ಪೇಗಾಸಸ್ ಗೂಢಚಾರಿಕೆ ಮತ್ತು ಕೃಷಿ ಕಾಯ್ದೆ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ಇದೀಗ ಚರ್ಚೆಗೆ ಒಪ್ಪದ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಸೇರಿದಂತೆ 15ಕ್ಕೂ ಹೆಚ್ಚು ಪಕ್ಷಗಳು ಸೋಮವಾರ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ನಿರ್ಧರಿಸಿವೆ.
ಜುಲೈ 19ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈವರೆಗೆ ಪ್ರತಿಪಕ್ಷಗಳು ಪೇಗಾಸಸ್ ಮತ್ತು ಕೃಷಿ ಕಾಯ್ದೆಗಳ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು, ಕಲಾಪ ಬಹಿಷ್ಕಾರ, ಧರಣಿ ಮುಂದುವರಿಸಿವೆ. ಆದರೆ, ಆಡಳಿತ ಪಕ್ಷ ಬಿಜೆಪಿಯ ಸರ್ಕಾರ ಪ್ರತಿಪಕ್ಷಗಳ ಪಟ್ಟಿಗೆ ಮಣಿಯದೆ ಗದ್ದಲ ಮತ್ತು ಅವ್ಯವಸ್ಥೆಯ ನಡುವೆಯೇ ಉಭಯ ಸದನಗಳಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸಿದೆ. ಅಧಿವೇಶನ ಮುಕ್ತಾಯವಾಗಲು ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ಈ ಹಂತದಲ್ಲಿ ಮತ್ತೊಮ್ಮೆ ಸೋಮವಾರ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎನ್ ಸಿಪಿ, ಶಿವಸೇನೆ, ಎಸ್ಪಿ, ಸಿಪಿಎಂ, ಆರ್ ಜೆಡಿ, ಎಎಪಿ, ಸಿಪಿಐ, ಎನ್ ಸಿ, ಐಯುಎಂಎಲ್, ಎಲ್ ಜೆಡಿ, ಆರ್ ಎಸ್ ಪಿ ಮತ್ತಿತರ ಪಕ್ಷಗಳ ನಾಯಕರು ಸಮಾನ ಕಾರ್ಯತಂತ್ರದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಲು ತೀರ್ಮಾನಿಸಿವೆ.
ಅಂದರೆ; ಕಳೆದ ಇಪ್ಪತ್ತು ದಿನಗಳಿಂದ ಪೇಗಾಸಸ್ ಗೂಢಚರ್ಯೆ ವಿಷಯ ಭಾರತದ ಅಧಿಕಾರದ ಶಕ್ತಿಕೇಂದ್ರ ಸಂಸತ್ತಿನ ಒಳಹೊರಗೆ ನಿರಂತರ ಚರ್ಚೆಯ ವಸ್ತವಾಗಿದೆ. ದೇಶದ ಪತ್ರಕರ್ತರು, ಸುಪ್ರೀಂಕೋರ್ಟ್ ನ್ಯಾಯಧೀಶರು, ಚುನಾವಣಾ ಆಯುಕ್ತರು, ಸಿಬಿಐ ನಿರ್ದೇಶಕರು, ವಕೀಲರು, ಉನ್ನತ ಅಧಿಕಾರಿಗಳು, ಸಂಸದರು ಸೇರಿದಂತೆ ಸುಮಾರು 300 ಮಂದಿಯ ವಿರುದ್ಧ ಇಸ್ರೇಲಿನ ಪೇಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಮಾಡಲಾಗಿದೆ ಎಂಬ ಸಂಗತಿ ಬಹಿರಂಗವಾಗಿ ಇಪತ್ತು ದಿನಗಳಾದರೂ, ಭಾರತ ಸರ್ಕಾರ ಆ ಕೃತ್ಯ ಎಸಗಿದ್ದು ಯಾರು? ಮತ್ತು ಯಾಕೆ? ಎಂಬ ಬಗ್ಗೆ ಈವರೆಗೆ ಬಾಯಿಬಿಟ್ಟಿಲ್ಲ! ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸೆಕ್ಯುರಿಟಿ ಲ್ಯಾಬ್ ಮತ್ತು ಅಮೆರಿಕದ ಸಿಟಿಜನ್ ಲ್ಯಾಬ್ ಆಫ್ ಟೊರ್ಯಾಂಟೊ ವಿಧಿ ವಿಜ್ಞಾನ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಪೇಗಾಸಸ್ ಸ್ಪೈವೇರ್ ಬಳಸಿ ಮೊಬೈಲ್ ಮೂಲಕ ಗೂಢಚರ್ಯೆ ನಡೆಸಿರುವುದು ಖಚಿತವಾಗಿದ್ದರೂ, ಸರ್ಕಾರ ಮಾತ್ರ ಈವರೆಗೆ ಈ ಇಡೀ ಪ್ರಕರಣವನ್ನು ಅಲ್ಲಗಳೆಯುತ್ತಲೇ ಬಂದಿದೆ.
