್ಕೊಳಪಡಿಸುವ ಒಂದು ಬೌದ್ಧಿಕ ಪರಂಪರೆಗೆ ವರ್ತಮಾನದ ಸಮಾಜ ಸಾಕ್ಷಿಯಾಗುತ್ತಿದೆ. ಇಲ್ಲಿ ಎರಡು ಚಿಂತನಾವಾಹಿನಿಗಳ ಅನುಸಂಧಾನವಾಗುವ ಅಗತ್ಯತೆ ಇಂದು ಹೆಚ್ಚಾಗಿಯೇ ಇದ್ದರೂ, ಬಹುಮಟ್ಟಿಗೆ ಮುಖಾಮುಖಿಯಾಗಿಸುವ, ಪರಿಸ್ಪರ ವಿರೋಧಿ ನೆಲೆಗಳಲ್ಲಿಟ್ಟು ವ್ಯಾಖ್ಯಾನಿಸುವ ಧೋರಣೆ ತೀವ್ರವಾಗುತ್ತಿರುವುದು ಚಿಂತೆಗೀಡುಮಾಡುವ ವಿಚಾರ. ಇಲ್ಲಿರುವ ಅಪಾಯ ಎಂದರೆ      ʼ ಮತ್ತು ʼ ಎಂಬ ಪದವನ್ನು ʼ Vs ʼ ಎಂಬ ಪದ ಆಕ್ರಮಿಸುತ್ತದೆ. ಉದಾಹರಣೆಗೆ ಗಾಂಧಿ Vs ಅಂಬೇಡ್ಕರ್‌, ಮಾರ್ಕ್ಸ್‌ Vs ಅಂಬೇಡ್ಕರ್‌, ಗಾಂಧಿ Vs ಮಾರ್ಕ್ಸ್‌, ಲೋಹಿಯಾ Vs ಮಾರ್ಕ್ಸ್‌  ಹೀಗೆ ವಿಸ್ತರಿಸುತ್ತಲೇ ಹೋಗುತ್ತದೆ.

 ಈ ಬೌದ್ಧಿಕ ವಿಸ್ತರಣಾ ಪ್ರಕ್ರಿಯೆಯಲ್ಲಿ ಎಲ್ಲ ಐಕನ್‌ಗಳೂ ಸಹ ನಮ್ಮ ಸಮಕಾಲೀನ ಗ್ರಹೀತಗಳ ಸುಳಿಗೆ ಸಿಲುಕಿ ಭಾವಪ್ರಧಾನತೆಯ (Romanticisation) ವ್ಯಾಖ್ಯಾನಕ್ಕೊಳಗಾಗಿಬಿಡುತ್ತಾರೆ. ಯಾವುದೇ ಚಿಂತನಾ ಕ್ರಮದಲ್ಲಾದರೂ ಭಾವಪ್ರಧಾನತೆಯೇ ಮುಖ್ಯವಾದಾಗ ಅಲ್ಲಿ ವಸ್ತುನಿಷ್ಠ ಮೌಲ್ಯಗಳು ಹಿಂಬದಿಗೆ ಸರಿಯುತ್ತವೆ. ಅಕಾಡೆಮಿಕ್‌ ಅಥವಾ ಬೌದ್ಧಿಕ ವಲಯಗಳಲ್ಲಿ ಇದು ಇನ್ನೂ ಹೆಚ್ಚಿನ ಅಧ್ಯಯನ ಅಥವಾ ಸಂಶೋಧನೆಗೆ ದಾರಿ ಮಾಡಿಕೊಡುವುದಾದರೆ ಸ್ವಾಗತಾರ್ಹ. ಆದರೆ ಸಮಕಾಲೀನ ಭಾರತೀಯ ಸಮಾಜವು ಅಸ್ಮಿತೆಗಳ ನೆಲೆಯಲ್ಲಿ ವಿಘಟನೆಗೊಳಗಾಗಿರುವುದರಿಂದ, ಈ ಚಿಂತಕರ ಆಲೋಚನೆಗಳೆಲ್ಲವೂ ಸಹ ಭಾವಪ್ರಧಾನತೆಯ ಸಂಕೀರ್ಣತೆಗೆ ಒಳಗಾಗುತ್ತವೆ. ಚರಿತ್ರೆಯ ವ್ಯಕ್ತಿಗಳನ್ನು ಅಥವಾ ಚಾರಿತ್ರಿಕ ಸಂದರ್ಭಗಳನ್ನು Romanticise ಮಾಡುವುದರಿಂದ ಇಂದಿನ ತಲೆಮಾರಿಗೆ  ಆ ಚಿಂತನೆಗಳನ್ನು ತಲುಪಿಸುವಾಗ, ನಾವೇ ರೂಪಿಸಿಕೊಂಡ ವಿಭಿನ್ನ ತಾತ್ವಿಕ ನೆಲೆಗಳು ಹೆಚ್ಚು ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ, Vs ಎಂಬ ವಿರೋಧಾಸ್ಪದ ಪದವನ್ನು ಬಿಟ್ಟು ʼ ಮತ್ತು ʼ ಎಂಬ ಒಡನಾಟಡ ಪದವನ್ನು ಬಳಸುವುದು ನಮ್ಮ ಬೌದ್ಧಿಕ ವಲಯದ ಆದ್ಯತೆಯಾಗಬೇಕಿದೆ.

