ಪೇಗಾಸಸ್ ಬೇಹುಗಾರಿಕೆಯ ಭೂತ ಮತ್ತೆ ಎದ್ದು ಕೂತಿದೆ. ತನ್ನದೇ ಪ್ರಜೆಗಳ ವಿರುದ್ದ ಬೇಹುಗಾರಿಕೆ ನಡೆಸಲು ಪ್ರಧಾನಿ ಮೋದಿಯವರ ಸರ್ಕಾರ ಇಸ್ರೇಲಿನಿಂದ 2017ರಲ್ಲೇ ಪೇಗಾಸಸ್ ತಂತ್ರಾಂಶವನ್ನು ಖರೀದಿಸಿತ್ತು ಎಂಬ ಆಘಾತಕಾರಿ ಸಂಗತಿಯನ್ನು ನ್ಯೂಯಾರ್ಕ್ ಟೈಮ್ಸ್ ಬಯಲುಮಾಡಿದೆ!
ಕಳೆದ ವರ್ಷ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ನಡೆಸಿದ ಸರಣಿ ತನಿಖಾ ವರದಿಗಳಲ್ಲಿ ಮೊಟ್ಟಮೊದಲ ಬಾರಿಗೆ ಪೇಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿ ದೇಶದ ಪತ್ರಕರ್ತರು, ಪ್ರತಿಪಕ್ಷ ನಾಯಕರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಸೇನಾ ಮುಖ್ಯಸ್ಥರು, ಸಾಮಾಜಿಕ ಹೋರಾಟಗಾರರು ಸೇರಿದಂತೆ 300ಕ್ಕೂ ಹೆಚ್ಚು ಮಂದಿಯ ಮೊಬೈಲ್ ಹ್ಯಾಕ್ ಮಾಡಿ ಅವರ ಚಲನವಲನದ ಮೇಲೆ ಕಣ್ಣಿಡಲಾಗಿತ್ತು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.
ಪ್ರಜಾಪ್ರಭುತ್ವ ಸರ್ಕಾರವೊಂದು ತನ್ನದೇ ಪ್ರಜೆಗಳ ವಿರುದ್ದ ರಹಸ್ಯ ತಂತ್ರಾಂಶಗಳನ್ನು ಬಳಸಿ ಬೇಹುಗಾರಿಕೆ ನಡೆಸಿದ ಗಂಭೀರ ಸಂಗತಿ ಮಾವನ ಹಕ್ಕು ಉಲ್ಲಂಘನೆ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಮೇಲು ಕೃತ್ಯ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.ಆದರೆ, ಮೋದಿಯವರ ಸರ್ಕಾರ ಸಂಸತ್ತಿನ ಒಳಹೊರಗೆ ತಾನು ಅಂತಹ ಯಾವುದೇ ಬೇಹುಗಾರಿಕೆಯನ್ನು ನಡೆಸಿಲ್ಲ. ದೇಶದ ಭದ್ರತೆಯ ದೃಷ್ಟಿಯಿಂದ ಕಾನೂನು ಅಡಿಯಲ್ಲಿ ಕೆಲವರ ಮೇಲೆ ಕಣ್ಣಿಡಲಾಗುತ್ತದೆ. ಅದನ್ನು ಸಂಬಂಧಿಸಿದ ತನಿಖಾ ಸಂಸ್ಥೆಗಳು ಕಾನೂನು ರೀತಿಯಲ್ಲೇ ಮಾಡುತ್ತವೆ ಎಂದು ಹೇಳಿತ್ತು. ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸೆಕ್ಯುರಿಟಿ ಲ್ಯಾಬ್ ಮತ್ತು ಅಮೆರಿಕದ ಸಿಟಿಜನ್ ಲ್ಯಾಬ್ ಆಫ್ ಟೊರ್ಯಾಂಟೊ ವಿಧಿ ವಿಜ್ಞಾನ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಭಾರತ ಸರ್ಕಾರ ಪೇಗಾಸಸ್ ಸ್ಪೈವೇರ್ ಬಳಸಿ ಮೊಬೈಲ್ ಮೂಲಕ ಗೂಢಚರ್ಯೆ ನಡೆಸಿರುವುದು ಖಚಿತವಾಗಿದ್ದರೂ, ಸರ್ಕಾರ ಮಾತ್ರ ಇಡೀ ಪ್ರಕರಣವನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಪೇಗಾಸಸ್ ತಂತ್ರಾಂಶದ ಮಾರಾಟಗಾರ ಇಸ್ರೇಲಿ ಸಂಸ್ಥೆ ಎಎಸ್ ಒ ಜೊತೆ ತಾನೂ ಯಾವುದೇ ರೀತಿಯ ವ್ಯವಹಾರ ಮಾಡಿಯೇ ಇಲ್ಲ ಎಂದು ಸರ್ಕಾರ ಹೇಳಿತ್ತು.