ಅಷ್ಟೇ ಅಲ್ಲ; ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ, ಚುನಾವಣಾ ಆಯೋಗದ ಆಯುಕ್ತರು, ಸಿಬಿಐ ತನಿಖಾ ಸಂಸ್ಥೆಯ ನಿರ್ದೇಶಕರು, ಸಂಸದರು, ಅತ್ಯಂತ ವೃತ್ತಿ ಘನತೆಗೆ ಹೆಸರಾದ ಪತ್ರಕರ್ತರು ಮುಂತಾದ ವ್ಯವಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸಂವಿಧಾನಿಕ ಹೊಣೆಗಾರಿಕೆ ಹೊತ್ತವರ ವಿರುದ್ಧ ನಡೆದಿರುವ ಈ ಬೇಹುಗಾರಿಕೆ ಪ್ರಕರಣವೇ ಸುಳ್ಳು. ದೇಶದ ಘನತೆಗೆ ಮಸಿ ಬಳಿಯಲು ಮತ್ತು ದೇಶ ಸಾಧಿಸುತ್ತಿರುವ ಭಾರೀ ಅಭಿವೃದ್ಧಿಯನ್ನು ಹಾದಿ ತಪ್ಪಿಸಲು ನಡೆಸಿದ ಅಂತಾರಾಷ್ಟ್ರೀಯ ಪಿತೂರಿ ಎಂದು ಸ್ವತಃ ಗೃಹ ಸಚಿವ ಅಮಿತ್ ಶಾ ಈ ಪ್ರಕರಣವನ್ನು ವ್ಯಾಖ್ಯಾನಿಸಿದ್ದಾರೆ!
ಬಿಜೆಪಿಯ ವರಿಷ್ಠರ ಈ ಮಾತನ್ನೇ ಅನುಸರಿಸಿ ಆ ಪಕ್ಷದ ಸಚಿವರು, ಸಂಸದರು, ಶಾಸಕರು ಮತ್ತು ಕೊನೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು ಕೂಡ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಇದೇ ಆರೋಪ ಮಾಡುತ್ತಿದ್ದಾರೆ. ಪೇಗಾಸಸ್ ಬೇಹುಗಾರಿಕೆ ಎಂಬುದೇ ಸುಳ್ಳು ಎಂಬುದು ಒಂದು ವರಸೆಯಾದರೆ, ದೇಶದ ವಿರುದ್ದ ಸಂಚು ನಡೆಸಿದವರ ಮೇಲೆ ಬೇಹುಗಾರಿಕೆ ಮಾಡಲು ಯಾವ ಸ್ಪೈವೇರ್ ಬಳಸಿದರೇನು? ದೇಶ ಮುಖ್ಯ ಅಲ್ಲವಾ? ಎಂಬ ಮೊಂಡುವಾದವೂ ಚಾಲ್ತಿಗೆ ಬಂದಿದೆ. ಹಾಗೇ ಇಂತಹ ಕೆಲಸಕ್ಕೆ ಬಾರದ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಮತ್ತಿತರ ಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿವೆಯಲ್ಲ.. ಇದು ಸರಿಯೇ? ದೇಶದ ಕರೋನಾ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಯಾರೋ ನಾಲ್ಕು ಜನರ ಫೋನ್ ಹ್ಯಾಕ್ ಆಗಿದೆ ಎಂದು ಇಡೀ ಸಂಸತ್ತಿನ ಕಲಾಪವನ್ನೇ ಬಲಿತೆಗೆದುಕೊಳ್ಳುವುದು ಎಂಥ ಮೂರ್ಖತನ ಎಂಬ ಮಾತುಗಳು ಸಾಮಾನ್ಯರ ನಡುವೆ ಕೇಳಿಬರುತ್ತಿವೆ.
