ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದ್ದು, ಪಕ್ಷದ ನಾಯಕರು ಹಾಗೂ ಮುಖಂಡರು ರಾಜ್ಯದ ಮೂಲೆ ಮೂಲೆಗೂ ತೆರಳಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಇಂದು ರಾಣೆಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ʻಜಯವಾಹಿನಿ ಎಲ್ಲೇ ಹೋದರೂ ಜನರಿಂದ ಅಭೂತಪೂರ್ವ ಜನಬೆಂಬಲ ಸಿಗ್ತಿದೆ. ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. 2023ರ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಬೇಕು. ಅರುಣ್ ಕುಮಾರ್ ಅವರನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡರು. ʻ2013-18 ರವರೆಗೆ ರಾಣೆಬೆನ್ನೂರು ನಗರದ ಅಭಿವೃದ್ಧಿ ಶೂನ್ಯವಾಗಿತ್ತು. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಈಗ ಎಲ್ಲಾ 35 ವಾರ್ಡ್ ಗಳಲ್ಲೂ 24/7 ಕುಡಿಯುವ ನೀರಿನ ವ್ಯವಸ್ಥೆ ಆಗಿದೆ. ಅದಕ್ಕೆ ಕಾರಣೀಭೂತರು ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಸರ್ಕಾರ. ಈ ಸಂಬಂಧ ನಾವು ಕೊಟ್ಟಿದ್ದ ವಚನವನ್ನು ನಾವು ಪಾಲಿಸಿದ್ದೇವೆ. ರಾಣೆಬನ್ನೂರು ಅಭಿವೃದ್ಧಿ ಗೆ 110 ಕೊಟಿ ರೂ. ಅನುದಾನ ಬಂದಿದೆ. ಹಿಂದೆ ಇಷ್ಟು ಅನುದಾನ ಇತಿಹಾಸದಲ್ಲಿ ಎಂದೂ ಹಣ ಬಂದಿರಲಿಲ್ಲ. ಇದು ಸಾಧ್ಯವಾಗಿದ್ದು ಡಬಲ್ ಎಂಜಿನ್ ಸರ್ಕಾರದಿಂದ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ʻಈ ಭಾಗದಲ್ಲಿ ನೇಕಾರ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ. ಅವರಿಗಾಗಿ ಜವಳಿ ಪಾರ್ಕ್ ಮಾಡುವುದಾಗಿ ಹೇಳಿದ್ದೆವು. ಈಗಾಗಲೇ ಜವಳಿ ಪಾರ್ಕ್ ಮಂಜೂರಾತಿ ಆಗಿ ಕೆಲಸ ಪ್ರಾರಂಭ ಆಗ್ತಿದೆ. ಟೆಂಡರ್ ಆಗಿದೆ, ಚುನಾವಣೆ ಮುಗಿದ ನಂತರ ಕಾಮಗಾರಿ ಆರಂಭವಾಗಲಿದೆ. ಸ್ಲಂಬೋರ್ಡ್‌ನಿಂದ ಬಡವರಿಗೆ 1,500 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಕೇವಲ ಸುಳ್ಳು ಭರವಸೆ ಕೊಡುವ ಪಕ್ಷ. ಅವರು ಅಧಿಕಾರದಲ್ಲಿದ್ದಾಗ ಆ ಭಾಗ್ಯ ಈ ಭಾಗ್ಯ ಅಂತ ಕೊಟ್ಟರು. ಆದರೆ ಯಾವ ಭಾಗ್ಯವೂ ಜನರನ್ನು ಮುಟ್ಟಲಿಲ್ಲ. ಕಾಂಗ್ರೆಸ್ ಅಂದರೆ ದೌರ್ಭಾಗ್ಯ. ಅದಕ್ಕೆ 2018 ರಲ್ಲಿ ಜನ ಅವರನ್ನು ಮನೆಗೆ ಕಳಿಸಿದ್ದರು.

