ಬಾಗಲಕೋಟೆ: ಬಿಜೆಪಿಯವರು ಜನರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ಮತ ಕೇಳುತ್ತಾರೆ. ಇವರಿಗೆ ಜನರೇ ಬುದ್ದಿ ಕಲಿಸಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಹಿಂದುಗಳಲ್ವಾ? ನಮಗೂ ಹಿಂದೂ ಧರ್ಮ, ಬಸವ ಧರ್ಮದ ಮೇಲೆ ನಂಬಿಕೆ, ಗೌರವ ಇದೆ
ಆನಂದ ನ್ಯಾಮಗೌಡ ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರಕ್ಕೆ ಗೆಲ್ಲುತ್ತಾರೆ, ಆನಂದ ನ್ಯಾಮಗೌಡ ತಂದೆಯಷ್ಟೇ ಕ್ರಿಯಾಶೀಲ ಕೆಲಸಗಾರ. ನಾನು ಮುಖ್ಯಮಂತ್ರಿಯಾಗಿರುವಾಗ ಸಿದ್ದುನ್ಯಾಮಗೌಡ ಅವರು ಶಾಸಕರಾಗಿದ್ದರು, ಜಮಖಂಡಿ ಕ್ಷೇತ್ರಕ್ಕೆ ಅವರು ನಮ್ಮ ಸರ್ಕಾರದ ಅವಧಿಯಲ್ಲಿ ಪಡೆದಷ್ಟು ಅನುದಾನ ಬೇರೆ ಯಾರು ಕೂಡ ಪಡೆದುಕೊಂಡಿರಲಿಲ್ಲ. ಅವರು ಕೇಳಿದ ಎಲ್ಲಾ ಕೆಲಸಗಳನ್ನು ನಾನು ಮಾಡಿಕೊಟ್ಟಿದ್ದೆ. ಆನಂದ ನ್ಯಾಮಗೌಡ ಒಬ್ಬ ಸಜ್ಜನ ರಾಜಕಾರಣಿ, ಪಕ್ಷಕ್ಕೆ ಬಹಳಾ ನಿಷ್ಠಾವಂತರಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕಳೆದ ಚುನಾವಣೆಗಿಂತ ಹೆಚ್ಚು ಮತಗಳ ಅಂತರದಿಂದ ಈ ಬಾರಿ ಗೆಲ್ಲುತ್ತಾರೆ ಎಂದು ಹೇಳಿದರು.
ಜೆಡಿಎಸ್ ಜೊತೆಗಿನ ಸಮ್ಮಿಶ್ರ ಸರ್ಕಾರ ಎಚ್.ಡಿ. ಕುಮಾರಸ್ವಾಮಿ ಅವರಿಂದಾಗಿ 14 ತಿಂಗಳಿಗೆ ಬಿದ್ದುಹೋಯಿತು. ಈಗ ಕುಮಾರಸ್ವಾಮಿ ತಮ್ಮ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎನ್ನುತ್ತಾರೆ. ಕೊಟ್ಟ ಕುದುರೆ ಏರಲಾರದವನು ವೀರನು ಅಲ್ಲ, ಶೂರನೂ ಅಲ್ಲ. ಹೀಗಾಯ್ತು ಕುಮಾರಸ್ವಾಮಿ ಕತೆ. ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬ ಗಾಧೆ ಮಾತಿನಂತೆ ನಂತರ ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸಿ ಸರ್ಕಾರ ರಚನೆ ಮಾಡಿದರು. ಹೀಗೆ ದುಡ್ಡುಕೊಟ್ಟು ಖರೀದಿ ಮಾಡಿ ರಚನೆಯಾದ ಸರ್ಕಾರ ಜನರ ಪರವಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕಳೆದ ವರ್ಷದಿಂದ ಒಂದು ಮನೆ ಕೊಡಲಾಗದಿದ್ದವರು ಅಧಿಕಾರದಲ್ಲಿರಲು ಲಾಯಕ್ಕಾ? ನಾಲಾಯಕ್ಕಾ? ಎಂದು ಜನರೇ ತೀರ್ಮಾನ ಮಾಡಬೇಕು. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿ, ನೀವು 4 ವರ್ಷದಲ್ಲಿ 4 ಲಕ್ಷದ 93 ಸಾವಿರ ಮನೆ ಕಟ್ಟಿದ್ದೀವಿ ಎನ್ನುತ್ತೀರಿ, ಇವೆಲ್ಲ ನಾವು ಕೊಟ್ಟಿದ್ದ ಮನೆಗಳು, ಹೊಸದಾಗಿ ಮಂಜೂರು ಮಾಡಿದ ಮನೆಗಳ ಆರ್ಡರ್ ಕಾಪಿ ಕೊಡಪ್ಪಾ ಸೋಮಣ್ಣ ಎಂದು ಕೇಳಿದ್ರೆ ದಾಖಲೆ ಕೊಟ್ಟಿಲ್ಲ. ಆದರೂ ಬೊಮ್ಮಾಯಿ ಅವರು ನಾವು ಭಾರೀ ಸಾಧನೆ ಮಾಡಿದ್ದೇವೆ ಎಂದು ಬೊಗಳೆ ಬಿಡುತ್ತಾರೆ ಎಂದು ಕಿಡಿಕಾರಿದರು.

