ಬೆಂಗಳೂರು ಸಂಚಾರಿ ಪೊಲೀಸರು ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಟ್ರಾಫಿಕ್ ರೂಲ್ಸ್ ಗಳನ್ನು ಜಾರಿಗೊಳಿಸುತ್ತಿದ್ದು, ಇದೀಗ ಎಲ್ಲೆಂದರಲ್ಲಿ ರಸ್ತೆ ದಾಟುವ ಮಂದಿಗೆ ಪೊಲೀಸರು ದಂಡ ವಿಧಿಸುವ ತಯಾರಿಯಲ್ಲಿದ್ದಾರೆ.
ಸಾಮಾನ್ಯವಾಗಿ ಇಷ್ಟು ದಿನ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಮಾತ್ರ ದಂಡ ಬೀಳುತ್ತಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ. ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ದಂಡ ಬೀಳಲಿದೆ.
ಝೀಬ್ರಾ ಕ್ರಾಸ್ ಬಿಟ್ಟು ಹೋದರೆ ಫೈನ್ !
ಇನ್ಮುಂದೆ ನಿಯಮ ಉಲ್ಲಂಘಿಸುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದಾರೆ. ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರದಲ್ಲೇ ಈ ರೂಲ್ಸ್ ಜಾರಿಗೆ ಬರಲಿದೆ ಎಂಬ ಮಾಹಿತಿಯಿದೆ.
ಝೀಬ್ರಾ ಕ್ರಾಸಿಂಗ್ ವ್ಯವಸ್ಥೆಯೇ ಸರಿಯಾಗಿಲ್ಲ! ಇನ್ನು ಫೈನಾ?
ಕಳೆದ ವರ್ಷದಲ್ಲಿ ರಸ್ತೆ ದಾಟುತ್ತಿದ್ದ 69 ಮಂದಿ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಬಲಿಯಾಗಿದ್ದರು. ಹೀಗಾಗಿ ಸಂಚಾರಿ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೂ ಫೈನ್ ಹಾಕಲು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಬೆಂಗಳೂರು ನಗರದ ಎಷ್ಟೋ ರಸ್ತೆಗಳಲ್ಲಿ ಸರಿಯಾದ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಇಲ್ಲ.
ಮೊದಲು ರಸ್ತೆಗಳನ್ನು ಸರಿಪಡಿಸಲಿ- ಜನರ ಆಕ್ರೋಶ!
ಬೆಂಗಳೂರಿನ ರಸ್ತೆಗಳಂತೂ ಸಂಪೂರ್ಣವಾಗಿ ಕಳಪೆ ಮಟ್ಟಕ್ಕೇರಿದ್ದು, ಇಂತಹ ಸಮಸ್ಯೆಗಳ ಬಗ್ಗೆ ಗಮನ ಕೊಡೋರು ಯಾರೂ ಇಲ್ಲ, ಇದೀಗ ಪಾದಾಚಾರಿಗಳಿಗೂ ದಂಡ ಹಾಕಿದರೆ ಮುಂದೇನು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಹೊಸ ನಿಯಮ ಜಾರಿಗೂ ಮುನ್ನವೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಬರೀ ಚಿಂತನೆಯಷ್ಟೇ ನಡೆಸಿರುವ ಸಂಚಾರಿ ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ರೂಲ್ಸ್ ಜಾರಿಗೊಳಿದರೆ, ಇನ್ನಷ್ಟು ಜನರ ಕೆಂಗಣ್ಣಿಗೆ ಗುರಿಯಾಗುವ ಎಲ್ಲಾ ಸಾಧ್ಯತೆಯಿದೆ.