ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. ಬೆಂಗಳೂರು ಕೊರೋನ ಹಾಟ್ ಸ್ಪಾಟ್ ಎಂದೂ ಗುರುತಿಸಿಕೊಂಡಿತು. ಕೂಡಲೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿತು. ಇದೀಗ ಜೂನ್ ತಿಂಗಳ ಎರಡನೇ ವಾರದಲ್ಲಿ ಬೆಂಗಳೂರು ಕೊರೋನ ಪ್ರಕರಣಗಳಲ್ಲಿ ಕುಸಿತ ದಾಖಲಿಸಿದೆ. ಇದೀಗ ರಾಜಧಾನಿಯಲ್ಲಿ ಜನರ ಓಡಾಟ ನಿಧಾನಕ್ಕೆ ಹೆಚ್ಚಾಗುತ್ತಿದೆ. ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಿಂದ ಜನರು ತಮ್ಮೂರಿಗೆ ಹೋಗಿದ್ದರು. ಕೇಸ್ ಕಡಿಮೆಯಾಗಿ ಅನ್ ಲಾಕ್ ಆಗುತ್ತಿದ್ದಂತೆ ಮತ್ತೆ ಮರು ವಲಸೆ ಶುರುವಾಗಿದೆ. ಇದರಿಂದ ಕೊರೋನ ಮತ್ತೆಲ್ಲಿ ಉಲ್ಭಣವಾಗುತ್ತೋ ಎಂಬ ಆತಂಕ ಶುರುವಾಗಿದೆ.
ಜಿಲ್ಲೆಗಳಿಂದ ಬರುವವರಿಗೆ ಕೊರೊನಾ ಟೆಸ್ಟ್ ಮಾಡಲು ಬಿಬಿಎಂಪಿ ಗಂಭೀರವಾಗಿ ಯೋಚಿಸುತ್ತಿದೆ.ಕಳೆದೊಂದೂವರೆ ತಿಂಗಳಿನಿಂದ ಕೊರೋನ ಎರಡನೇ ಅಲೆ ತನ್ನ ರುದ್ರನರ್ತನ ತೋರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಬೆಡ್ ಸಿಗದೆ, ಮೃತದೇಹ ಸುಡಲು ದಿನಗಟ್ಟಲೇ ಕಾಯಬೇಕಾದ ದುಸ್ಥಿತಿ ನೋಡಿದ್ದಾಗಿದೆ. ರಾಜ್ಯ ಸರ್ಕಾರ ಶವಗಳನ್ನು ಸುಡಲೆಂದೇ ನಾಲ್ಕು ಕಡೆಗಳಲ್ಲಿ ಶವ ಸಂಸ್ಕಾರಕ್ಕೂ ವ್ಯವಸ್ಥೆ ಮಾಡಿತ್ತು. ಕೊರೋನ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕುಸಿದ ಬೆನ್ನಲ್ಲಿ ರಾಜ್ಯ ಸರ್ಕಾರ ಈ ನಾಲ್ಕು ತಾತ್ಕಾಲಿಕ ಶವ ಸಂಸ್ಕಾರ ಕೇಂದ್ರಗಳನ್ನೂ ಶುಕ್ರವಾರ ಮುಚ್ಚಿದೆ. ಇದೀಗ ಬೆಂಗಳೂರಿನಲ್ಲಿ ಕೊರೋನ ಕೇಸ್ ಕಡಿಮೆಯಾಗಿ ಹತೋಟಿಗೆ ಬರುತ್ತಿದೆ. ಇಂಥ ಹೊತ್ತಿನಲ್ಲಿ ರಾಜಧಾನಿಯಿಂದ ತಮ್ಮೂರಿಗೆ ತೆರಳಿದ ಜನರು ಮತ್ತೆ ಮರುವಲಸೆ ಮಾಡುತ್ತಿದ್ದಾರೆ.

