ಸಂಗೀತ ನಿರ್ದೇಶಕ, ಗೀತೆರಚನೆಕಾರ ಹಂಸಲೇಖ ಅವರು ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಅಸ್ಪೃಶ್ಯತೆ ಮತ್ತು ಸಾಮಾಜಿಕ ತಾರತಮ್ಯದ ಕುರಿತು ನೀಡಿದ ಹೇಳಿಕೆಯೊಂದು ದೊಡ್ಡಮಟ್ಟದ ವಿವಾದ ಹುಟ್ಟುಹಾಕಿದೆ.
ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು, ‘ದಲಿತರ ಮನೆಗೆ ಬಲಿತವರು ಹೋಗುವುದು ಏನು ದೊಡ್ಡ ವಿಷಯ ಅಂತ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ವಾಸ್ತವ್ಯ ಮಾಡುವುದು, ಎಚ್ ಡಿ ಕುಮಾರಸ್ವಾಮಿ, ಆರ್ ಅಶೋಕ್, ಅಶ್ವಥನಾರಾಯಣ ಅಂಥಹ ನಗರವಾಸಿಗಳೆಲ್ಲಾ ದಲಿತರ ಮನೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವುದು ಏನು ದೊಡ್ಡ ವಿಷಯ. ಬಲಿತವರು ದಲಿತರ ಮನೆಗೆ ಹೋಗಿ, ಅವರನ್ನು ಕರೆದುಕೊಂಡು ಬಂದು ತಮ್ಮ ಮನೆಗಳಲ್ಲಿ ಅವರೊಂದಿಗೆ ಕೂತು ಊಟ ಮಾಡಿ, ಅವರು ಉಂಡ ತಟ್ಟೆಲೋಟವನ್ನು ತೊಳೆಯುವುದು ದೊಡ್ಡದು. ಅದಲ್ಲದೆ ಹೋದರೆ, ಇಂತಹದ್ದೆಲ್ಲಾ ಬರೀ ಬೂಟಾಟಿಕೆ, ನಾಟಕ’ ಎಂಬರ್ಥದ ಮಾತುಗಳನ್ನಾಡಿದ್ದರು.
ಆ ನಡುವೆ, ಸ್ವಾಮೀಜಿಗಳು ದಲಿತರ ಮನೆಗೆ ಹೋಗಬಹುದು. ಆದರೆ, ದಲಿತರು ಕೊಡುವ ಮಾಂಸಾಹಾರ ಸೇವಿಸಲು ಸಾಧ್ಯವೇ? ಎಂದೂ ಅವರು ಪ್ರಶ್ನಿಸಿದ್ದರು. ಮುಖ್ಯವಾಗಿ ಅಸ್ಪೃಶ್ಯತೆ, ಆಹಾರ ಶ್ರೇಷ್ಠತೆ, ಸಾಮಾಜಿಕ ಅಸಮಾನತೆಗಳನ್ನೇ ಪ್ರಚಾರದ ಸರಕು ಮಾಡಿಕೊಳ್ಳುವ ಮತ್ತು ತಮ್ಮ ಹೆಚ್ಚುಗಾರಿಕೆಯ, ಯಜಮಾನಿಕೆಯ ನಡವಳಿಕೆಯ ಮೂಲಕ ದಲಿತರು, ಶೋಷಿತರನ್ನು ಮತ್ತಷ್ಟು ಕುಗ್ಗಿಸುವ ರಾಜಕಾರಣದ ಕುರಿತು ಅವರು ಮಾತುಗಳು ಯೋಚನೆಗೆ ಹಚ್ಚಿದ್ದವು.
