ಶತಕ ವಂಚಿತ ಶುಭಮನ್ ಗಿಲ್ ಹೋರಾಟ ಹಾಗೂ ತವಾಟಿಯಾ ಕೊನೆಯ 2 ಎಸೆತಗಳಲ್ಲಿ ಸಿಡಿಸಿದ ಸಿಕ್ಸರ್ ಗಳ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ 6 ವಿಕೆಟ್ ಜಯಭೇರಿ ಬಾರಿಸಿತು.
ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಒಡ್ಡಿದ 190 ರನ್ ಗಳ ಕಠಿಣ ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು. ಈ ಮೂಲಕ ಗುಜರಾತ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಪಡೆಯಿತು.
ಗುಜರಾತ್ ತಂಡ ಆರಂಭಿಕ ಆಘಾತಕ್ಕೆ ಒಳಗಾದರೂ ಗಿಲ್ ಮತ್ತು ಸಾಯಿ ಸುದರ್ಶನ್ 2ನೇ ವಿಕೆಟ್ ಗೆ 101 ರನ್ ಜೊತೆಯಾಟ ನಿಭಾಯಿಸಿದರು. ಸುದರ್ಶನ್ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 35 ರನ್ ಗಳಿಸಿ ಔಟಾದರು.
ಗಿಲ್ 59 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 96 ರನ್ ಗಳಿಸಿದ್ದಾಗ ರಬಡಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ 4 ರನ್ ಗಳಿಂದ ಶತಕ ವಂಚಿತರಾದರು. ಕೊನೆಯ ಓವರ್ ನಲ್ಲಿ 18 ರನ್ ಗಳಿಸಬೇಕಾದ ಒತ್ತಡವಿದ್ದಾಗ 27 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಔಟಾದರು.
ಕೊನೆಯ 2 ಎಸೆತಗಳಲ್ಲಿ 12 ರನ್ ಗಳಿಸಬೇಕಾದ ಅಸಾಧ್ಯ ಗುರಿ ಮುಂದಿದ್ದಾಗ ರಾಹುಲ್ ತವಾಟಿಯಾ ಒಡಿಯಾನ್ ಸ್ಮಿತ್ ಎಸೆತದಲ್ಲಿ ಸತತ 2 ಸಿಕ್ಸರ್ ಸಿಡಿಸಿದ ತವಾಟಿಯಾ ಗುಜರಾತ್ ಗೆ ರೋಚಕ ಜಯ ತಂದುಕೊಟ್ಟರು.