ಆದರೆ ರಾಜಧಾನಿಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಮಯದಲ್ಲಿ ಜನರ ಮರು ವಲಸೆಯಿಂದ ಪಾಸಿಟಿವ್ ಹೆಚ್ಚಳ ಭೀತಿ ಎದುರಾಗಿದೆ. ಇದರಿಂದಾಗಿ ಮರುವಲಸಿಗರಿಗೆ ಕೊರೋನ ಪರೀಕ್ಷಾ ಕಡ್ಡಾಯ ಮಾಡಲು ಬಿಬಿಎಂಪಿ ಚಿಂತಿಸುತ್ತಿದೆ. ಕೊರೋನ ನಿಯಂತ್ರಣಕ್ಕೆ ಹೊಸ ಕ್ರಮ ಅಗತ್ಯ ಎಂದು ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವ ಬಿಬಿಎಂಪಿ ಅನ್ಲಾಕ್ ಬಳಿಕ ಬರುವವರಿಗೆ ಕೊರೋನ ಟೆಸ್ಟ್ ಮಾಡಲು ಚಿಂತಿಸುತ್ತಿದೆ. ಕೊರೋನ ಎರಡನೆ ಅಲೆ ಲಾಕ್ ಡೌನ್ ಹಿನ್ನೆಲೆ ಬೆಂಗಳೂರಿನಿಂದ ತಮ್ಮೂರಿಗೆ ತೆರಳಿದ್ದ ಜನರು ಇದೀಗ ಜೂ.15ರಿಂದ ಲಾಕ್ ಡೌನ್ ಸಡಲಿಕೆ ವಿಷಯ ತಿಳಿದು ಕಳೆದೊಂದು ವಾರದಿಂದ ಖಾಸಗಿ ವಾಹನಗಳಲ್ಲಿ ದಿನನಿತ್ಯ ಸಾವಿರಾರು ಜನರು ವಾಪಾಸ್ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಬೆಳಿಗ್ಗೆ 10 ಘಂಟೆಗಳವರೆಗೆ ವಾಹನ ಸಂಚಾರಕ್ಕೆ ಯಾವುದೇ ತಡೆ ಇಲ್ಲದಿರುವುದರಿಂದ ಹೊರ ಜಿಲ್ಲೆಗಳಿಂದ ಬರುವವರು ಬೆಳಗಿನ ಜಾವ 6-7 ಘಂಟೆಗೆ ಖಾಸಗಿ ವಾಹನಗಳಲ್ಲಿ ಆಗಮಿಸಿ ಬಡಾವಣೆಗಳಿಗೆ ತೆರಳುತಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿದ್ದ ದುಡಿಯುವ ವರ್ಗವು ಇದೀಗ ರಾಜ್ಯ ಸರ್ಕಾರ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಖಾನೆ, ಗಾರ್ಮೆಂಟ್ಸ್ ತೆರೆಯಲು ಅನುವು ಮಾಡಿ ಕೊಟ್ಟಿರುವುದರಿಂದ ವಾಪಾಸ್ ಮರಳುತ್ತಿದೆ. ಏಕೆಂದರೆ ಇದು ಅವರ ಬದುಕಿನ ಪ್ರಶ್ನೆ.

ವಿವಿಧ ಜಿಲ್ಲೆಗಳಿಂದ ಬಂದವರಿಗೆ ಆರ್ ಟಿ ಪಿಎಸ್, ಆಂಟಿಜನ್ ಟೆಸ್ಟ್ ಮಾಡುವುದು ಒಳಿತು. ಬೆಂಗಳೂರಿಗೆ ಬರುತ್ತಿರುವ ಮರುವಲಸಿಗರಿಗೆ ಕೊರೊನಾ ಟೆಸ್ಟ್ ಮಾಡುವ ಯೋಚನೆ ಬಿಬಿಎಂಪಿ ಅಧಿಕಾರಿಗಳಿಗಿದೆ. ಸರ್ಕಾರಕ್ಕೆ ಈ ಬಗ್ಗೆ ಸಲಹೆ ನೀಡಿರುವ ಬಿಬಿಎಂಪಿ, ಕೊರೊನಾ ಕೇಸ್ ಹೆಚ್ಚಾಗದಂತೆ ಕಡಿಮೆ ಮಾಡಲು ಟೆಸ್ಟ್ ಮಾಡುವ ವಿಧಾನ ಸೂಕ್ತ ಎಂದು ಅಭಿಪ್ರಾಯಪಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 78-80 ಸಾವಿರ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುವುದರಿಂದ ಟೆಸ್ಟ್ ಹೆಚ್ಚಳ ಮಾಡಬೇಕು. ಕೊರೋನ ನಿಯಂತ್ರಣಕ್ಕೆ ಈ ಕ್ರಮಕ್ಕೆ ಮುಂದಾಗಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸರ್ಕಾರದ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ. ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸರ್ಕಾರಿ ಕೋಟಾದಡಿ ಗೊತ್ತುಪಡಿಸಲಾದ ಸ್ವಲ್ಪ ಹಾಸಿಗೆಗಳನ್ನು ಬಿಟ್ಟುಕೊಡಲು ಬಿಬಿಎಂಪಿ ನಿರ್ಧರಿಸಿದೆ. ಇದುವರೆಗೆ ಚಾಲ್ತಿಯಲ್ಲಿದ್ದ ನಿಯಮದ ಪ್ರಕಾರ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ 75ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ಮೀಸಲಿಡಬೇಕಿತ್ತು. ‘ಇನ್ನು ಸಾಮಾನ್ಯ ಹಾಸಿಗೆಗಳಲ್ಲಿ ಶೇ 20ರಷ್ಟನ್ನು ಮಾತ್ರ ಸರ್ಕಾರಿ ಕೋಟಾದಡಿ ಉಳಿಸಿಕೊಂಡು ಉಳಿದವನ್ನು ಆಸ್ಪತ್ರೆಯವರಿಗೆ ಬಿಟ್ಟುಕೊಡಲಿದ್ದೇವೆ. ತೀವ್ರ ನಿಗಾ ಘಟಕಗಳಲ್ಲೂ ಈಗ ಸಾಕಷ್ಟು ಹಾಸಿಗೆಗಳು ಲಭ್ಯ ಇವೆ. ಅವುಗಳೆಲ್ಲವೂ ಈಗ ನಮಗೆ ಅಗತ್ಯ ಇಲ್ಲ. ಅವುಗಳಲ್ಲೂ ಸ್ವಲ್ಪ ಪ್ರಮಾಣದ ಹಾಸಿಗೆಗಳನ್ನು ಆಸ್ಪತ್ರೆಯವರಿಗೆ ಮರಳಿಸಬಹುದು. ಯಾವೆಲ್ಲ ಹಾಸಿಗೆಗಳನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಗೌರವ ಗುಪ್ತ ಸುದ್ದಿಗಾರರಿಗೆ ತಿಳಿಸಿದರು.

ಕೊರೋನ ಕೇಸ್ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಿಂದ 17 ಲಕ್ಷಕ್ಕೂ ಹೆಚ್ಚು ವಲಸೆ ಹೋಗಿದ್ದರು ಎಂಬ ಮಾಹಿತಿಯಿದೆ. ಇದೀಗ ಎಲ್ಲರೂ ಜನರು ವಾಪಾಸ್ ಬರುತ್ತಿದ್ದಾರೆ. ವಾಸ್ತವವಾಗಿ ಬೇರೆ ರಾಜ್ಯಗಳಿಂದ ಬರುವವರಿಗೆ ಸಮರ್ಪಕವಾಗಿ ಕೊರೊನಾ ಟೆಸ್ಟ್ ಆಗುತ್ತಿಲ್ಲ. ಇನ್ನು ವಿವಿಧ ಜಿಲ್ಲೆಗಳಿಂದ ಬರುವವರಿಗೆಲ್ಲ ಟೆಸ್ಟ್ ಮಾಡುವುದು ಕಷ್ಟಸಾಧ್ಯ. ಸರ್ಕಾರ ಈ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು. ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ಆರೋಗ್ಯ ಕಾರ್ಯಕರ್ತರು ಅನೇಕ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುತಿದ್ದಾರೆ. ಅನೇಕ ಸರ್ಕಾರೇತರ ಸಂಸ್ಥೆಗಳೂ ಸೋಂಕನ್ನು ಓಡಿಸಲು ಪ್ರಯತ್ನ ನಡೆಸುತ್ತಿವೆ. ಮತ್ತೊಂದೆಡೆ ಲಸಿಕೆ ಅಭಿಯಾನವೂ ಜೋರಾಗಿ ನಡೆದಿದ್ದು ಕೊರೋನ ಮಹಾಮಾರಿ ಇನ್ನೆಂದೂ ಬಾರದಿರಲಿ ಎಂದು ಜನರು ಆಶಿಸುತಿದ್ದಾರೆ.