 ಸ್ವಾತಂತ್ರ್ಯಪೂರ್ವ ಆಶಯ-ಆದ್ಯತೆ

 ಸ್ವಾತಂತ್ರ್ಯಪೂರ್ವದಲ್ಲಿ ಮೂಡಿಬಂದ ಎಲ್ಲ ಚಿಂತನಾಕ್ರಮಗಳಲ್ಲೂ ಕಾಣಬಹುದಾಗಿದ್ದ ಒಂದು ಸಮಾನ ಎಳೆ ಎಂದರೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಸಮನ್ವಯತೆ ಮತ್ತು ಸೋದರತ್ವ. ಇದಕ್ಕೆ ಸಾಂವಿಧಾನಿಕ-ಶಾಸನಬದ್ಧ ಆಯಾಮವನ್ನು ನೀಡಿದವರು ಡಾ. ಬಿ.ಆರ್.‌ ಅಂಬೇಡ್ಕರ್. ಸರ್ವರಿಗೂ ಸಾರ್ವತ್ರಿಕ ಶಿಕ್ಷಣ (Universal Education) , ಸಮಸ್ತ ಜನಕೋಟಿಗೂ ಸಾರ್ವತ್ರಿಕ ಆರೋಗ್ಯ ಸೇವೆ ಅಥವಾ ಕಾಳಜಿ (Universal Health Care) ಹಾಗೂ ಭೌತಿಕವಾಗಿ ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ಕಲ್ಪಿಸುವ ಉದ್ಯೋಗಾವಕಾಶಗಳು  (Decent life and  Employment Opportunities) ಈ ಮೂರೂ ಪ್ರಧಾನ ಆದ್ಯತೆ ಮತ್ತು ಆಶಯಗಳ ಸಮ್ಮಿಲನವೇ ನಮ್ಮ ಸಂವಿಧಾನ. ಈ ಮೂರೂ ಆದ್ಯತೆಗಳು ಸ್ವತಂತ್ರ ಭಾರತದ ಯಾವುದೇ ಪ್ರಧಾನ ಜನಾಂದೋಲನಗಳ ಮುಖ್ಯ ಆಗ್ರಹವಾಗಿಲ್ಲ ಎನ್ನುವುದು ಕಟು ವಾಸ್ತವ. ಮೇಲೆ ಹೇಳಿದಂತಹ ಈ ಆಲೋಚನಾ ವಿಧಾನದ ನೇರ ಪರಿಣಾಮವನ್ನು ಇಲ್ಲಿ ಕಾಣಬಹುದು !