ಹಾಗಾದರೆ, ಪೇಗಾಸಸ್ ಗೂಢಚಾರಿಕೆ ವಿಷಯ ಪತ್ರಕರ್ತರು, ವಕೀಲರು, ಬುದ್ಧಿಜೀವಿಗಳು ಮತ್ತು ಪ್ರತಿಪಕ್ಷಗಳ ನಾಯಕರಿಗೆ ಮಾತ್ರ ಗಂಭೀರ ವಿಷಯವಾಗಿ, ದೇಶದ ಜನಸಾಮಾನ್ಯರ ಪಾಲಿಗೆ ಅದೊಂದು ಚರ್ಚೆ ಮಾಡುವಂತಹ ವಿಷಯವೇ ಅಲ್ಲ ಎಂಬಂತೆ ಆಗಿರುವುದರ ಹಿಂದೆ ಯಾರ ವೈಫಲ್ಯವಿದೆ? ಒಂದು ದೇಶದ ಸಂವಿಧಾನಿಕ ಸ್ಥಾನಮಾನದಲ್ಲಿರುವ ಪ್ರಮುಖರು, ಸಾರ್ವಜನಿಕ ಅಭಿಪ್ರಾಯ ರೂಪಿಸುವ ಮಾಧ್ಯಮಗಳ ಪ್ರಮುಖರು, ಜನಪರ ಹೋರಾಟಗಾರರು, ಜನವಿರೋಧಿ ನೀತಿ-ನಿಲುವುಗಳು, ಕಾನೂನುಕಟ್ಟಳೆಗಳನ್ನು ಪ್ರಶ್ನಿಸುವ ವಕೀಲರು, ತನಿಖಾ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧವೇ ಬೇಹುಗಾರಿಕೆ ನಡೆದಿದೆ ಎನ್ನಲಾಗುತ್ತಿರುವಾಗ, ಅಂತಹದ್ದೊಂದು ಗಂಭೀರ ವಿಷಯ ದೇಶದ ಜನಸಾಮಾನ್ಯರು, ಬಹುತೇಕ ರಾಜಕೀಯ ಕಾರ್ಯಕರ್ತರ ಪಾಲಿಗೆ ಕನಿಷ್ಟ ಚರ್ಚಿಸಬೇಕಾದ ಸಂಗತಿ ಕೂಡ ಅಲ್ಲ ಎಂಬಂತಹ ಅಭಿಪ್ರಾಯಕ್ಕೆ ಕಾರಣವಾಗಿದೆ ಎಂದರೆ, ಅದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೇ ಸರಿ.