ನಾವು 2013ರ ಚುನಾವಣೆಯಲ್ಲಿ ಜನರಿಗೆ 165 ಭರವಸೆಗಳನ್ನು ನೀಡಿದ್ದೆವು, ಅದರಲ್ಲಿ 158 ಭರವಸೆಗಳನ್ನು ಈಡೇರಿಸಿ, ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಬಿಜೆಪಿ 2018ರಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ 51 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಈ ಸರ್ಕಾರ ಸಾಧನೆ ಮಾಡಿಲ್ಲ ಎಂಬ ಕಾರಣಕ್ಕೆ ಮೇಲಿಂದ ಮೇಲೆ ಮೋದಿ, ಶಾ ಮತ್ತು ನಡ್ಡಾ ಅವರನ್ನು ಕರ್ನಾಟಕಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಯಾರೂ ಬಂದರೂ ಇಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಲಂಬಾಣಿ ತಾಂಡಗಳು, ಮಜರೆಗಳು, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿ ವಾಸಮಾಡುತ್ತಿರುವವರಿಗೆ ದಾಖಲೆ ಪತ್ರ ಸಿಗುವಂತೆ ಮಾಡಿದವರು ನಾವು. ಮೊನ್ನೆ ಮೋದಿ ಅವರನ್ನು ಕರೆಸಿ ಇದು ತಮ್ಮ ಸರ್ಕಾರದ ಸಾಧನೆ ಎಂದು ಸುಳ್ಳು ಹೇಳಿಸಿ, ಹಕ್ಕುಪತ್ರ ಕೊಡಿಸಿದ್ದಾರೆ. ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಇದರ ಜೊತೆ ಹಾಲು, ಮೊಸರು, ಮಜ್ಜಿಗೆ, ಪೆನ್ನು, ಪುಸ್ತಕ, ಪೇಪರ್ ಗಳ ಮೇಲೆ ಜಿಎಸ್‌ಟಿ ಹಾಕಿ ಬಡವರ ಸುಲಿಗೆ ಮಾಡುತ್ತಿದ್ದಾರೆ. ಇದೇನಾ ಮೋದಿಜೀ ಅಚ್ಚೇದಿನ್? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪತ್ರ ಬರೆದು 40% ಕಮಿಷನ್ ಕುರಿತು ಪತ್ರ ಬರೆದರು ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿ ತನಿಖೆ ಮಾಡಿಸಿದ್ರಾ ಎಂದು ಪ್ರಶ್ನಿಸಿದ ಅವರು, ಹಿಂದೆ ನಮ್ಮ ಸರ್ಕಾರ ಇದ್ದಾಗ ನಾನಾಗಲೀ, ಸಚಿವರಾಗಿದ್ದ ಎಂ.ಬಿ ಪಾಟೀಲ್ ಆಗಲೀ ಎನ್.ಒ.ಸಿ ಕೊಡಲು 5ಪೈಸೆ ಕಮಿಷನ್ ಹಣ ಕೇಳಿದ್ದರೆ ಒಂದು ಕ್ಷಣ ಕೂಡ ರಾಜಕಾರಣದಲ್ಲಿ ಇರುವುದಿಲ್ಲ. ಕಳೆದ 45 ವರ್ಷದಿಂದ ರಾಜಕೀಯದಲ್ಲಿದ್ದೀನಿ, ಆದರೆ ಇಂಥಾ ಭ್ರಷ್ಟ ಸರ್ಕಾರವನ್ನು ನಾನು ಯಾವತ್ತೂ ನೋಡಿರಲಿಲ್ಲ ಎಂದರು.