ಸಿನಿಮಾದಂತಹ ಜನಪ್ರಿಯ ಮಾಧ್ಯಮದ ವ್ಯಕ್ತಿಯಾಗಿ, ಇಂದಿಗೂ ರಿಯಾಲಿಟಿ ಶೋದಂತಹ ಪಕ್ಕ ಮೇಲ್ವರ್ಗದ, ಬೂರ್ಜ್ವಾ ಮನಸ್ಥಿತಿಯ ಮಾಧ್ಯಮದ ಭಾಗವಾಗಿ ಹಂಸಲೇಖ ಅವರು ಈ ಸಮಾಜದ ಅತ್ಯಂತ ಹೀನಾಯ ವಾಸ್ತವದ ಬಗ್ಗೆ ಎಲ್ಲರು ಎದೆಮುಟ್ಟಿ ನೋಡಿಕೊಳ್ಳವಂಥ ಮಾತುಗಳನ್ನಾಡಿದ್ದು ನಿಜಕ್ಕೂ ದೊಡ್ಡತನ. ಆದರೆ, ಅವರ ಅಂತಹ ಕಣ್ತೆರೆಸುವ ಮಾತುಗಳನ್ನು ಆತ್ಮಾವಲೋಕನಕ್ಕೆ ಬಳಸಿಕೊಳ್ಳುವ ಬದಲು ದಲಿತರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಂಡ ಭವ್ಯ ಇತಿಹಾಸ ಮತ್ತು ಕಡು ವಾಸ್ತವದ ಸಮುದಾಯಗಳು ಅವರ ವಿರುದ್ಧವೇ ತಿರುಗಿಬಿದ್ದವು. ಅವರನ್ನು ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡಿದವು. ಸಾಮಾಜಿಕ ಯಜಮಾನಿಕ ಮತ್ತು ನಾಚಿಕೆಗೇಡಿನ ಜಾತಿಶ್ರೇಷ್ಠತೆಯ ಅಂತಹ ಮನಸ್ಥಿತಿಗೆ ಕನ್ನಡದ ಕೆಲವು ಮಾಧ್ಯಮಗಳೂ ದನಿಗೂಡಿಸಿದವು.
ಪರಿಣಾಮವಾಗಿ ತಮ್ಮ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಹಂಸಲೇಖ ಅವರು ಆ ಮಾತುಗಳನ್ನು ಆಡಿದ ಬಗ್ಗೆ ಕ್ಷಮೆ ಯಾಚಿಸಿದರು.
ಅಂದರೆ, ಮೂರು ದಶಕದ ಕಾಲ ಕನ್ನಡಿಗರಿಗೆ ಅತ್ಯುತ್ತಮ ಮನರಂಜನೆಯ, ತಿಳಿವಿನ ಹಾಡುಗಳನ್ನು ಕೊಟ್ಟ, ಮೆಚ್ಚಿನ ಸಂಗೀತ ಕೊಟ್ಟ ಮತ್ತು ತಮ್ಮ ಅಪಾರ ಸಾಹಿತ್ಯ ಜ್ಞಾನ ಮತ್ತು ಭಾಷಾ ಪ್ರೌಢಿಮೆಗಾಗಿ ಜನಮೆಚ್ಚುಗೆಗೆ ಪಾತ್ರವಾದ ಹಿರಿಯ ಸಂಗೀತಗಾರ, ಸಾಹಿತಿ ಹಂಸಲೇಖರಂಥವರನ್ನೇ ಸತ್ಯ ಹೇಳದಂತೆ ಬಾಯಿಮುಚ್ಚಿಸುವ ಮಟ್ಟಿಗೆ ಸಮಾಜದ ಕೆಲವು ಪಟ್ಟಭದ್ರ ಶಕ್ತಿಗಳು ದಬ್ಬಾಳಿಕೆಯ, ದೌರ್ಜನ್ಯದ ವರಸೆ ತೋರಿದವು ಮತ್ತು ಶತಮಾನಗಳ ತಮ್ಮ ಸರ್ವಾಧಿಕಾರಿ ಹಿಡಿತ ಸಮಾಜದ ಮೇಲೆ ಮತ್ತೆ ಸ್ಥಾಪಿತವಾಗಿದೆ ಎಂಬುದನ್ನು ಈ ಘಟನೆಯ ಮೂಲಕ ಸಾಬೀತು ಮಾಡಿದವು.