ಹಾಗೆ ನೋಡಿದರೆ, ಪೇಗಾಸಸ್ ಬೇಹುಗಾರಿಕೆಯ ವಿಷಯದ ಕುರಿತು ಈಗಾಗಲೇ ಫ್ರಾನ್ಸ್, ಅಮೆರಿಕ ಮತ್ತು ಸ್ವತಃ ಪೇಗಾಸಸ್ ಸ್ಪೈವೇರ್ ತಯಾರಿಸುವ ಎನ್ ಎಸ್ ಒ ಕಂಪನಿಯ ಮೂಲ ಇಸ್ರೇಲಿನಲ್ಲಿ ಕೂಡ ತನಿಖೆ ಆರಂಭವಾಗಿದೆ. ಆ ಕಾರಣದಿಂದಾಗಿ ಎನ್ ಎಸ್ ಒ ಸಂಸ್ಥೆಯ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದೆ ಮತ್ತು ಅದರ ಪರಿಣಾಮವಾಗಿ ಆ ಸಂಸ್ಥೆ ಈಗಾಗಲೇ ಹಲವು ದೇಶಗಳೊಂದಿಗೆ ಪೇಗಾಸಸ್ ಬಳಕೆ ವಿಷಯದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಹಿಂದೆ ಸರಿದಿದೆ. ಹಾಗೇ ವಿವಿಧ ದೇಶಗಳಿಗೆ ದೇಶದ ಭದ್ರತೆಯ ವಿಷಯದಲ್ಲಿ ಬೇಹುಗಾರಿಕೆಗಾಗಿ ತಾನು ಪೇಗಾಸಸ್ ಸ್ಪೈವೇರ್ ಮಾರಾಟ ಮಾಡಿರುವುದನ್ನು ಕೂಡ ಆ ಸಂಸ್ಥೆ ಈ ಪೇಗಾಸಸ್ ಲೀಕ್ಸ್ ಹೊರಬಿದ್ದ ಆರಂಭದಲ್ಲಿಯೇ ಒಪ್ಪಿಕೊಂಡಿದೆ.
ಈಗಿರುವ ಪ್ರಶ್ನೆ, ಒಂದು ಮೊಬೈಲ್ ಮೇಲೆ ಈ ಸ್ಪೈವೇರ್ ಬಳಸಲು ಎನ್ ಎಸ್ ಒ ಕಂಪನಿಗೆ ಸುಮಾರು 55,000 ಡಾಲರ್(ಸುಮಾರು 50 ಲಕ್ಷ ರೂ.) ಪಾವತಿಸಬೇಕಾದ ಪರಿಸ್ಥಿತಿಯಲ್ಲಿ, ಕನಿಷ್ಟ 300(ನಿಖರವಾಗಿ ಆ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಿರಬಹುದು!) ಮಂದಿ ಭಾರತೀಯರ ಮೊಬೈಲ್ ಗಳ ಮೇಲೆ ಗೂಢಚಾರಿಕೆ ನಡೆಸಲು ಸುಮಾರು 150 ಕೋಟಿ ರೂ. ನಷ್ಟು ಅಗಾಧ ಮೊತ್ತವನ್ನು ತೆತ್ತು ಗೂಢಚಾರಿಕೆ ನಡೆಸಿದವರು ಯಾರು? ಮತ್ತು ಯಾವ ಉದ್ದೇಶಕ್ಕೆ ಎಂಬುದು. ಸದ್ಯ ಪೇಗಾಸಸ್ ಸ್ಪೈವೇರ್ ಬಳಕೆಯಾಗಿದೆ ಎನ್ನಲಾಗುತ್ತಿರುವ ಭಾರತೀಯರ ಪಟ್ಟಿಯಲ್ಲಿ ಬಹುತೇಕರು