ನಾವು ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇದನ್ನು ಮೊನ್ನೆ ನಮ್ಮ ಮೂರನೇ ಗ್ಯಾರೆಂಟಿಯಾಗಿ ಘೋಷಣೆ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದ ಪ್ರತೀ ಮನೆಗೆ 200 ಯುನಿಟ್ ಉಚಿತವಾಗಿ ನೀಡಲಿದ್ದೇವೆ, ಇದರ ಜೊತೆಗೆ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿರುವ ಮಹಿಳೆಯರ ಬಾಕಿ ಉಳಿದಿರುವ ಒಟ್ಟು ಸಾಲ 2,227 ಕೋಟಿ ರೂಪಾಯಿಯನ್ನು ಕೂಡ ನಾವು ಅಧಿಕಾರಕ್ಕೆ ಬಂದ ಕೂಡಲೇ ಮನ್ನಾ ಮಾಡುವ ಯೋಚನೆ ಮಾಡಿದ್ದೇವೆ ಎಂದರು.
ನಾನು ಮುಖ್ಯಮಂತ್ರಿಯಾದ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡುತ್ತಿದ್ದ ಅನುದಾನ 400 ಕೋಟಿ ರೂ. ಇತ್ತು, ನಮ್ಮ ಸರ್ಕಾರದ ಕೊನೆ ಬಜೆಟ್ ನಲ್ಲಿ ಈ ಅನುದಾದ 3150 ಕೋಟಿಗೆ ಹೆಚ್ಚಾಗಿತ್ತು. ಮತ್ತೆ ನಾವು ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಜೆಟ್ ನಲ್ಲೇ ಈ ಅನುದಾನವನ್ನು 5000 ಕೋಟಿಗೆ ಏರಿಕೆ ಮಾಡುತ್ತೇವೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್,ಸಿ,ಪಿ/ಟಿ,ಎಸ್,ಪಿ ಕಾನೂನನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ನನ್ನ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ 30,000 ಕೋಟಿ ಇತ್ತು, 5 ವರ್ಷಗಳ ನಂತರ ಕೂಡ ಈ ಯೋಜನೆಗೆ ನೀಡಿರುವ ಅನುದಾನ 30,000 ಕೋಟಿಯಲ್ಲೇ ನಿಂತಿದೆ. ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ, ಈಗಿನ ಬಜೆಟ್ ಗಾತ್ರ 3.09 ಲಕ್ಷ ಕೋಟಿ. ಬಜೆಟ್ ಗಾತ್ರ ಹೆಚ್ಚಾದರೂ ಶೋಷಿತ ಜನರಿಗೆ ನೀಡುವ ಅನುದಾನ ಹೆಚ್ಚಾಗಿಲ್ಲ ಎಂದು ಕಿಡಿಕಾರಿದರು.
ನಾವು ನುಡಿದಂತೆ ನಡೆಯುವವರು, ಬಿಜೆಪಿಯವರು ಕೊಟ್ಟ ಮಾತಿಗೆ ಬೆಲೆಕೊಡದ ವಚನ ಭ್ರಷ್ಟರು. ಇಂಥವರನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರ ನೀಡುವ ಮೂಲಕ ರಾಜ್ಯವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.