ನಂತರ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದ ಈ ಪೇಗಾಸಸ್ ಬೇಹುಗಾರಿಕೆ ವಿಷಯದಲ್ಲಿ, ಮೋದಿಯವರ ಸರ್ಕಾರ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಕೂಡ ನಿರ್ದಿಷ್ಟವಾಗಿ ಪೇಗಾಸಸ್ ಬಳಸಿ ಬೇಹುಗಾರಿಕೆ ಮಾಡಿದ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ ದೇಶದ ಭದ್ರತೆ ಮತ್ತು ಸಮಗ್ರತೆಯ ವಿಷಯ ಪ್ರಸ್ತಾಪಿಸಿ ನುಣುಚಿಕೊಂಡಿತ್ತು. ಆ ಬಳಿಕ ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ರವೀಂದ್ರನ್ ನೇತೃತ್ವದ ತನಿಖಾ ಸಮಿತಿ ನೇಮಿಸಿತ್ತು. ಸದ್ಯ ಸಮಿತಿಯ ತನಿಖೆ ಸಾರ್ವಜನಿಕ ವಿಚಾರಣೆಯ ಹಂತದಲ್ಲಿದೆ.
ಈ ನಡುವೆ ನ್ಯೂಯಾರ್ಕ್ ಟೈಮ್ಸ್ ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿರುವ ಸಂಗತಿಗಳು ಪ್ರಧಾನಿ ಮೋದಿಯವರ ಸರ್ಕಾರ ಹೇಗೆ ದೇಶದ ಸಂಸತ್ ಮತ್ತು ಸುಪ್ರೀಂಕೋರ್ಟಿಗೆ ಸುಳ್ಳು ಹೇಳಿದೆ ಮತ್ತು ದೇಶದ ಜನರನ್ನು ದಿಕ್ಕುತಪ್ಪಿಸಿದೆ ಎಂಬುದನ್ನು ಆಧಾರಸಹಿತವಾಗಿ ಬಹಿರಂಗ ಮಾಡಿದೆ. ಆ ವರದಿಯ ಪ್ರಕಾರ, 2017ರಲ್ಲಿ ಮೋದಿ ಸರ್ಕಾರ ಇಸ್ರೇಲ್ ನೊಂದಿಗೆ ಮಾಡಿಕೊಂಡಿರುವ 2 ಬಿಲಿಯನ್(15 ಸಾವಿರ ಕೋಟಿ ರೂ.) ರಕ್ಷಣಾ ಖರೀದಿ ಒಪ್ಪಂದದ ಅತ್ಯಂತ ಪ್ರಮುಖ ಅಂಶವೇ ಪೇಗಾಸಸ್ ಬೇಹುಗಾರಿಕಾ ತಂತ್ರಾಂಶ ಹಸ್ತಾಂತರ. ಪೇಗಾಸಸ್ ಜೊತೆಗೆ ಅತ್ಯಾಧುನಿಕ ಕ್ಷಿಪಣ ತಂತ್ರಜ್ಞಾನ ಹಸ್ತಾಂತರವೂ ಆ ಒಪ್ಪಂದದ ಭಾಗವಾಗಿತ್ತು. 2017ರಲ್ಲಿ ಪ್ರಧಾನಿ ಮೋದಿಯವರ ಇಸ್ರೇಲಿಗೆ ಭೇಟಿ ನೀಡಿದ ವೇಳೆ ಖುದ್ದು ಎನ್ ಎಸ್ ಒ ಜೊತೆ ಈ ಖರೀದಿ ಮಾತುಕತೆ ಅಂತಿಮಗೊಳಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.

