
ಹನಿಟ್ರ್ಯಾಪ್ ಮಧ್ಯೆ ಮತ್ತೊಂದು ಗುಸುಗುಸು ಚರ್ಚೆ ಶುರುವಾಗಿದೆ. ಸಚಿವರು, ಶಾಸಕರ ಫೋನ್ ಕದ್ದಾಲಿಕೆ ಬಗ್ಗೆ ಗುಮಾನಿ ಎದ್ದಿದ್ದು, ಭಾರಿ ಚರ್ಚೆ ನಡೆಯುತ್ತಿದೆ. ನಮ್ಮ ಕೆಲ ಫೋನ್ ಕರೆಗಳನ್ನ ಕದ್ದಾಲಿಕೆ ಮಾಡಲಾಗ್ತಿದೆ ಅಂತ ಸಿಎಂ ಭೇಟಿ ಮಾಡಿ ಸಚಿವರು, ಶಾಸಕರು ದೂರು ನೀಡಿದ್ದಾರೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ಸಿಎಂ ಸಿದ್ದರಾಮಯ್ಯ ತಂದಿದ್ದಾರೆ. ಕದ್ದಾಲಿಕೆ ಮಾಡ್ತಿರೋ ಸೂತ್ರದಾರರು ಯಾರು? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಚಿವ ಕೆ.ಎನ್.ರಾಜಣ್ಣ ಜೊತೆ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ಮಾಡಿದ್ದಾರೆ. ಹನಿಟ್ರ್ಯಾಪ್ ಯತ್ನ ಪ್ರಕರಣ ಕುರಿತು ಸಿಎಂಗೆ ಮತ್ತಷ್ಟು ಮಾಹಿತಿ ನೀಡಿದ್ದಾರೆ ಸಚಿವ ರಾಜಣ್ಣ. ಜೊತೆಗೆ ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಹನಿಟ್ರ್ಯಾಪ್ ಮಾತ್ರವಲ್ಲದೆ ಫೋನ್ ಕದ್ದಾಲಿಕೆಯೂ ಆಗಿರುವ ಬಗ್ಗೆ ಸಚಿವ ರಾಜಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಈ ಎರಡೂ ವಿಚಾರಗಳ ಬಗ್ಗೆಯೂ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ.
ಫೋನ್ ಟ್ಯಾಪಿಂಗ್ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದಾರೆ. ಫೋನ್ ಕದ್ದಾಲಿಕೆ ಜಾಲದಲ್ಲಿ ಸರ್ಕಾರವಿದೆ ಎಂದು ಹೇಳಿದ್ದಾರೆ. ರಾಜಕೀಯವಾಗಿ ವಿರೋಧಿಗಳನ್ನು ಬಗ್ಗು ಬಡೀಬೇಕೆಂದೇ ಸರ್ಕಾರ ಮಾಡ್ತಿದೆ ಅಂತ ಆರೋಪಿಸಿದ್ರು. ಫೋನ್ ಟ್ಯಾಪಿಂಗ್ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹಾಗೇನಾದರೂ ಆಗಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ ಅಂತ ಹೇಳಿದ್ದಾರೆ.

ಫೋನ್ ಕದ್ದಾಲಿಕೆ ಮಾಡಿದ್ರೆ ಬಿಜೆಪಿ, ಜೆಡಿಎಸ್ಗೆ ಆ ಕ್ರೆಡಿಟ್ ಸಲ್ಲಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದರೆ ಪ್ರಯೋಜನವಿಲ್ಲ ಅಂತ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಈ ಸಂಬಂಧ ಯಾವುದೇ ದೂರು ಬಂದಿಲ್ಲ. ನಾನು ಬೆಳಗ್ಗೆ ಈ ಬಗ್ಗೆ ವಿಚಾರಣೆ ಮಾಡಿದೆ. ಠಾಣೆಗೆ ದೂರು ಬಂದ್ರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.