ಹಾಗೆ ನೋಡಿದರೆ, ಹಂಸಲೇಖಾ ಅವರು ಎತ್ತಿದ ಅಸ್ಪೃಶ್ಯತೆಯ ಪ್ರಶ್ನೆಯ ಕುರಿತು ಮತ್ತು ದಲಿತ ಸಮುದಾಯಗಳ ವಿರುದ್ಧ ತಾವು ಪಾಲಿಸಿಕೊಂಡುಬಂದಿರುವ ಆ ಅಸ್ಪೃಶ್ಯತೆಯ ಬಗ್ಗೆ ಸವರ್ಣೀಯರು ಅಥವಾ ಬಲಿತ ಸಮುದಾಯದ ಮಠಾಧೀಶರು, ರಾಜಕಾರಣಿಗಳು ನಾಚಿ ತಲೆತಗ್ಗಿಸಬೇಕಿತ್ತು. ಆದರೆ, ಇಂದು ಅದರ ಬದಲಾಗಿ ದಲಿತರನ್ನು ಅಮಾನವೀಯವಾಗಿ ಕಾಣುವ ವ್ಯವಸ್ಥೆಯ ಲೋಪವನ್ನೇ ಬಳಸಿಕೊಂಡು ಅವರ ಮನೆಗಳಿಗೆ, ಕೇರಿಗಳಿಗೆ ಹೋಗಿ ದೊಡ್ಡ ಸುಧಾರಣೆ ಮಾಡಿದಂತೆ ಬೀಗುವ, ಪ್ರಚಾರ ಗಿಟ್ಟಿಸಿಕೊಳ್ಳುವ ವರಸೆಗಳು ಹೆಚ್ಚಾಗಿವೆ. ಅದರಲ್ಲೂ ರಾಜಕಾರಣಿಗಳ ನಡುವೆ ಅದೊಂದು ಫ್ಯಾಷನ್ ಆಗಿಹೋಗಿದೆ.
ಆದರೆ, ಹಂಸಲೇಖರ ಹೇಳಿಕೆಯ ನಿಜವಾದ ಉದ್ದೇಶ ಅಸ್ಪೃಶ್ಯತೆ ಮತ್ತು ಆಹಾರ ಶ್ರೇಷ್ಠತೆಯಾಗಿದ್ದರೂ, ಆ ವಿಷಯವನ್ನೇ ಮರೆಮಾಚಿ ಸ್ವಾಮೀಜಿಯೊಬ್ಬರ ಹೆಸರನ್ನು ಅವರು ಪ್ರಸ್ತಾಪಿಸಿದ್ದನ್ನೇ ನೆಪ ಮಾಡಿಕೊಂಡು ಅವರ ಬಾಯಿ ಮುಚ್ಚಿಸುವ ಯತ್ನ ಮಾಡಲಾಯಿತು. ಅದರಲ್ಲೂ ಮಾಂಸಾಹಾರವನ್ನು ಪ್ರಸ್ತಾಪಿಸಿ ಸ್ವಾಮೀಜಿಯ ಹೆಸರು ಬಳಸಿದ್ದನ್ನು ಮುಖ್ಯವಾಗಿ ಇಟ್ಟುಕೊಂಡು ದಾಳಿ ನಡೆಸಲಾಯಿತು.