ಆಡಳಿತರೂಢ ಬಿಜೆಪಿಯ ಪರ ಕೆಲಸ ಮಾಡಲು ನಿರಾಕರಿಸಿದ, ಅಥವಾ ಮೊದಲು ನಿಷ್ಪಕ್ಷಪಾತವಾಗಿದ್ದು ಒಂದು ಹಂತದ ಬಳಿಕ ದಿಢೀರನೇ ಆಳುವ ಪಕ್ಷದ ಪರ ವಾಲಿದ ಸಂವಿಧಾನಿಕ ಸ್ಥಾನದಲ್ಲಿದ್ದವರು, ಕಾನೂನು ಹೋರಾಟದ ಮೂಲಕ ಬಿಜೆಪಿ ಮತ್ತು ಅದರ ನೀತಿಗಳ ವಿರುದ್ಧ ಹೋರಾಡುತ್ತಿರುವ ವಕೀಲರು, ಪತ್ರಿಕಾವೃತ್ತಿಯಲ್ಲಿ ಎಂದೂ ಬಿಜೆಪಿ ಮತ್ತು ಅದರ ಹಿಂದುತ್ವ ಅಜೆಂಡಾದ ಪರ ವಕಾಲತು ವಹಿಸದೇ ಇರುವವರು, .. ಹೀಗೆ ಆಡಳಿತ ಪಕ್ಷದ ತಾಳಕ್ಕೆ ಕುಣಿಯದವರೇ ಹೆಚ್ಚಿದ್ದಾರೆ. ಹಾಗಾಗಿ ಗೂಢಚಾರಿಕೆ ನಡೆಸಿದವರು ಯಾರು ಮತ್ತು ಅವರ ಉದ್ದೇಶವೇನು ಎಂಬುದಕ್ಕೆ ಮೇಲ್ನೋಟಕ್ಕೆ ಸಾಕಷ್ಟು ಸಂಗತಿಗಳು ದಿಕ್ಕು ತೋರುತ್ತಿವೆ.
ಒಂದು ಪಕ್ಷದ ವಿರುದ್ಧ ಅಭಿಪ್ರಾಯ ಹೊಂದಿರುವುದನ್ನು, ಒಂದು ರಾಜಕೀಯ ಸಿದ್ಧಾಂತದ ವಿರುದ್ಧ ಧೋರಣೆಯನ್ನು ದೇಶದ ವಿರುದ್ಧದ ಅಭಿಪ್ರಾಯ, ದೇಶದ ವಿರುದ್ಧದ ಧೋರಣೆ ಎಂಬಂತೆ ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಾಗಾಗಿ ತನ್ನ ನೀತಿ-ನಿಲುವು, ಆಡಳಿತ ವೈಖರಿ ಒಪ್ಪದ, ತನ್ನ ಆಮಿಷ, ಪ್ರಲೋಭನೆಗಳಿಗೆ ಬಲಿಯಾಗದ ಹೋರಾಟಗಾರರು, ಪತ್ರಕರ್ತರನ್ನು ಹಲವು ದಾಳಗಳನ್ನು ಪ್ರಯೋಗಿಸಿ ಮಣಿಸುವ, ಬಾಯಿ ಮುಚ್ಚಿಸುವ, ವೃತ್ತಿಬದುಕನ್ನು ಮುಚ್ಚಿಹಾಕುವ ಮತ್ತು ಅದಾವುದೂ ಸಾಧ್ಯವಾಗದೇ ಹೋದರೆ, ದೇಶದ್ರೋಹದಂತಹ ಪ್ರಕರಣ ಹೂಡಿ ಜೈಲಿಗೆ ತಳ್ಳುವ ವರಸೆಯನ್ನು ರೂಢಿಸಿಕೊಂಡಿದೆ. ಪೇಗಾಸಸ್ ಕೂಡ ಅಂತಹ ಒಂದು ವರಸೆಯ ಅಸ್ತ್ರ ಎಂಬುದು ಬಹುತೇಕ ಇದೀಗ ಖಚಿತವಾಗತೊಡಗಿದೆ.
ಈ ನಡುವೆ, ಈ ಕುರಿತ ನಾಲ್ಕು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಕೂಡ, ನಿಜವಾಗಿಯೂ ಅಂತಹದ್ದು ನಡೆದಿದ್ದರೆ ಇದು ಅತ್ಯಂತ ಗಂಭೀರ ವಿಷಯ ಎಂದು ಹೇಳಿದ್ದು, ದೂರುದಾರರು ಈವರೆಗೆ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ. ಆದರೆ, ಅರ್ಜಿದಾರರು ಎಫ್ ಐಆರ್ ದಾಖಲಿಸಲು ಪೇಗಾಸಸ್ ಗೂಢಚರ್ಯೆ ಸಂಬಂಧಪಟ್ಟಂತೆ ಬಹುತೇಕ ಮಾಧ್ಯಮ ವರದಿಗಳನ್ನು ಹೊರತುಪಡಿಸಿ ಉಳಿದ ಸಾಕ್ಷ್ಯಾಧಾರಗಳಿಲ್ಲ. ಆ ಸಾಕ್ಷ್ಯಗಳು ಸರ್ಕಾರಗಳನ್ನು ಹೊರತುಪಡಿಸಿ ಉಳಿದವರಿಗೆ ಲಭ್ಯವೂ ಇಲ್ಲ. ಹಾಗಾಗಿ ಈ ಬಗ್ಗೆ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ತನಿಖೆಯಾಗಬೇಕು ಮತ್ತು ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ.
ಇಷ್ಟಾಗಿಯೂ ಕೂಡ, ಪ್ರತಿಪಕ್ಷಗಳಿಗೆ ಈ ವಿಷಯವನ್ನು ಜನಸಾಮಾನ್ಯರಿಗೆ ತಲುಪಿಸುವುದು ಸಾಧ್ಯವಾಗಿಲ್ಲ. ಹಾಗೆ ನೋಡಿದರೆ ಪೇಗಾಸಸ್ ಮಾತ್ರವಲ್ಲ; ದೇಶದ ಶೇ.65ರಷ್ಟು ಜನರ ನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುವ ಮೂರು ಕೃಷಿ ಕಾಯ್ದೆಗಳ ವಿಷಯದಲ್ಲಿ ಕೂಡ ಬಹುಸಂಖ್ಯಾತ ಜನಸಮುದಾಯದ ವಿಶ್ವಾಸ ಗಳಿಸುವುದು ಸಾಧ್ಯವಾಗಿಲ್ಲ. ರಾಫೇಲ್ ಬಹುಕೋಟಿ ಹಗರಣದ ವಿಷಯದಲ್ಲಿ ಕೂಡ ಪ್ರತಿಪಕ್ಷಗಳಿಗೆ ವರ್ಷಗಳ ಬಳಿಕವೂ ಜನರ ವಿಶ್ವಾಸ ಗಳಿಸಲು ಎಡವಿದವು ಎಂಬುದು ಗೊತ್ತಿರುವ ಸಂಗತಿ.
ಹಾಗಾದರೆ, ಪ್ರತಿಪಕ್ಷಗಳು ಎಡವುತ್ತಿರುವುದು ಎಲ್ಲಿ? ಕಾಂಗ್ರೆಸ್ ಒಂದೇ ಅಲ್ಲದೆ ಹಲವು ಪಕ್ಷಗಳು ಸಂಘಟಿತರಾಗಿ ಸಂಸತ್ತಿನ ಒಳಹೊರಗೆ ಹೋರಾಟ ಕಟ್ಟುವ ವಿಷಯದಲ್ಲಿ ಬಹುಶಃ ಹಿಂದೆಂದಿಗಿಂತಲೂ ಈಗ ಒಗ್ಗಟ್ಟಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಮೂಲೆಮೂಲೆಗೆ ತಲುಪವುದು ಕೂಡ ಸಾಧ್ಯವಿದೆ. ದೇಶದ ಸರ್ಕಾರದ ಆಡಳಿತ ವರಸೆಯಲ್ಲಿ ಎಲ್ಲವೂ ಪಾರದರ್ಶಕವಾಗಿಲ್ಲ ಮತ್ತು ಆಡಳಿತ ಜನಸಾಮಾನ್ಯರ ಪರವಿಲ್ಲ ಎಂಬುದು ಬಹುತೇಕ ಮೋದಿಯವರ ಆರಂಭಿಕ ಆಡಳಿತ ವರ್ಷಗಳಿಂದ ಈ ಏಳು ವರ್ಷಗಳಲ್ಲೆ ಮತ್ತೆ ಮತ್ತೆ ಸಾಬೀತಾಗುತ್ತಲೇ ಬಂದಿದೆ ಮತ್ತು ಜನಸಾಮಾನ್ಯರ ನಿತ್ಯದ ಬದುಕಿಗೂ ಕೂಡ ಆ ಬಿಸಿ ತಟ್ಟಿದೆ.