ಆ ವರದಿ ಬಹಿರಂಗವಾಗುತ್ತಲೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಖುದ್ದು ಪ್ರಧಾನಿ ಮೋದಿಯವರೇ ಇದರ ಹೊಣೆಗಾರಿಕೆ ಹೊರಬೇಕು. ತಾವೇ ಸ್ವತಃ ಪೇಗಾಸಸ್ ಖರೀದಿ ವ್ಯವಹಾರ ಮಾಡಿದ್ದರೂ ದೇಶದ ಸಂಸತ್ ಮತ್ತು ಸುಪ್ರೀಂಕೋರ್ಟಿನ ಮುದ್ದೆ ವಾಸ್ತವಾಂಶವನ್ನು ಮರೆಮಾಚಿದ್ದಾರೆ. ದೇಶದ ಜನತೆಯನ್ನು ದಿಕ್ಕುತಪ್ಪಿಸಿದ್ದಾರೆ. ಇದು ‘ದೇಶದ್ರೋಹ’ ಎಂದು ಕಿಡಿಕಾರಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಕುರಿತು ”ದೇಶದ ಮುಂಚೂಣಿ ಪ್ರಜಾಸತ್ತಾತ್ಮಕ ಸಂಸ್ಥೆಗಳು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಪ್ರತಿಪಕ್ಷ ನಾಯಕರು, ಸೇನಾ ಪಡೆ, ನ್ಯಾಯಾಂಗವನ್ನು ಗುರಿಯಾಗಿಟ್ಟುಕೊಂಡು ಫೋನ್ ಟ್ಯಾಪ್ ಮಾಡಿ ಬೇಹುಗಾರಿಕೆ ನಡೆಸಲು ಮೋದಿ ಸರ್ಕಾರ ಪೇಗಾಸಸ್ ಖರೀದಿಸಿದೆ. ಇದು ದೇಶದ್ರೋಹ ಕೃತ್ಯ. ಮೋದಿ ಸರ್ಕಾರ ದೇಶದ್ರೋಹ ಎಸಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, “ಇಸ್ರೇಲಿ ಬೇಹುಗಾರಿಕಾ ತಂತ್ರಾಶ ಪೇಗಾಸಸ್ ಬಳಸಿ ದೇಶದ ಪ್ರಜೆಗಳ ಮೇಲೆ ಬೇಹುಗಾರಿಕೆ ನಡೆಸಿದ ಹಗರಣದ ಸೂತ್ರಧಾರ ಪ್ರಧಾನಿ ಮೋದಿಯವರೇ ಆಗಿದ್ದಾರೆ ಎಂಬುದು ಇದೀಗ ಬಯಲಾಗಿದೆ. ಕಾಂಗ್ರೆಸ್ ಹಿಂದಿನಿಂದಲೂ ಹೇಳುತ್ತಿದ್ದ ಸಂಗತಿ ಸತ್ಯವೆಂದು ಸಾಬೀತಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಹಾಗೇ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, “ಮೋದಿಯವರ ಸರ್ಕಾರ ದೇಶದ ಶತ್ರುವಿನಂತೆ ಯಾಕೆ ವರ್ತಿಸುತ್ತಿದೆ ಮತ್ತು ದೇಶದ ಜನತೆಯ ವಿರುದ್ಧವೇ ಪೇಗಾಸಸ್ ನಂತಹ ಬೇಹುಗಾರಿಕಾ ತಂತ್ರಾಂಶ ಬಳಕೆಯ ಮೂಲಕ ಸಮರ ಸಾರಿದೆ? ಪೇಗಾಸಸ್ ನಂತಹ ಅಕ್ರಮ ಬೇಹುಗಾರಿಕೆ ದೇಶದ್ರೋಹಕ್ಕೆ ಸಮ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನ್ಯಾಯಕ್ಕಾಗಿನ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.
ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪೇಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ರಕ್ಷಣಾ ಉದ್ದೇಶಕ್ಕಾಗಿ ಅಲ್ಲ; ಪ್ರತಿಪಕ್ಷಗಳು ಮತ್ತು ಪತ್ರಕರ್ತರ ಮೇಲೆ ಕಣ್ಣಿಡಲು ಬಳಸಲಾಗಿದೆ. ಬಿಜೆಪಿ ಇರುವಲ್ಲಿ ಮಾತ್ರ ಇಂತಹದ್ದೆಲ್ಲಾ ನಡೆಯಲು ಸಾಧ್ಯ. ಅವರು ಇಡೀ ದೇಶವನ್ನೇ ಬಿಗ್ ಬಾಸ್ ಶೋ ಮಾಡಿಬಿಟ್ಟಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿ, ಈ ಬೇಹುಗಾರಿಕಾ ಸೈಬರ್ ಅಸ್ತ್ರವನ್ನು ಯಾಕೆ ಖರೀದಿಸಲಾಗಿದೆ ಎಂಬುದನ್ನು ಮೋದಿ ಸರ್ಕಾರ ದೇಶದ ಜನತೆಗೆ ತಿಳಿಸಬೇಕು ಮತ್ತು ದೇಶದ ಜನತೆಯ ವಿರುದ್ಧವೇ ಅದರ ಬಳಕೆಗೆ ಯಾರು ಅನುಮತಿ ನೀಡಿದ್ದರು? ಬೇಹುಗಾರಿಕೆ ನಡೆಸಬೇಕಾದ ವ್ಯಕ್ತಿಗಳನ್ನು ಯಾವ ಆಧಾರದ ಮೇಲೆ ಆಯ್ಕೆಮಾಡಲಾಗಿತ್ತು? ಮತ್ತು ಆ ಬೇಹುಗಾರಿಕೆಯ ವರದಿಗಳನ್ನ ಯಾರಿಗೆ ಸಲ್ಲಿಸಲಾಗಿತ್ತು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಕೇವಲ ಪ್ರತಿಪಕ್ಷಗಳು ಮಾತ್ರವಲ್ಲದೆ, ಸ್ವತಃ ಆಡಳಿತರೂಢ ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೂಡ ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿರುವ ಪೇಗಾಸಸ್ ಹಗರಣದ ವಾಸ್ತವಾಂಶಗಳ ಕುರಿತು ಟ್ವೀಟ್ ಮಾಡಿದ್ದಾರೆ.