ಇಂತಹ ವರಸೆಯೇ ಆಹಾರದ ವಿಷಯದಲ್ಲಿ ಮನುವಾದಿಗಳು ಹೊಂದಿರುವ ಶ್ರೇಷ್ಠತೆಯ ವ್ಯಸನ ಮತ್ತು ಆಹಾರವನ್ನು ಒಂದು ಆಯ್ಕೆ ಮತ್ತು ಸಂಸ್ಕೃತಿ ಎಂದು ನೋಡದೆ ಅದಕ್ಕೆ ಧರ್ಮವನ್ನು ಆರೋಪಿಸಿ, ಜಾತಿಯ ವಿಷಯದಲ್ಲಿ ಮಾಡಿದಂತೆಯೇ ಮೇಲು ಕೀಳು ಎಂಬುದನ್ನು ಉಣ್ಣುವ ಅನ್ನಕ್ಕೂ ಅನ್ವಯ ಮಾಡಿದ ಹೇಯ ಮನಸ್ಥಿತಿಗೆ ಸಾಕ್ಷಿ. ಆಹಾರ ಎಂಬುದಕ್ಕೆ ಮೇಲು ಕೀಳು, ಶ್ರೇಷ್ಠ, ಕನಿಷ್ಠ ಎಂಬುದನ್ನು ಆರೋಪಿಸುವ ಜಗತ್ತಿನ ಯಾವುದಾದರೂ ಸಾಮಾಜಿಕ ವ್ಯವಸ್ಥೆ ಇದ್ದರೆ ಬಹುಶಃ ಅದು ನಮ್ಮಲ್ಲಿ ಮಾತ್ರ ಎನಿಸುತ್ತದೆ. ವೃತ್ತಿಗೂ, ಜಾತಿಗೂ ಸಂಬಂಧಬೆಸೆದು ಶೇ.95-96ರಷ್ಟು ಜನಸಂಖ್ಯೆಯನ್ನು ಸಾಮಾಜಿಕ ಶ್ರೇಣಿಯ ತಳಕ್ಕೆ ತಳ್ಳಿದ ಮನುವಾದಿ ಮನಸ್ಥಿತಿಯೇ ಆಹಾರಕ್ಕೂ ಮತ್ತು ಜಾತಿಗೂ ಸಂಬಂಧ ಬೆಸೆದು, ಉಣ್ಣುವ ಅನ್ನಕ್ಕೂ ಮೈಲಿಗೆಯ ಅಮಾನುಷತನ ಮೆತ್ತಿದೆ.
ವಾಸ್ತವವಾಗಿ ಶತಮಾನಗಳಿಂದ ಆಹಾರದ ವಿಷಯದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಹೇರಿಕೆ ಮುಂದುವರಿದುಕೊಂಡು ಬಂದಿದ್ದರೂ, ಭಾರತದಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ಇದು ಮೇಲ್ಜಾತಿಗಳ ದಬ್ಬಾಳಿಕೆಯ, ಅಟ್ಟಹಾಸದ ಸಂಗತಿಯಾಗಿ ಬೆಳೆದಿದೆ ಎಂಬುದಕ್ಕೆ ಗುಜರಾತಿನ ಉನಾದಲ್ಲಿ 2016ರಲ್ಲಿ ನಡೆದ ಘಟನೆಯೇ ಸಾಕ್ಷಿ. ಸತ್ತ ಜಾನುವಾರು ಚರ್ಮ ಸುಲಿದರೆನ್ನುವ ಕಾರಣಕ್ಕೆ ದಲಿತರ ಮೇಲೆ ನಡೆದ ಭೀಕರ ಸಾಮೂಹಿಕ ಹಲ್ಲೆ(ಮಾಬ್ ಲಿಂಚಿಂಗ್)ಯ ಆ ಘಟನೆಯಿಂದ ಹಿಡಿದು, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತಿತರ ಮನುವಾದಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ನಡೆದಿರುವ ನೂರಾರು ಪ್ರಕರಣಗಳು ಸಾರಿಹೇಳುವ ಸಂಗತಿ ಒಂದೇ; ಉಣ್ಣುವ ಅನ್ನಕ್ಕೂ ದೊಣ್ಣೆ ನಾಯಕನ ಅಪ್ಪಣೆ ಕೇಳುವ ಪರಿಸ್ತಿತಿ ಈಗಿನ ನವಭಾರತದಲ್ಲಿದೆ.