ಹಾಗಿದ್ದೂ ಪ್ರತಿಪಕ್ಷಗಳು ಪ್ರತಿ ವಿಷಯದಲ್ಲಿಯೂ ವಿಷಯಗಳನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಸೋಲುತ್ತಿವೆ. ಅದು ರಾಫೇಲ್ ಇರಬಹುದು, ಕೃಷಿ ಕಾಯ್ದೆ ಇರಬಹುದು, ನೋಟ್ ಬ್ಯಾನ್ ಇರಬಹುದು, ಜಿಎಸ್ ಟಿ ಇರಬಹುದು, ಕರೋನಾ ನಿರ್ವಹಣೆ ಇರಬಹುದು,.. ಇದೀಗ ಪೇಗಾಸಸ್ ಇರಬಹುದು, ಪ್ರತಿ ವಿಷಯದಲ್ಲಿಯೂ ಪ್ರತಿಪಕ್ಷಗಳ ಆರೋಪಗಳಿಗೆ ದೇಶಭಕ್ತಿ ಮತ್ತು ಹಿಂದುತ್ವದ ಗುರಾಣಿ ಹಿಡಿದು ಬಿಟ್ಟಬಾಣಗಳೆಲ್ಲವನ್ನೂ ತಿರುಗುಬಾಣವಾಗಿಸುವಲ್ಲಿ ಬಿಜೆಪಿ ಮತ್ತು ಅದರ ಪ್ರಾಪಗಾಂಡಾ ಪಡೆಗಳು ಯಶಸ್ವಿಯಾಗುತ್ತಲೇ ಇವೆ. ಆದಾಗ್ಯೂ ಪ್ರತಿಪಕ್ಷಗಳ ಭಾಷೆ ಮತ್ತು ಪರಿಭಾಷೆಯಲ್ಲಿ ಮಾತ್ರ ಈ ಏಳು ವರ್ಷಗಳಲ್ಲಿ ಬದಲಾವಣೆಯಾಗಿಲ್ಲ.
ವಾಸ್ತವವಾಗಿ ತಾವು ಹೂಡುವ ಪ್ರತಿ ಬಾಣಕ್ಕೂ ದೇಶಭಕ್ತಿ ಮತ್ತು ಹಿಂದುತ್ವದ ಗುರಾಣಿ ಹಿಡಿದು ದೇಶವ್ಯಾಪಿ ಒಂದು ವ್ಯಾಪಕ ಪ್ರತಿತಂತ್ರದ ಸಂಕಥನದ ಮೂಲಕ ಪ್ರತಿಕ್ರಿಯಿಸುವ ಬಿಜೆಪಿಗೆ ನಿಜವಾಗಿಯೂ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳಿಗೆ ದೊಡ್ಡ ಸವಾಲಾಗಿದೆ. ಇದೀಗ ಪೇಗಾಸಸ್ ಅಂತಹ ವೈಫಲ್ಯದ ಪರಂಪರೆಗೆ ಹೊಸ ಸೇರ್ಪಡೆ.