“ದೇಶದ ತೆರಿಗೆದಾರರ 300 ಕೋಟಿ ರೂಪಾಯಿಗಳನ್ನು ಬಳಸಿ ಇಸ್ರೇಲಿ ಎನ್ ಎಸ್ ಒ ಕಂಪನಿಯ ಪೇಗಾಸಸ್ ಬೇಹುಗಾರಿಕಾ ಸ್ಪೈವೇರ್ ಖರೀದಿ ಮಾಡಿರುವುದಾಗಿ ಹೇಳಲಾಗಿರುವ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಮೋದಿಯವರ ಸರ್ಕಾರ ಅಲ್ಲಗಳೆಯಬೇಕು. ಇಲ್ಲವೇ ನಮ್ಮ ಸರ್ಕಾರ ಸುಪ್ರೀಂಕೋರ್ಟ್ ಮತ್ತು ಸಂಸತ್ತನ್ನು ಈ ವಿಷಯದಲ್ಲಿ ಹಾದಿತಪ್ಪಿಸಿದೆ ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಇದು ಮತ್ತೊಂದು ವಾಟರ್ ಗೇಟ್ ಹಗರಣವೆ?” ಎಂದು ಸ್ವಾಮಿ ಮೋದಿ ಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ!
ಒಟ್ಟಾರೆ, ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ, ಚುನಾವಣಾ ಆಯೋಗದ ಆಯುಕ್ತರು, ಸಿಬಿಐ ತನಿಖಾ ಸಂಸ್ಥೆಯ ನಿರ್ದೇಶಕರು, ಸಂಸದರು, ಅತ್ಯಂತ ವೃತ್ತಿ ಘನತೆಗೆ ಹೆಸರಾದ ಪತ್ರಕರ್ತರು ಮುಂತಾದ ವ್ಯವಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸಂವಿಧಾನಿಕ ಹೊಣೆಗಾರಿಕೆ ಹೊತ್ತವರ ವಿರುದ್ಧ ನಡೆದಿರುವ ಈ ಬೇಹುಗಾರಿಕೆ ಪ್ರಕರಣ ಇದೀಗ ನ್ಯೂಯಾರ್ಕ್ ಟೈಮ್ಸ್ ವರದಿಯ ಮೂಲಕ ಹೊಸ ತಿರುವು ಪಡೆದುಕೊಂಡಿದೆ.
ಒಂದು ಪಕ್ಷದ ವಿರುದ್ಧ ಅಭಿಪ್ರಾಯ ಹೊಂದಿರುವುದನ್ನು, ಒಂದು ರಾಜಕೀಯ ಸಿದ್ಧಾಂತದ ವಿರುದ್ಧ ಧೋರಣೆಯನ್ನು ದೇಶದ ವಿರುದ್ಧದ ಅಭಿಪ್ರಾಯ, ದೇಶದ ವಿರುದ್ಧದ ಧೋರಣೆ ಎಂಬಂತೆ ಬಿಂಬಿಸುವ ಬಿಜೆಪಿ, ಹಾಗೆ ತನ್ನ ಸಿದ್ದಾಂತ ಮತ್ತು ರಾಜಕಾರಣವನ್ನು ಒಪ್ಪದವರ ಮೇಲೆ ಗೂಢಚಾರಿಕೆ ನಡೆಸಲು ಈ ಪೇಗಾಸಸ್ ಬಳಸಿದೆ. ಆ ಮೂಲಕ ಒಂದು ಕಡೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಕಾನೂನು ಚೌಕಟ್ಟುಗಳನ್ನು ಗಾಳಿಗೆ ತೂರಿದೆ ಮತ್ತು ದೇಶದ ಸಾರ್ವಜನಿಕ ತೆರಿಗೆ ಹಣವನ್ನು ದೇಶದ ಪ್ರಜೆಗಳ ವಿರುದ್ಧದ ಕಾನೂನುಬಾಹಿರ ಬೇಹುಗಾರಿಕೆಗೆ ಬಳಸಿದೆ ಎಂಬ ಆರೋಪಗಳು ಗಂಭೀರ ಸಂಗತಿ. ಆ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಕಣ್ಗಾವಲಿನ ಸಮಿತಿಯ ವಿಚಾರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.