ಮಾಂಸಹಾರ ಕನಿಷ್ಟ, ಸಸ್ಯಾಹಾರ ಶ್ರೇಷ್ಠ ಎಂಬ ಪುರೋಹಿತಶಾಹಿ ಮನಸ್ಥಿತಿಯ ದೇಶದಲ್ಲಿ ಎಷ್ಟು ಸರ್ವವ್ಯಾಪಿಯಾಗಿದೆ ಮತ್ತು ಹೇಗೆ ಮಾಂಸಹಾರಿಗಳಾದ ಕೆಲವು ಸಮುದಾಯಗಳು ಕೂಡ ಅಂತಹ ಮನಸ್ಥಿತಿಯನ್ನೇ ಶ್ರೇಷ್ಠತೆ ಎಂದು ಒಪ್ಪಿಕೊಂಡಿವೆ ಎಂಬುದಕ್ಕೆ ಶ್ರಾವಣ ಮಾಸದಲ್ಲಿ ಮಾಂಸಹಾರ ತ್ಯಜಿಸಬೇಕು ಎಂಬ ವ್ರತಾಚರಣೆಯೇ ನಿದರ್ಶನ. ಅಂತಹ ಶ್ರೇಷ್ಠತೆಯ ಮೂಲದಿಂದಲೇ ಹುಟ್ಟಿದ್ದು ತಮ್ಮ ಆ ಮನಸ್ಥಿತಿಯನ್ನು ಒಪ್ಪದ, ಅಪ್ಪದ ಮತ್ತು ಆ ಮೂಲಕ ತಮ್ಮ ಮನುವಾದಿ ಸಂಸ್ಕೃತಿಗೆ ಅಡಿಯಾಳಾಗದ ದಲಿತರು ಮತ್ತು ಶೂದ್ರರ ಮೇಲೆ ಗೋವಿನ ಪಾವಿತ್ರ್ಯತೆ, ಆಹಾರದ ಪಾವಿತ್ರ್ಯತೆಯ ಹೆಸರಿನಲ್ಲಿ ದಾಳಿ ನಡೆಸುವುದು, ಭಿನ್ನ ಆಹಾರ, ಭಿನ್ನ ನಂಬಿಕೆಗಳನ್ನು ಹಣಿಯುವುದು ಈಗ ದೇಶಭಕ್ತಿಯ ಆಯಾಮವೂ ಆಗಿಹೋಗಿದೆ.
ಹಾಗಾಗಿ ಹಂಸಲೇಖಾ ಅವರ ಮೇಲಿನ ದಾಳಿ ಮತ್ತು ಟ್ರೋಲ್ ಎಂಬುದು ಕೇವಲ ಅಸಹನೆಯ, ಅಸಮಾಧಾನದ ಪ್ರತಿಕ್ರಿಯೆ ಅಲ್ಲ. ಬದಲಾಗಿ ಅದೊಂದು ಆಳವಾದ ದಬ್ಬಾಳಿಕೆಯ, ಹೇರಿಕೆಯ ದಾಷ್ಟ್ರ್ಯದ ನಡೆ. ಮತ್ತು ಅದೊಂದು ಬೌದ್ಧಿಕ ಮಾಬ್ ಲಿಂಚಿಂಗ್(ಇಂಟೆಲೆಕ್ಚುವಲ್ ಮಾಬ್ ಲಿಂಚಿಂಗ್). ಉನಾದಲ್ಲಿ ಭೌತಿಕವಾಗಿ ದಲಿತರ ಮೇಲೆ ಹಲ್ಲೆ ನಡೆಸಿ, ಅವರನ್ನು ಬೆತ್ತಲುಗೊಳಿಸಿ ಥಳಿಸಲಾಯಿತು. ಹಂಸಲೇಖಾ ಅವರ ವಿಷಯದಲ್ಲಿ ಬೌದ್ಛಿಕವಾಗಿ ಯಥಾ ಪ್ರಕಾರ ಅದನ್ನೇ ಮಾಡಲಾಗಿದೆ ಅಷ್ಟೇ!
—