ʻಕಾಂಗ್ರೆಸ್‌ನವರು ಈಗ 10 ಕೆಜಿ ಅಕ್ಕಿ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡುವ ತಂತ್ರ ಕಾಂಗ್ರೆಸ್‌ದು. ಮೋಸ ಮಾಡುವ ಕಾಂಗ್ರೆಸ್ ಈಗ ಮತ್ತೆ ಗ್ಯಾರಂಟಿ ಕಾರ್ಡ್ ಜೊತೆ ಬಂದಿದ್ದಾರೆ. ಅವರ ಮೇಲೆ ಜನರಿಗೆ ವಿಶ್ವಾಸ ಇಲ್ಲ. ಅದು ಬೋಗಸ್ ಕಾರ್ಡ್. ಚುನಾವಣೆವರೆಗೂ ಮಾತ್ರ ಗ್ಯಾರಂಟಿ. ಆಮೇಲೆ ಗಳಗಂಟಿ. ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬೇಡಿಕೆ ಇದ್ದರೂ ಕಾಂಗ್ರೆಸ್‌ನವರು ಮಾಡಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡಲು ಮುಂದಾದಾಗ ಜೇನುಗೂಡಿಗೆ ಕೈ ಹಾಕಬೇಡಿ ಅಂದರು. ನಾನು ಜೇನು ಕಡಿಸಿಕೊಂಡು ಜೇನು ತುಪ್ಪ ನೀಡಿದ್ದೇನೆ. ಆಂತರಿಕ ಮೀಸಲಾತಿ ಹೆಚ್ಚಳ ಮಾಡಿ ಎಲ್ಲ ಸಮುದಾಯಕ್ಕೆ ನ್ಯಾಯ ಕೊಡಿಸುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ʻಎಲ್ಲಾ ಸಮುದಾಯಗಳಿಗೂ ನಾವು ಸಾಮಾಜಿಕ ನ್ಯಾಯ ಕೊಡುವ ಪ್ರಯತ್ನ ಮಾಡಿದ್ದೇವೆ. ಅಧಿಕಾರವನ್ನು ದೀನ ದಲಿತರ ಪರವಾಗಿ ಬಳಕೆ ಮಾಡಿ ಅವರಿಗೆ ರಕ್ಷಣೆ ಕೊಟ್ಟು ಮೀಸಲಾತಿ ನೀಡದರೆ ಅದೇ ಸಾಮಾಜಿಕ ನ್ಯಾಯ. ನಿಜವಾದ ಸಾಮಾಜಿಕ ನ್ಯಾಯ ನೀಡ್ತಿರೋದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಕತೆ ರೈತ ವಿದ್ಯಾನಿಧಿ ಯೋಜನೆ ಮಾಡಿದ್ದೇವೆ. 5 ಲಕ್ಷ ಕಾರ್ಮಿಕರ ಮಕ್ಕಳು, 1.5 ಲಕ್ಷ ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಸಿಗುತ್ತಿದೆ. 1.25 ಲಕ್ಷ ನೇಕಾರರಿಗೆ ತಲಾ 5 ಸಾವಿರ ಸಹಾಯ ಧನ ಕೊಡುವ ನೇಕಾರ ಸನ್ಮಾನ ಯೋಜನೆ ಜಾರಿ ಮಾಡಿದ್ದೇವೆ. ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿವರೆಗೂ ಸಾಲ ಸಿಗುವಂತೆ ಮಾಡಿದ್ದೇವೆ. ವಿದ್ಯುತ್ ಖರೀದಿಯಲ್ಲೂ ಸಬ್ಸಿಡಿ ನೀಡುತ್ತಿದ್ದೇವೆ. ಇದರ ಜತೆ ನೇಕಾರ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲ ಕಸುಬುದಾರರಿಗೆ ಮಾಲಗಾರ್, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಗಳನ್ನು ಮಾಡಿದ್ದೇವೆ. ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆʼ ಎಂದು ಸಿಎಂ ಬೊಮ್ಮಾಯಿ ಹೇಳಿದರು. ʻಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯುವ ಶಕ್ತಿ ಯೋಜನೆ, 30 ಸಾವಿರ ಸ್ತ್ರೀ ಶಕ್ತಿ ಸಂಘಕ್ಕೆ ಅನುದಾನ ನೀಡಿ ಯೋಜನೆ ಜಾರಿಗೆ ತಂದು ಸ್ವಂತ ಉದ್ಯೋಗ ಮಾಡಿ ಮಾರುಕಟ್ಟೆ ಒದಗಿಸಲಾಗುತ್ತಿದೆ. ಇದೆಲ್ಲವನ್ನೂ ಮನೆಮನೆಗೆ ಮುಟ್ಟಿಸಿ ಜನರಿಂದ ಮತದಾನದ ಮುದ್ರೆ ಒತ್ತಿಸಿ ಮತ್ತೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ, ಜನಪರ ಹಾಗೂ ಜನಕಲ್ಯಾಣ ಬಿಜೆಪಿ ಸರ್ಕಾರ ರಚನೆ ಮೂಲಕ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ಆಶೀರ್ವಾದ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೇಳಿಕೊಂಡರು.
