ಹಿಜಾಬ್ ಧರಿಸಲು ಅವಕಾಶ ಕೋರಿ ಆರಂಭದ ಪ್ರತಿಭಟನೆಗಳು ನಡೆದಿದ್ದ ಉಡುಪಿ ಕಾಲೇಜಿನ ಆರು ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಗಳ ಸೋರಿಕೆಯ ವಿಷಯವು ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾರ್ಥಿನಿಯರ ಮಾಹಿತಿಗಳನ್ನು ಸೋರಿಕೆ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ ಟಿಎಂಸಿಯ ವೌಸಮ್ ನೂರ್, ಹಿಜಾಬ್ ನಿಷೇಧ ವಿವಾದದ ನಡುವೆ ಕನಿಷ್ಠ ಆರು ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿದ್ದವು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದವು. ಹೆಸರು, ವಿಳಾಸ ಇತ್ಯಾದಿಗಳಂತಹ ಅವರ ವೈಯಕ್ತಿಕ ಮಾಹಿತಿಗಳನ್ನು ಹಲವಾರು ಜನರು ಹಂಚಿಕೊಂಡಿದ್ದು, ಆಮೂಲಕ ಅವರ ಖಾಸಗಿತನವನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ.
“ಇತ್ತೀಚಿನ ದಿನಗಳಲ್ಲಿ, ವೈಯಕ್ತಿಕ ಮಾಹಿತಿಯ ಸೋರಿಕೆಯು ಮಹಿಳೆಯರ ಹಕ್ಕುಗಳು, ಗೌಪ್ಯತೆ ಮತ್ತು ಸುರಕ್ಷತೆಯನ್ನು ಉಲ್ಲಂಘಿಸುವ ಸಾಮಾನ್ಯ ಮಾರ್ಗವಾಗಿದೆ” ಎಂದು ಅವರು ಹೇಳಿದ್ದಾರೆ.
ಡೇಟಾ ಮತ್ತು ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುವುದು ಕೇವಲ ಜನರ ಸುರಕ್ಷತೆಗೆ ಬೆದರಿಕೆ ಮಾತ್ರವಲ್ಲ, ಗೌಪ್ಯತೆಯ ಹಕ್ಕಿನಂತಹ ಮೂಲಭೂತ ಮೂಲಭೂತ ಹಕ್ಕುಗಳ ಉಲ್ಲಂಘನೆ ಕೂಡಾ ಆಗಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಮತ್ತು ಪ್ರತಿಯೊಬ್ಬರ, ವಿಶೇಷವಾಗಿ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಡೇಟಾ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನೂರ್ ಹೇಳಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ಅವಕಾಶ ಕೋರಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಖಾಸಗೀ ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಈ ಮಾಹಿತಿಗಳನ್ನು ಅವರ ಟ್ವಿಟರ್ ಖಾತೆಯಲ್ಲಿ ಹಂಚಿದ್ದರು. ಅದರ ಬೆನ್ನಲ್ಲೇ ಆರು ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆಯ ತಂದೆಯ ಹೋಟೆಲ್ ನಲ್ಲಿ 60-70 ಮಂದಿಯ ದುಷ್ಕರ್ಮಿಗಳ ತಂಡ ದಾಂಧಲೆ ನಡೆಸಿತ್ತು ಎಂದು ವರದಿಯಾಗಿತ್ತು. ಈ ವೇಳೆ ಆಕೆಯ ಅಣ್ಣನ ಮೇಲೂ ಹಲ್ಲೆ ನಡೆಸಲಾಗಿತ್ತು. ವಿದ್ಯಾರ್ಥಿನಿಯರ ಮಾಹಿತಿಗಳು ಹಂಚಿಕೊಂಡಿದ್ದೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಟ್ವಿಟರ್ ನಳಿನ್ ಕುಮಾರ್ ಕಟೀಲ್ ಪೋಸ್ಟ್ ಮಾಡಿದ್ದ ವಿದ್ಯಾರ್ಥಿನಿಯರ ಖಾಸಗಿ ದಾಖಲೆಯನ್ನು ಅಳಿಸಿತ್ತು.