ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದು, ಈಗಾಗಲೇ ತಮ್ಮ ಸ್ಪರ್ಧೆಯ ಬಗ್ಗೆ ಖಚಿತಪಡಿಸಿದ್ದಾರೆ.
ಪೋಲ್ ಹೌಸ್ ಸಂಸ್ಥೆ ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗಾಗಿ ಕೋಲಾರದಲ್ಲಿ ವಾರ್ ರೂಂ ಉದ್ಘಾಟನೆ ಮಾಡಲಾಗಿತ್ತು. ಪೋಲ್ ಹೌಸ್ ಸಂಸ್ಥೆ ತನ್ನ ಕಾರ್ಯಚಟುವಟಿಕೆಯ ಮೊದಲ ಭಾಗವಾಗಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆಯನ್ನು ನಡೆಸಿತ್ತು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಮತ್ತು ಕೋಲಾರ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವುದನ್ನು ಸಮೀಕ್ಷೆಯಲ್ಲಿ ಅರಿಯುವುದಾಗಿತ್ತು.

ಪೋಲ್ ಹೌಸ್ ಸಂಸ್ಥೆ ಕೇವಲ ಒಂದು ವಾರದಲ್ಲಿ ಸಂಪೂರ್ಣ ಕೋಲಾರ ವಿಧಾನಸಭಾ ಕ್ಷೇತ್ರದ ಬಗ್ಗೆ ಸಮೀಕ್ಷೆಯನ್ನು ನಡೆಸಿತ್ತು. ಸುಮಾರು 60ಜನರ ತಂಡದಿಂದ ಸಮೀಕ್ಷೆ ನಡೆದಿದ್ದು ವರದಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಿದೆ.
ಸಮೀಕ್ಷೆ ವರದಿಯಲ್ಲಿರುವ ಪ್ರಮುಖ ಅಂಶಗಳು
ಸಂಸ್ಥೆ ಸುಮಾರು 20 ಸಾವಿರ ಸ್ಯಾಂಪಲ್’ಗಳನ್ನು ಸಂಗ್ರಹಿಸಲಾಗಿತ್ತು. ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಬಗ್ಗೆ ಖಚಿತವಾದ ಬಳಿಕ ಕಾಂಗ್ರೆಸ್ ಪಕ್ಷದ ಸಂಘಟನೆ ತೀವ್ರವಾಗಿದೆ. ರಹಸ್ಯವಾಗಿ ಕಾಂಗ್ರೆಸ್ ನಾಯಕರು ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದ್ದಾರೆ.

ಕೋಲಾರದ ಜನ ಸಿದ್ದರಾಮಯ್ಯ ಅವರು ಇಲ್ಲಿಂದ ಆಯ್ಕೆಯಾದರೆ ನಮ್ಮ ಊರಿನಿಂದ ಆಯ್ಕೆಯಾದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಭಾವನಾತ್ಮಕತೆ ಹೊಂದಿದ್ದಾರೆ.
ಸಿಎಂ ಅಭ್ಯರ್ಥಿಯಾಗಿರುವುದರಿಂದ ಭರಪೂರ ಅನುದಾನಗಳು ಈ ಕ್ಷೆತ್ರಕ್ಕೆ ಹರಿದು ಬರಲಿದ್ದು, ಕೋಲಾರ ಅಭಿವೃದ್ಧಿಯತ್ತ ಸಾಗುತ್ತದೆ ಎನ್ನುವ ಅಭಿಪ್ರಾಯ ಹೊಂದಿದ್ದಾರೆ.
ಸಿದ್ದರಾಮಯ್ಯ ಮತ್ತು ಮಾಜಿ ಲೋಕಸಭಾ ಸದಸ್ಯರಾದ ಕೆ.ಎಚ್ ಮುನಿಯಪ್ಪರವರ ಮಾತುಕತೆಯಿಂದಾಗಿ ಕ್ಷೇತ್ರದ ಜನರಲ್ಲಿ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಹಾಲಿ ಎಂಎಲ್ ಎ ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಸಿಕ್ಕಿದೆ.
ಕೋಲಾರದ ಫ್ರಂಟ್ ಲೈನ್ ನಾಯಕರಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಸುದರ್ಶನ್, ಶ್ರೀನಿವಾಸ್ ಗೌಡ ಸೇರಿದಂತೆ ಹಿರಿಯ ನಾಯಕರು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವುದು ಪಕ್ಷ ಸಂಘಟನೆ ಪ್ರಬಲವಾಗುತ್ತಿದೆ.

ಮುಸ್ಲಿಂ ಸಮುದಾಯ, ಕುರುಬರು, ತಿಗಳರು ಮತ್ತು ದಲಿತರು ಪ್ರಬಲವಾಗಿದ್ದು ಇವರೆಲ್ಲರ ಬೆಂಬಲ ಈ ಬಾರಿ ಸಿದ್ದರಾಮಯ್ಯ ಅವರಿಗಿದೆ.
ಒಕ್ಕಲಿಗರ ಸಮುದಾಯದಿಂದ ಸಿ.ಎಂ.ಆರ್ ಶ್ರೀನಾಥ್ ಅಭ್ಯರ್ಥಿಯಾಗಿದ್ದರು ಕೂಡಾ ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಒಕ್ಕಲಿಗರ ಸಮುದಾಯ ಬಹುಪಾಲು ಮತಗಳು ಸಿದ್ದರಾಮಯ್ಯ ಅವರ ಪರವಾಗುವ ಸಂಭವವಿದೆ.
ಅಚ್ಚರಿ ಎಂಬಂತೆ ಈ ಬಾರಿ ತಿಗಳ ಸಮುದಾಯ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಲು ಮುಂದಾಗಿದೆ. ಕೋಲಾರದಲ್ಲಿ ತಿಗಳ ಸಮುದಾಯ ಇಲ್ಲಿಯವರೆಗೂ ಒಂದೇ ಪಕ್ಷವನ್ನು ಸತತವಾಗಿ ಬೆಂಬಲಿಸಿಕೊಂಡು ಬಂದಿರಲಿಲ್ಲ. ಆ ಬಾರಿ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಕಡೆ ತಮ್ಮ ಒಲವು ಮೂಡಿಸಿಕೊಂಡಿದ್ದಾರೆ.