 ಒಂದು ವೇಳೆ ಸ್ವತಂತ್ರ ಭಾರತದ ಸರ್ಕಾರಗಳು ಈ ಸಾರ್ವತ್ರಿಕ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಜನತೆಯ ಮೂಲಭೂತ ಹಕ್ಕು ಎಂದು ಪರಿಗಣಿಸಿದ್ದಲ್ಲಿ ಇಂದು ನಾವು ಕಾಣುತ್ತಿರುವ ಒಳಮೀಸಲಾತಿ, ಕೆನೆಪದರ ಮೊದಲಾದ ತಾತ್ವಿಕ ವಿವಾದಗಳನ್ನು ಎದುರಿಸುತ್ತಲೇ ಇರಲಿಲ್ಲ. ಮೀಸಲಾತಿ ಅಥವಾ ಸಕಾರಾತ್ಮಕ ತಾರತಮ್ಯದ ಆಡಳಿತಾತ್ಮಕ ನೀತಿಗಳು “ಹಂಚಿ ತಿನ್ನುವ” ಸಂಸ್ಕೃತಿಗಳಲ್ಲಿ ಯಶಸ್ವಿಯಾಗುತ್ತವೆ. ಭಾರತದಲ್ಲಿ ಶತಮಾನಗಳಿಂದಲೂ ಇರುವುದು “ಹಂಚಿಕೊಳ್ಳುವ ” ಸಂಸ್ಕೃತಿ. ಅಂದರೆ ನಾವು ಹಂಚಲು ಸಿದ್ಧ ಆದರೆ ಯಾರಿಗೆ ಅಥವಾ ಯಾರೊಡನೆ ಎನ್ನುವಾಗ ಜಾತಿ, ಉಪಜಾತಿ, ಒಳಜಾತಿ, ಮತ, ಧರ್ಮ ಎಲ್ಲವೂ ಅಡ್ಡಿಯಾಗುತ್ತವೆ. “ನಮ್ಮವರು” ಎಂಬ ಉದಾತ್ತ ಪರಿಕಲ್ಪನೆಯನ್ನೇ ಈ ಅಸ್ಮಿತೆಯ ಚೌಕಟ್ಟುಗಳೊಳಗೆ ಸಿಕ್ಕಿಸಿರುವ ಭಾರತೀಯ ಸಮಾಜದಲ್ಲಿ ಸಾಮಾಜಿಕ ನ್ಯಾಯ ಎನ್ನುವುದೂ ಸಹ ಇದೇ ಭೂಮಿಕೆಯಲ್ಲಿ ನಿಷ್ಕರ್ಷೆಗೊಳಗಾಗುತ್ತದೆ. ಹಾಗಾಗಿಯೇ ಲಭ್ಯ ಅವಕಾಶಗಳಲ್ಲಿ ಹಂಚಿಕೊಳ್ಳಬೇಕಾದ ಮೀಸಲಾತಿ ಎಂಬ ಸಾಂವಿಧಾನಿಕ ಹಕ್ಕು ಸಹ ವಿರೋಧ ಎದುರಿಸಬೇಕಾಗುತ್ತದೆ.

 ಮತ್ತೊಂದೆಡೆ ಈ ಸಾಂವಿಧಾನಿಕ ಸವಲತ್ತುಗಳೂ ಇಲ್ಲದೆ, ಶಿಕ್ಷಣದಿಂದಲೂ ವಂಚಿತರಾದ, ಆರೋಗ್ಯ ಸೇವೆಯಿಂದಲೂ ವಂಚಿತರಾದ ತಳಸಮಾಜದ ಅಸಂಖ್ಯಾತ ಜನರು ಸಾಂವಿಧಾನಿಕ ಉಪಕ್ರಮಗಳ ಫಲಾನುಭವಿಗಳ ಕಣ್ಣಿಗೂ ಬೀಳುವುದಿಲ್ಲ. ಹಾಗೊಮ್ಮೆ ಗೋಚರಿಸಿದ್ದಲ್ಲಿ ಈ ವೇಳೆಗೆ ಸಾರ್ವತ್ರಿಕ ಶಿಕ್ಷಣ-ಆರೋಗ್ಯ ಸೇವೆ ಮತ್ತು ಉದ್ಯೋಗದ ಹಕ್ಕುಗಳಿಗಾಗಿ ನೂರಾರು ಹೋರಾಟಗಳು ರೂಪುಗೊಳ್ಳಬೇಕಿತ್ತು. ಎಡಪಂಥೀಯ ಅಥವಾ ದಲಿತ ಚಳುವಳಿಗಳಲ್ಲಿ ಢಾಳಾಗಿ ಕಾಣುವ ಒಂದು ಚಾರಿತ್ರಿಕ ಕೊರತೆ ಇದು. ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಬಳಸಿಕೊಂಡು ಸಾಮಾಜಿಕ ಮೇಲ್‌ ಚಲನೆ ಪಡೆದ ಜನತೆ-ಸಮುದಾಯಗಳೆಲ್ಲವೂ ಹಿಂತಿರುಗಿ  ನೋಡುವ ವ್ಯವಧಾನವನ್ನೇ ಕಳೆದುಕೊಂಡಿರುವುದರಿಂದ, ಉಳಿದುಹೋಗುವ ಅವಕಾಶ ವಂಚಿತರು ಸದಾ ಆಕಾಶದತ್ತ ಅಂದರೆ ನವ ಉದಾರವಾದಿ ಮಾರುಕಟ್ಟೆಯತ್ತ, ಕೈಚಾಚಿ ನಿಲ್ಲಬೇಕಾಗುತ್ತದೆ. ಡಿಜಿಟಲ್‌ ಯುಗದಲ್ಲೂ ಇದು ಸತ್ಯ ಎನ್ನುವುದು ಭಾರತ ಎದುರಿಸುತ್ತಿರುವ ಗ್ರಾಮೀಣ ನಿರುದ್ಯೋಗ, ವಲಸೆ ಕಾರ್ಮಿಕರ ಬವಣೆ ಮತ್ತು ಹಸಿವು-ಬಡತನಗಳಲ್ಲಿ ಸ್ಪಷ್ಟವಾಗುತ್ತದೆ.

 ಪೂರ್ವಸೂರಿಗಳ ಚಿಂತನೆಗಳ ನಡುವೆ

 ಇಲ್ಲಿ ನಮಗೆ ಸ್ವಾತಂತ್ರ್ಯದ ಪೂರ್ವಸೂರಿಗಳ, ಅಂದರೆ ಗಾಂಧಿ, ಅಂಬೇಡ್ಕರ್‌, ಠಾಗೋರ್‌, ನೆಹರೂ, ಲೋಹಿಯಾ ಮೊದಲಾದ ಚಿಂತಕರ ಅನುಸಂಧಾನ ಮುಖ್ಯವಾಗುತ್ತದೆ. ಒಬ್ಬರ ವಿರುದ್ಧ ಒಬ್ಬರನ್ನು ನಿಲ್ಲಿಸಿ ನೋಡುವ ʼ Vs ʼ ಮಾದರಿಯ ತೌಲನಿಕ ಅಧ್ಯಯನಕ್ಕೂ, ಪರಸ್ಪರ ಅನುಸಂಧಾನದ ಮೂಲಕ ಮಾಡಬಹುದಾದ ʼಮತ್ತುʼ ಮಾದರಿಯ ಅಧ್ಯಯನಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ನಾವು ಇನ್ನಾದರೂ ಗ್ರಹಿಸಬೇಕಿದೆ. ಆಗ ಮಾತ್ರ ನಮಗೆ ಸಮಕಾಲೀನ ಸಮಾಜದ ಒಳಸುಳಿಗಳನ್ನು ಪರಿಪೂರ್ಣವಾಗಿ ಗ್ರಹಿಸಿ, ಸ್ಪಂದಿಸಲು ಸಾಧ್ಯ. ಇಲ್ಲವಾದರೆ ಆಧುನಿಕೋತ್ತರ ಚಿಂತನೆಗಳಿಗೊಳಗಾಗಿ (Post Modernist) ಸಮಗ್ರ ದೃಷ್ಟಿಕೋನದಿಂದ ವಂಚಿತರಾಗುತ್ತೇವೆ. 78ನೆಯ ಜನ್ಮದಿನದಂದೂ ಸ್ವತಂತ್ರ ಭಾರತ ಎದುರಿಸುತ್ತಿರುವ ಹಸಿವು, ಬಡತನ, ಲಿಂಗ ಅಸೂಕ್ಷ್ಮತೆ, ಲಿಂಗ ತಾರತಮ್ಯ, ಅಸಮಾನತೆ, ಪಿತೃಪ್ರಧಾನ್ಯ-ಊಳಿಗಮಾನ್ಯ-ಯಜಮಾನಿಕೆ, ಮತಾಂಧತೆ, ಜಾತಿಶ್ರೇಷ್ಠತೆ, ಅಸ್ಪೃಶ್ಯತೆ, ಸಾಂಪ್ರದಾಯಿಕತೆ, ಮೌಢ್ಯಾಚಾರಗಳು ಇವೇ ಮೊದಲಾದ ಜಟಿಲ ಸಮಸ್ಯೆಗಳ ಒಳಸುಳಿಗಳು ಅರ್ಥವಾಗಲು ಸಾಧ್ಯ. ಅಸ್ಮಿತೆಗಳ ಚೌಕಟ್ಟುಗಳಿಂದ ಹೊರನಿಂತು ನೋಡುವ ವ್ಯವಧಾನ ಬೆಳೆಸಿಕೊಳ್ಳದೆ ಹೋದರೆ ಈ ಸಮಸ್ಯೆಗಳೆಲ್ಲವೂ ವಿಘಟಿತ ತುಣುಕುಗಳಾಗಿಯೇ ಕಾಣತೊಡಗುತ್ತವೆ.

 ಈ ಸಮಸ್ಯೆಗಳಿಗೆ ಸ್ವಾತಂತ್ರ್ಯದ ಪೂರ್ವ ಸೂರಿಗಳು ಬಿಟ್ಟುಹೋಗಿರುವ ತಾತ್ವಿಕ ಹಾದಿಗಳಲ್ಲಿ ಉತ್ತರ ಕಂಡುಕೊಳ್ಲಲು ಸಾಧ್ಯವಿದೆ. ಆದರೆ ಇದಕ್ಕೂ ಮೊದಲು ಅಲ್ಲಿ ಒಡೆದಿರುವ ಕವಲುಗಳನ್ನು ಒಂದುಗೂಡಿಸಬೇಕಿದೆ. ಈ ಒಂದಾದ ಕವಲುಗಳ ಗುಚ್ಚವನ್ನು ಭಾರತದ ಬಹುಸಾಂಸ್ಕೃತಿಕ ಬೇರುಗಳ ನಡುವೆ ಇಟ್ಟು ಹೊಸ ಚಿಂತನೆಗಳನ್ನು ಮಾಡಬೇಕಿದೆ. 78ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕ್ಷಣಕಾಲ ನಿಂತು ಯೋಚಿಸಿದಾಗ ಈ ಸುಡುವಾಸ್ತವಗಳು ಕಣ್ಣೆದುರು ಹಾದುಹೋಗುತ್ತವೆ. ಸಾಂಪ್ರದಾಯಿಕ ಭಾರತದಲ್ಲಿ ಯಾವುದೇ ಪಂಚಾಂಗ, ಕ್ಯಾಲೆಂಡರ್‌, ಘಳಿಗೆ, ಮುಹೂರ್ತ, ರಾಹುಕಾಲಗಳನ್ನು ನೋಡದೆ ಸಮಸ್ತ ಜನಕೋಟಿಯೂ ಆಚರಿಸುವ ಏಕೈಕ ಹಬ್ಬ ಎಂದರೆ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವ. ಪರಸ್ಪರ ಶುಭಾಶಯಗಳನ್ನು ಕೋರುವ ಮುನ್ನ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ಸ್ವಾತಂತ್ರ್ಯಪೂರ್ವದ ಆಶಯಗಳು ಮತ್ತು ಪೂರ್ವಸೂರಿಗಳ ಅಪೇಕ್ಷೆಗಳು ಸಣ್ಣ ಬೌದ್ಧಿಕ ಕಿಡಿಯನ್ನಾದರೂ ಹೊತ್ತಿಸಿದರೆ ಈ ದಿನವನ್ನು ಸಂಭ್ರಮಿಸುವುದೂ ಸಾರ್ಥಕವಾದೀತು. ನಮ್ಮ ಶುಭಾಶಯಗಳೊಂದಿಗೆ ಯಾರನ್ನು ಬಿಂಬಿಸಬೇಕು ಎನ್ನುವುದಕ್ಕಿಂತಲೂ ಏನನ್ನು ಬಿಂಬಿಸಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು.

**78ನೆಯ ಸ್ವಾತಂತ್ರ್ಯ ದಿನದ ಶುಭಾಶಯಗಳು**

Tags: 76th indipendent dayBJPCongress Partyhappy independence dayindependenceIndependence Dayindependence day (film)independence day 1080pindependence day 1996independence day 2independence day 3 2022independence day cardindependence day craftindependence day movieindependence day of indiaindependence day poemindependence day songindia independence dayindian independence dayindipendent dayindipendenzaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ ಡಿಕೆಶಿ ! ಪರೋಕ್ಷವಾಗಿ ಹೆಚ್‌ಡಿಕೆಗೆ ಠಕ್ಕರ್ !

Next Post

ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತ ಡಿಕೆಶಿ & ಸಿಪಿವೈ ಕಾಂಗ್ರೆಸ್ ಸೇರುವ ಸಿಗ್ನಲ್ ಕೊಟ್ಟಾ ಯೋಗೇಶ್ವರ್ ?!

Related Posts

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
0

ಸ್ಯಾಂಡಲ್ವುಡ್ ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಸಿಕ್ಕಿತು ಮತ್ತೊಂದು ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಉದ್ಯೋನ್ಮುಖ ನಟ ಕಿರಣ್ ರಾಜ್,...

Read moreDetails

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತ ಡಿಕೆಶಿ & ಸಿಪಿವೈ ಕಾಂಗ್ರೆಸ್ ಸೇರುವ ಸಿಗ್ನಲ್ ಕೊಟ್ಟಾ ಯೋಗೇಶ್ವರ್ ?!

ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತ ಡಿಕೆಶಿ & ಸಿಪಿವೈ ಕಾಂಗ್ರೆಸ್ ಸೇರುವ ಸಿಗ್ನಲ್ ಕೊಟ್ಟಾ ಯೋಗೇಶ್ವರ್ ?!

Recent News

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada